ಬಿಜೆಪಿ ಕ್ಷಮೆ ಕೇಳಲೇ ಬೇಕು: ಸೈಲ್

ಸತೀಶ್ ಸೈಲ್
Advertisement

ಕಾರವಾರ: ಪರೇಶ ಮೇಸ್ತಾ ಸಾವಿನಲ್ಲಿ ಅನಗತ್ಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಬಳಕೆ ಮಾಡಿ ರಾಜಕೀಯ ಮಾಡಿದ್ದ ಬಿಜೆಪಿಯವರು ಇದೀಗ ಕ್ಷಮೆಯಾಚಿಸುವಂತೆ ಮಾಜಿ ಶಾಸಕ ಸತೀಶ್ ಸೈಲ್ ಆಗ್ರಹಿಸಿದ್ದಾರೆ.
ಕಾರವಾರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೇಶ ಮೇಸ್ತಾ ಹತ್ಯೆ ಪ್ರಕರಣದಲ್ಲಿ ಅನಗತ್ಯವಾಗಿ ಸಿದ್ದರಾಮಯ್ಯನವರ ಹೆಸರು ಬಳಕೆ ಮಾಡಿದ ಬಿಜೆಪಿಗರು ಸದನದಲ್ಲಿ, ಮಾಧ್ಯಮಗಳ ಹೇಳಿಕೆಯಲ್ಲಿ ಸಿದ್ದರಾಮಯ್ಯ ಅವರೇ ಮೇಸ್ತಾ ಸಾವಿನ ತನಿಖೆ ದಿಕ್ಕುತಪ್ಪಿಸಲು ಕಾರಣ ಎಂದು ಆರೋಪಿಸಿದ್ದಾರೆ. ಸಾಕ್ಷ್ಯ ಪುರಾವೆ ಇಲ್ಲದೆ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಪರೇಶ್ ಮೇಸ್ತಾ ಸಾವಿನ ತನಿಖೆಯನ್ನು ಸಿಒಡಿ ನೀಡಿದ್ದರೂ ನಂಬಿಕೆ ಇಲ್ಲ ಎಂದು ಬಿಜೆಪಿಗರು ಪ್ರತಿಭಟನೆ ನಡೆಸಿರುವುದಕ್ಕೆ ಸಿಬಿಐಗೆ ಪ್ರಕರಣ ಹಸ್ತಾಂತರಿಸಲಾಗಿತ್ತು. ಆದರೆ, ಇದೀಗ ಸಿಬಿಐ ನೀಡಿರುವ ಸಹಜ ಸಾವಿನ ವರದಿಯನ್ನು ತಿರಸ್ಕರಿಸುತ್ತಿರುವುದು ಬಿಜೆಪಿಯ ಬಣ್ಣ ಬಯಲಾಗುತ್ತಿದೆ. ಬಿಜೆಪಿ ಮುಖಂಡರಿಗೆ ವರದಿ ಬಗ್ಗೆ ನಂಬಿಕೆ ಇಲ್ಲದೆ ಇದ್ದಲ್ಲಿ ಅವರದೇ ಸರ್ಕಾರ ಇದ್ದು ಕೂಡಲೇ ಮರು ಪರಿಶೀಲನೆಗೆ ಹಾಕಬೇಕು. ಇಲ್ಲವೇ ಪರೇಶ ಮೇಸ್ತಾ ತಂದೆಯ ಮೂಲಕ ಅರ್ಜಿ ಸಲ್ಲಿಸಬೇಕು. ಸಿಬಿಐ ವರದಿ ಒಪ್ಪಿಕೊಳ್ಳುವುದಾದರೆ ಜನರಲ್ಲಿ ಗೊಂದಲ ಸೃಷ್ಟಿಸಿದ್ದಕ್ಕೆ ಮತ್ತು ಶಾಂತಿಯುತ ಜಿಲ್ಲೆಯಲ್ಲಿ ಗಲಭೆಗಳಿಗೆ ಕಾರಣವಾಗಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂದರು.