ಹುಬ್ಬಳ್ಳಿ: ರಾಜ್ಯ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಅಲ್ಲಿನ ಕೆಲ ವ್ಯಕ್ತಿ, ಮುಖಂಡರಿಂದ ಆಂತರಿಕ ವಾತಾವರಣ ಹಾಳಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮೊದಲ ಬಾರಿ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ್ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದರು.
ಕಾಂಗ್ರೆಸ್ ನಾಯಕರ ಜೊತೆ ಹಲವು ವಿಷಯಗಳನ್ನು ಚರ್ಚೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಿದ್ದು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದರು. ಅಲ್ಲದೆ, ನಾನು ಮನಸ್ಸು ಮಾಡಿದ್ದರೆ ಮತ್ತೊಮ್ಮೆ ಮಂತ್ರಿ ಆಗಬಹುದಿತ್ತು. ಆದರೆ ಬಿಜೆಪಿ ವರಿಷ್ಠರ ಸೂಚನೆಯಂತೆ ಮಂತ್ರಿಸ್ಥಾನ ಬಿಟ್ಟುಕೊಟ್ಟು, ಎರಡು ವರ್ಷ ಕೇವಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಯನ್ನು ನಾನು ಕೇವಲ ಪಕ್ಷ ಎಂದು ನೋಡಿರಲಿಲ್ಲ. ಪರಿವಾರ ಎಂದು ಭಾವಿಸಿ ಕಟ್ಟಿ ಬೆಳಸಿದ್ದೆ. ಆದರೆ, ನಾನು ಕಟ್ಟಿ ಬೆಳೆಸಿದ ಮನೆಯಲ್ಲೇ ಗೌರವ ಸಿಗಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಬಿಜೆಪಿಗೆ ವಿದಾಯ ಹೇಳಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಯವತ್ತೂ ಅಧಿಕಾರಕ್ಕೆ ಹಪಾಹಪಿ ಪಟ್ಟವನಲ್ಲ. ಅಧಿಕಾರಕ್ಕಾಗಿ ಪಕ್ಷ ಬದಲಾವಣೆ ಮಾಡಿಲ್ಲ. ಜನರ ಸೇವೆಗೆ ಮತ್ತೊಂದು ಅವಕಾಶ ಕೊಡಿ ಎಂದು ಬಿಜೆಪಿ ವರಿಷ್ಠರನ್ನು ಕೇಳಿಕೊಂಡೆ. ಅಲ್ಲದೆ, ಆರು ತಿಂಗಳ ಬಳಿಕ ನಾನೇ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತಲೂ ಹೇಳಿದೆ. ಆದರೂ, ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ. ಬಿಜೆಪಿಯ ಕೆಲ ವ್ಯಕ್ತಿಗಳಿಂದ ವ್ಯವಸ್ಥೆ ಹಾಳಾಗುತ್ತಿದೆ. ಬಿಜೆಪಿಯಲ್ಲಿ 80 ವರ್ಷದವರು ರಾಜಕಾರಣ ಮಾಡಬಹುದು. ಆದರೆ, ನನಗೇಕೆ ಟಿಕೆಟ್ ತಪ್ಪಿದೆ ಅನ್ನೋದು ಅಸ್ಪಷ್ಟ.
ಈ ಎಲ್ಲ ವಾತಾವರಣದಿಂದ ಬಿಜೆಪಿಗೆ ವಿದಾಯ ಹೇಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದೇನೆ. ಬಹಳ ಗೌರವದಿಂದ ಕಾಂಗ್ರೆಸ್ ನಾಯಕರು ನನ್ನನ್ನು ಬರಮಾಡಿಕೊಂಡಿದ್ದಾರೆ. ಏ. 19ರಂದು ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ನನ್ನ ಬೆಂಬಲಿಗರನ್ನು ಒತ್ತಾಯವಾಗಿ ಹಿಡಿದಿಟ್ಟುಕೊಂಡಿದ್ದಾರೆ. ಅದು ಬಹಳ ದಿನ ನಡೆಯೋದಿಲ್ಲ. ಯಾರು ಏನೇ ಮಾಡಿದರೂ ನನ್ನ ಬೆಂಬಲಿಗರು ನನ್ನ ಜೊತೆಯೇ ಇರುತ್ತಾರೆ ಮತ್ತು ಬರುತ್ತಾರೆ ಎಂದು ರಾಜ್ಯ ನಾಯಕರ ವಿರುದ್ಧ ಗುಡುಗಿದರು.