ಹುಬ್ಬಳ್ಳಿ : ಮಂಗಳವಾರವಷ್ಟೇ 189 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದ ಬಿಜೆಪಿ ಹೈಕಮಾಂಡ್ ಬುಧವಾರ ರಾತ್ರಿ 11 ಗಂಟೆಗೆ ಎರಡನೇ ಪಟ್ಟಿ ರಿಲೀಸ್ ಮಾಡಿದೆ.
ಎರಡನೇ ಪಟ್ಟಿಯಲ್ಲಿ ಒಟ್ಟು 23 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ.
ಮೊದಲ ಪಟ್ಟಿಯಲ್ಲಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಹೆಸರು ಪ್ರಕಟವಾಗಿರಲಿಲ್ಲ.
ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಶೆಟ್ಟರ ಅವರು ಬುದವಾರ ದೆಹಲಿಗೆ ತೆರಳಿ ಮಾತುಕತೆ ನಡೆಸಿದ್ದರು.
ಮಾತುಕತೆ ಬಳಿಕ ಶೆಟ್ಡರ ಅವರು ನಾನು ಹೇಳಬೇಕಾದ್ದನ್ನು ಹೈಕಮಾಂಡ್ ಗೆ ವಿವರಿಸಿದ್ದೇನೆ. ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಪ್ರಕಟವಾಗುವ ಭರವಸೆ ಇದೆ ಎಂದು ಶೆಟ್ಟರ ಹೇಳಿದ್ದರು. ಆದರೆ, ಬುಧವಾರ ಪ್ರಕಟಗೊಂಡ ಎರಡನೇ ಪಟ್ಟಿಯಲ್ಲಿ ಶೆಟ್ಟರ ಹೆಸರು ಪ್ರಕಟಿಸಿಲ್ಲ ದಿರುವುದು ಶೆಟ್ಟರ ಬೆಂಬಲಿಗರಿಗೆ ತೀವ್ರ ನಿರಾಸೆಯಾಗಿದೆ.
ಕಲಘಟಗಿಗೆ ನಾಗರಾಜ ಛಬ್ಬಿಗೆ ಟಿಕೆಟ್
ನಾಲ್ಕು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ನಾಗರಾಜ ಛಬ್ಬಿ ಅವರಿಗೆ ಕಲಘಟಗಿ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿದೆ.
ಕಲಘಟಗಿ ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಅವರಿಗೆ ಟಿಕೆಟ್ ಕೈ ತಪ್ಪಿದೆ. ವಯಸ್ಸಿನ ಕಾರಣಕ್ಕೆ ನಿಂಬಣ್ಣವರ ಅವರಿಗೆ ಹೈಕಮಾಂಡ್ ಟಿಕೆಟ್ ನಿರಾಕರಣೆ ಮಾಡಿದೆ ಎಂದು ಹೇಳಲಾಗಿದೆ.