ಬಿ. ಅರವಿಂದ
ಹುಬ್ಬಳ್ಳಿ: `ಚಿಗರಿ’ ಬಸ್‌ಗಳ ಪ್ರಯಾಣದ ಕುರಿತ ದೂರುಗಳ ಜೊತೆಗೆ ಬಿಆರ್‌ಟಿಎಸ್ ಬಸ್ ನಿಲ್ದಾಣಗಳಲ್ಲಿನ ಅವ್ಯವಸ್ಥೆ ಬಗ್ಗೆಯೂ ಸಾರ್ವಜನಿಕ ಅಪಸ್ವರ ಹೆಚ್ಚಲಾರಂಭಿಸಿದೆ. ಈ ನಿಲ್ದಾಣಗಳಲ್ಲಿ ನಿತ್ಯವೂ ಒಂದಲ್ಲ ಒಂದು ಕಿರಿಕಿರಿಯನ್ನು ಪ್ರಯಾಣಿಕರು ಅನುಭವಿಸಬೇಕಾಗಿದೆ ಎಂಬ ಬೇಸರ ವ್ಯಾಪಕವಾಗಿದೆ.
ಹಾಳಾಗಿರುವ ಸೆನ್ಸರ್‌ಗಳು, ಕಾರ್ಯನಿರ್ವಹಿಸದ ಬಾಗಿಲುಗಳು ಹಾಗೂ ಅವ್ಯವಸ್ಥೆಗಳನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವುದರಿಂದ ತುಂಬ ಅನಾನುಕೂಲಗಳು ಆಗುತ್ತಿವೆ ಎಂಬುದಾಗಿ ಜನತೆ ಆಪಾದಿಸುತ್ತಿದ್ದಾರೆ.
ಎಚ್‌ಡಿಬಿಆರ್‌ಟಿಎಸ್ ಸಂಸ್ಥೆಯ ಸ್ಮಾರ್ಟ್ ಪ್ರಯಾಣಿಕರ ಕಾರ್ಡ್ಗಳು ಹಾಗೂ ಮಾಸಿಕ ಪಾಸ್‌ಗಳ (ಇವೂ ಸ್ಮಾರ್ಟ್ ಕಾರ್ಡ್‌ಗಳೇ) ಬಳಕೆಯ ವಿಷಯದಲ್ಲಂತೂ ಪ್ರದಿ ದಿನ ಒಂದಲ್ಲ ಒಂದು ತಕರಾರು ಕಂಡು ಬರುತ್ತಲೇ ಇವೆ. ಅನೇಕ ಬಾರಿ ಸ್ಮಾರ್ಟ್ ಕಾರ್ಡ್‌ಗಳು ಲಾಕ್ ಆಗುತ್ತಿದ್ದು, ಜನಕ್ಕೆ ಬಹುದೊಡ್ಡ ತಲೆನೋವು ಉಂಟಾಗುತ್ತಿದೆ ಎಂಬ ದೂರುಗಳಿವೆ.
ಬಿಆರ್‌ಟಿಎಸ್ ನಿಲ್ದಾಣ ಪ್ರವೇಶಿಸುವಾಗ ಮತ್ತು ಹೊರಬರುವಾಗ ಟಿಕೆಟ್ ಅಥವಾ ಕಾರ್ಡ್ ಎರಡರಲ್ಲಿ ಯಾವುದೇ ಇದ್ದರೂ ಸ್ಕ್ಯಾನ್ ಮಾಡಬೇಕು. ಆಗ ಮಾತ್ರ ಪ್ರವೇಶ ಅಥವಾ ನಿರ್ಗಮನ ಬಾಗಿಲುಗಳು ತೆರೆದುಕೊಳ್ಳುತ್ತವೆ. ಇದು ತಾಂತ್ರಿಕವಾಗಿ ಜಾರಿಯಲ್ಲಿರುವ ಕ್ರಮ. ಆದರೆ ಸ್ಕ್ಯಾನ್ ಆಗದೇ ಇದ್ದರೆ ಪ್ರಯಾಣಿಕರು ಹೊರಬರುವುದೇ ಕಷ್ಟ. ಈಗ ಆಗುತ್ತಿರುವುದೂ ಅದೇ ಆಗಿದೆ.
ಅದರಲ್ಲೂ ಕಾರ್ಡ್‌ಗಳಂತೂ ಲಾಕ್ ಆಗಿಬಿಟ್ಟರೆ ಬಳಕೆದಾರರು ವಿಧಿಯಿಲ್ಲದೇ ಸಹಾಯಹಸ್ತ ಸಿಗುವವರೆಗೆ ಕಾಯಲೇಬೇಕು. ಟಿಕೆಟ್ ಸ್ಕ್ಯಾನ್ ಆಗದೇ ಇದ್ದರೆ ಒಬ್ಬರು ಬಾಗಿಲು ತೆರೆದು ಹಿಡಿದುಕೊಂಡು ಉಳಿದವರು ದಾಟಿ ಹೊರಗಾದರೂ ಬರಬಹುದು.
