ಬಿಜೆಪಿ ಅಭ್ಯರ್ಥಿ ಪಿ.ರಾಜೀವ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

Advertisement

ಬೆಳಗಾವಿ: ಕುಡಚಿ ಮತಕ್ಷೇತ್ರದಲ್ಲಿ ಏ. 29ರಂದು ನಡೆದ ಬಿಜೆಪಿ ಸಮಾವೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಸೇರಿಸಲು ಹಣ ಹಂಚಿಕೆ ಮಾಡಿ ಆಮಿಷ ತೋರಿಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪಿ.ರಾಜೀವ ಸೇರಿದಂತೆ ಇಬ್ಬರ ವಿರುದ್ಧ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ.
ಪ್ರಧಾನ ಮಂತ್ರಿಗಳು ಭಾಗವಹಿಸಿದ್ದ ಬಿಜೆಪಿ ಪಕ್ಷದ ಬಹಿರಂಗ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಉದ್ದೇಶದಿಂದ ಮುಗಳಖೋಡ ಪಟ್ಟಣದ ಬಳಿ ಏ. 29ರಂದು ಹಣ ಹಂಚಿಕೆ ಮಾಡಿ ಆಮಿಷ ತೋರಿಸಲಾಗಿದೆ ಎಂದು ಖಾಸಗಿ ಟಿವಿ ವರದಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿನ ಪ್ರತಿಕ್ರಿಯೆ ಆಧರಿಸಿ ದೂರು ನೀಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಚಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ರಾಜೀವ್ ಹಾಗೂ ಮುಗಳಖೋಡದ ಹಾಲಪ್ಪ ಹನಮಂತ ಶೇಗುಣಸಿ ಎಂಬುವರ ವಿರುದ್ಧ ಸರಕಾರಿ ಅಧಿಕಾರಿ ಅಭಿಷೇಕ್ ಪಾಂಡೆ ಅವರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ನೀಡಿದ್ದಾರೆ.