ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಬರೀ ಭರವಸೆ ಸರ್ಕಾರ, ಬಿ ರಿಪೋರ್ಟ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ಬಂದಿದ್ದು ತುಂಬಾ ಸಂತೋಷವಾಗಿದೆ. ಈ ವೇಳೆ ಅವರು ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿರುವ ಭರವಸೆಗಳ ಬಗ್ಗೆ ಹೇಳಬೇಕು ಎಂದು ಆಗ್ರಹಿಸಿದರು.
ಯುವಕರಿಗೆ ಉದ್ಯೋಗಕ್ಕೆ ಏನು ಕ್ರಿಯಾ ಯೋಜನೆ ರೂಪಿಸಿದ್ದಾರೆ?, ರೈತರ ಆದಾಯವನ್ನ ಏಕೆ ದ್ವಿಗುಣಗೊಳಿಸಲಿಲ್ಲ?, ಗ್ಯಾಸ್ ಬೆಲೆಯನ್ನು ಏಕೆ ಇಳಿಸಲಿಲ್ಲ?, ಭ್ರಷ್ಟಾಚಾರದ ಬಗ್ಗೆ, ಪಿಎಸ್‌ಐ ಹಗರಣದ ಬಗ್ಗೆ ಹಾಗೂ ಗುತ್ತಿಗೆದಾರ ಕೆಂಪಣ್ಣನ ಅರ್ಜಿಗೆ ಇನ್ನೂ ಏಕೆ ಉತ್ತರ ನೀಡಿಲ್ಲ. ಯತ್ನಾಳ ಹಾಗೂ ನಿರಾಣಿ ಹೇಳಿಕೆ ಬಗ್ಗೆ ಉತ್ತರ ನೀಡಿದರೆ ಒಳ್ಳೆಯದು. ನಾನು ತಿನ್ನುವುದಿಲ್ಲ… ತಿನ್ನಲು ಬಿಡುವುದಿಲ್ಲ ಎನ್ನುವ ಮೋದಿಯವರು ಈಗ ತಿನ್ನುತ್ತಿರುವವರ ಏನು ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಮೋದಿ ಬಹಿರಂಗ ಪಡಿಸಬೇಕು ಎಂದರು.
ಪದೇ ಪದೇ ರಾಜ್ಯಕ್ಕೆ ಪ್ರಧಾನ ಮಂತ್ರಿಯವರು ಬುರುತ್ತಿದ್ದಾರೆ ಏನಿರಬಹುದು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ, ರಾಜ್ಯದಲ್ಲಿ ಅತಿವೃಷ್ಟಿಯಾದಾಗ ರಾಜ್ಯಕ್ಕೆ ಮೋದಿ ಬಂದು ಏನನ್ನು ಘೋಷಣೆ ಮಾಡಲಿಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಚಾಕಲೇಟ್ ಕೊಡಲು ಬರುತ್ತಿದ್ದಾರೆ. ಮೋದಿ ಬಂದರೆ ಇಲ್ಲ ಏನು ಆಗುವುದಿಲ್ಲ ಎಂದು ಹೇಳಿದರು.
ಬಿಜೆಪಿಗರು ಪದೇ ಪದೇ ಮೋದಿಯವರನ್ನೆ ಏಕೆ ಕರೆಸುತ್ತಾರೆ? ಅವರ ಪಕ್ಷದಲ್ಲಿ ಬೇರೆ ನಾಯಕರಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರ ಪಾರ್ಟಿ, ಅವರ ನಾಯಕರು ಅವರು ಯಾರನ್ನಾದರೂ ಕರೆಸಿಕೊಳ್ಳಲಿ ನಮಗೆನೂ ಆಗಲ್ಲ ಎಂದರು.
ಅಲ್ಪಸಂಖ್ಯಾತರಿಗೆ ಕೊಡಬಾರದ ನೋವನ್ನು ಕೊಟ್ಟು, ಊರು, ದೇಶ ಬಿಡುವಂತೆ ಮಾಡಿ ಈಗ ಅವರ ಬಗ್ಗೆ ಬಿಜೆಪಿಗರು ಮೃದುದೋರಣೆ ತೋರುತ್ತಿದ್ದಾರೆ. ಅಲ್ಪಸಂಖ್ಯಾತರೆಲ್ಲರೂ ಇಡೀ ವಿಶ್ವದಾದ್ಯಂತ ಒಗ್ಗಟ್ಟಾಗಿ ಇವರಿಗೆ ಉಗಿಯುತ್ತಿದ್ದಾರೆ. ಹೀಗಾಗಿ ಮೃದುದೋರಣೆ ತೋರುತ್ತಾರೆ. ಮೊದಲು ಜನರಿಗೆ ತೊಂದರೆ ಕೊಟ್ಟು, ಜೈಲಿಗೆ ಹಾಕುವುದೇ ಬಿಜೆಪಿಗರ ಸಾಧನೆ ಎಂದು ಹೇಳಿದರು.