ಕಾರ್ಡ್ ಹೊಂದಿದ ಬಿಆರ್‌ಟಿ ಬಳಕೆದಾರರಿಗೆ ಈ ಅವಕಾಶವಿಲ್ಲ. ಏಕೆಂದರೆ ಈ ಪ್ರಿಪೇಯ್ಡ್ ಕಾರ್ಡ್‌ಗಳನ್ನು ಕಡ್ಡಾಯವಾಗಿ ಒಳಗೆ ಬರುವಾಗ ಮತ್ತು ಇಳಿದು ಹೊರಹೋಗುವಾಗ ಸ್ಕ್ಯಾನ್ ಮಾಡಲೇಬೇಕು. ಅಲ್ಲಿನ ಸಿಬ್ಬಂದಿ ಅಥವಾ ಭದ್ರತಾ ಗಾರ್ಡ್ ನಿರ್ಗಮನ ದ್ವಾರವನ್ನು ತೆಗೆದು ಹಿಡಿದುಕೊಂಡರೂ ಕಾರ್ಡ್ದಾರರು ಸ್ಕ್ಯಾನ್ ಮಾಡದೇ ಹೊರ ಬರುವಂತಿಲ್ಲ. ಸಮಯವಾಗುತ್ತಿದೆ ಎಂದು ಹೊರ ಬಂದರೆ, ಎಕ್ಸಿಟ್ (ನಿರ್ಗಮನ) ಸ್ಕಾö್ಯನ್ ಮಾಡದೇ ಇರುವುದಕ್ಕೆ ದಂಡವನ್ನು ಬಳಕೆದಾರರು ಕೊಡಬೇಕು ! ಹೇಗಿದೆ?
ಈ ಕಾರಣಕ್ಕಾಗಿ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಈ ಯಾಂತ್ರೀಕೃತ ಡಿಜಿಟಲ್ ವ್ಯವಸ್ಥೆಯನ್ನು ಉಳಿದೆಲ್ಲರಗಿಂತ ಹೆಚ್ಚಾಗಿ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಆದರೆ ಈ ವ್ಯವಸ್ಥೆ ಪದೇ ಪದೇ ಕೈಕೊಡುತ್ತಿರುವುದರಿಂದ, ಸಂಬಂಧಿಸಿದವರು ಆಗಮಿಸಿ ಸ್ಕಾö್ಯನ್ ಮಾಡಿಕೊಡುವವರೆಗೆ ಕಾರ್ಡ್ ಬಳಕೆದಾರರು ಕಾಯಬೇಕಾಗಿದೆ.
ಮಂಗಳವಾರವೂ ಇಂಥಹುದೇ ಸಮಸ್ಯೆ ಹುಬ್ಬಳ್ಳಿಯ ಮಹಾನಗರ ಪಾಲಿಕೆ ನಿಲುಗಡೆಯಲ್ಲಿ ಉಂಟಾಗಿತ್ತು. ಸ್ಮಾರ್ಟ್ ಕಾರ್ಡ್ ಬಳಕೆದಾರರು ಅನುಭವಿಸುತ್ತಿರುವ ಅವ್ಯವಸ್ಥೆಯ ತಾಜಾ ಉದಾಹರಣೆ ಇದಾಗಿತ್ತು.
ಬೆಳಿಗ್ಗೆ ೧೧ರಿಂದ ೧೧.೩೦ರ ಅವಧಿಯಲ್ಲಿ ಧಾರವಾಡ ಕಡೆಯಿಂದ ಹುಬ್ಬಳ್ಳಿ ಸಿಬಿಟಿ ಕಡೆಗೆ ಆಗಮಿಸಿದ ಬಸ್ ಪ್ರಯಾಣಿಕರು ಕಾರ್ಡ್ ಲಾಕ್ ಆಗಿ, ಪಡಬಾರದ ಪಾಡು ಪಟ್ಟರು.
ಕಾರ್ಡ್ ಸ್ಕ್ಯಾನ್ ಮಾಡದೇ ಹೊರಬಂದರೆ ದಂಡ ಪಾವತಿಸುವ ಅನಿವಾರ್ಯತೆಯಿಂದಾಗಿ ಕಚೇರಿ ವೇಳೆ ಆಗಿದ್ದರೂ ಮನದಲ್ಲೇ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತ ಅನೇಕ ನಿಮಿಷಗಳ ಕಾಲ ನಿಲ್ದಾಣದ ಒಳಗೆ ಕಾದು ನಿಂತರು.
