ಬಿಜೆಪಿಗಲ್ಲ ಕಾಂಗ್ರೆಸ್ ಪಕ್ಷಕ್ಕೆ‌ 65 ಸ್ಥಾನ ಸಿಗಲಿದೆ: ಸಿಎಂ

Advertisement

ಹುಬ್ಬಳ್ಳಿ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 65 ಸ್ಥಾನ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆದರ್ಶನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ ೬೫ ಸ್ಥಾನ ಸಿಗಲಿದೆ ಎಂಬುದು ಕಾಂಗ್ರೆಸ್ ನ ತಪ್ಪು ಲೆಕ್ಕಾಚಾರ. ಬಹುಶಃ ಕಾಂಗ್ರೆಸ್ ಗೆ ೬೫ ಸಿಗಲಿದೆ ಎಂಬುದನ್ನು ಕೆಪಿಸಿಸಿ ಅಧ್ಯಕ್ಷೆ ಡಿ.ಕೆ. ಶಿವಕುಮಾರ್ ತಪ್ಪಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಲೇವಡಿ ಮಾಡಿದರು.
ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ನಾವು ಪೂರ್ಣ ಬಹುಮತದಿಂದ ಅಧಿಕಾರ ಬರುವ ವಿಶ್ವಾಸವಿದೆ ಎಂದರು.
ಪ್ರದಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ರಾಜ್ಯದ ರೈಲ್ವೆ‌, ಬಂದರು, ಇನ್ನಿತರ ಮೂಲಸೌಕರ್ಯ ಗಳಿಗೆ ಅಪಾರ ಹಣ ನೀಡಿದ್ದಾರೆ. ಆ ಕಾರಣಕ್ಕೆ ಒಂದಲ್ಲ ಒಂದು ಉದ್ಘಾಟನೆ ಕಾರ್ಯಕ್ರಮಗಳಿಗೆ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಾ. ೧೨ ರಂದು ಧಾರವಾಡ ಐಐಟಿ ಉದ್ಘಾಟನೆ ಹಾಗೂ ಹುಬ್ಬಳ್ಳಿ ಜಯದೇವ ಹ್ರದ್ರೋಗ ಆಸ್ಪತ್ರೆ ನಿರ್ಮಾಣ ಕ್ಕೆ ಸಂಕುಸ್ಥಾಪನೆ ನೆರವೇರಿಸುವರು ಎಂದರು.
ಸಂಸದೆ ಸುಮಲತಾ ಅವರು ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಜೆ.ಪಿ. ನಡ್ಡಾ ಹಾಗೂ ಇನ್ನಿತರ ನಾಯಕರೊಂದಿಗೆ ಚರ್ಚೆ‌ ನಡೆಸಿದ್ದಾರೆ. ಅವರು ರಾಜಕೀಯದ ಮುಂದಿನ ನಡೆ ಇಂದು ಪ್ರಕಟಿಸಲಿದ್ದಾರೆ. ಕಾದು ನೋಡೋಣ ಎಂದು ಹೇಳಿದರು.
ಕಳಸಾ ಬಂಡೂರಿ ನಾಲಾ ಕಾಮಗಾರಿಯು ಟೆಂಡರ್ ಪ್ರಕ್ರಿಯೆ ಅಂತಿಮ‌ ಹಂತದಲ್ಲಿದ್ದು, ಚುನಾವಣೆ ಘೋಷಣೆ ಪೂರ್ವ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.