ಈ ವೇಳೆ ಕಚೇರಿಗಳಿಗೆ ಹೋಗುವವರು ಮತ್ತು ಯುವಕ-ಯುವತಿಯರು ತಡವಾಗುತ್ತಿದೆ; ಬೇಗ ಅಟೆಂಡ್ ಮಾಡಿ ಎಂದು ಟಿಕೆಟ್ ಕೌಂಟರ್‌ನಲ್ಲಿದ್ದವರನ್ನು ಗೋಗರೆಯಬೇಕಾಯಿತು.
ಕೊನೆಗೆ ಸ್ಕ್ಯಾನ್ ಮಾಡಿಕೊಡುವ ಮೊಬೈಲ್ ಯಂತ್ರದೊದಿಗೆ ಸಿಬ್ಬಂದಿಯೊಬ್ಬರು ಆಗಮಿಸಿ ಈ ಸ್ಮಾರ್ಟ್ ಕಾರ್ಡ್ ಪ್ರಯಾಣಿಕರನ್ನು ಹೊರಬರಲು ಅನುವು ಮಾಡಿಕೊಟ್ಟರು. ಇಷ್ಟರಲ್ಲಿ ಅನೇಕರ ಕಚೇರಿ ಸಮಯ ಮೀರಿತ್ತು.
ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ಪ್ರಯಾಣಿಕರು ಮಾಧ್ಯಮಗಳಿಗೆ ದೂರಿದರು. ಜೊತೆಗೆ ಟಿಕೆಟ್ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಹೀಗಾದಾಗ ಸ್ವಲ್ಪ ಸಹಾನುಭೂತಿಯಿಂದಲಾದರೂ ವರ್ತಿಸಬೇಕು. ಅದೂ ಈ ಕೌಂಟರ್‌ಗಳಲ್ಲಿ ಕಾಣುತ್ತಿಲ್ಲ ಎಂದು ರಶ್ಮಿ(ಹೆಸರು ಬದಲಿಸಲಾಗಿದೆ) ಎಂದು ಕಾರ್ಡ್ ಲಾಕ್ ಕಷ್ಟ ಅನುಭವಿಸಿದ ಯುವತಿ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕೇಳಿ ಬಂತು.
ಡಿಜಿಟಲ್ ಸ್ಮಾರ್ಟ್ ಬಸ್ ನಿಲ್ದಾಣದ ಈ ಅವ್ಯವಸ್ಥೆ ಒಂದೆಡೆ. ಇನ್ನೊಂದೆಡೆ ಕೆಲವು ಬಸ್ ನಿಲ್ದಾಣಗಳಲ್ಲಿ ಇರುವ ಎರಡು ಅಥವಾ ಮೂರು ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಪೈಕಿ ಎರಡು ಸದಾ ಕೆಟ್ಟಿರುವ ಸ್ಥಿತಿಯಲ್ಲಿಯೇ ಇರುತ್ತವೆ ಎಂದೂ ಜನತೆ ದೂರುತ್ತಿದ್ದಾರೆ.
ಇದರಿಂದಾಗಿ ಬಿಆರ್‌ಟಿಎಸ್ ವ್ಯವಸ್ಥೆಗೇ ಕಪ್ಪು ಚುಕ್ಕೆ. ಏಕೆಂದರೆ, ಈ ಮಹಾನಗರಗಳ ನಡುವೆ ಟಿಕೆಟ್ ಇಲ್ಲದೇ ಪ್ರಯಾಣಿಸುವ ನಿಯಮ ಉಲ್ಲಂಘಕರಿಗೆ ಹಾಸಿಗೆ ಹಾಸಿ ಕೊಟ್ಟಂತೆ ಅಲ್ಲವೇ ಎಂದು ಜನತೆ ಕೇಳುತ್ತಾರೆ.
`ಚಿಗರಿ’ ಬಸ್‌ಗಳ ಒಳಗಿನ ಮತ್ತು ಬಸ್ ನಿಲ್ದಾಣಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮಿತಿ ಮೀರುತ್ತಿವೆ. ಆದ್ದರಿಂದ ಕೂಡಲೇ ಎಚ್‌ಡಿಬಿಆರ್‌ಟಿಎಸ್ ಸಂಸ್ಥೆ ಸಾರ್ವಜನಿಕ ಪ್ರತಿನಿಧಿಗಳಿರುವ ಸಲಹಾ ಸಮಿತಿಯೊಂದನ್ನು ರಚಿಸಬೇಕು. ನಮ್ಮ ಕುಂದುಕೊರತೆಗಳನ್ನು ಈಡೇರಿಸಬೇಕು.
– ಶಾಂತಕೃಷ್ಣ ಗಿರಿ, ಖಾಸಗಿ ಉದ್ಯೋಗಿ.