ಬಾಲನಾಗಮ್ಮನ ಮನೆಯಲ್ಲಿ ಬ್ಲ್ಯಾಕ್ ಟೀ ಕುಡಿದ ಪ್ರಿಯಾಂಕಾ!

Advertisement

ನವಲಗುಂದ: ಆ ನಾಯಕಿ ನಮ್ಮೂರಿಗೆ ಬರುತ್ತಿದ್ದಾಳೆ.. ನೀವೆಲ್ಲ ಹೋಗಿ ನೋಡಿ.. ಮಾತು ಕೇಳಿ… ನಾನು ಇಲ್ಲೆ ಅಂಗಡಿಯಲ್ಲಿ ಇರುತ್ತೇನೆ…
ಹೇಗಿದ್ದರೂ ಮನೆ ಮುಂದಿನ ರಸ್ತೆಯಲ್ಲೇ ಕಾರು ಹೋಗುತ್ತೆ ನಿಂತು ನೋಡುತ್ತೇನೆ ಎಂದು ತನ್ನ ಅಂಗಡಿಯ ಮುಂದೆ ನಿಂತಿದ್ದ ಮಹಿಳೆಗೆ ತಾನು ಯಾವ ನಾಯಕಿಯನ್ನು ನೋಡಬೇಕೊ ಆ ನಾಯಕಿಯೇ ಕಾರಿನಿಂದ ಇಳಿದು ಬಂದು ತನ್ನೆದರು ಪ್ರತ್ಯಕ್ಷ ಆದರೆ ಹೇಗಾಗಬೇಡ. ಸಂಭ್ರಮ, ಸಂತೋಷಕ್ಕೆ ಪಾರವೇ ಇಲ್ಲ.
ಇಂತಹ ಅನುಭವ ನವಲಗುಂದ ಪಟ್ಟಣದ ನಿವಾಸಿ ಬಾಲನಾಗಮ್ಮ ಅವರಿಗೆ ಶನಿವಾರ ಅಯಿತು.
ಬಾಲನಾಗಮ್ಮ ಅವರದು ತುಂಬು ಕುಟುಂಬ. ಏಳು ಮಕ್ಕಳು. ಚಿಕ್ಕ ಮನೆ. ಮನೆಯಲ್ಲೇ ಟೀ ಅಂಗಡಿ, ಪಾನ್ ಶಾಪ್, ಸಣ್ಣ ಕಿರಾಣಿ ವ್ಯಾಪಾರ ಮಾಡಿಕೊಂಡಿದ್ದಾರೆ.
ಪ್ರಿಯಾಂಕ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್. ಕೋನರಡ್ಡಿ ಅವರ ಪ್ರಚಾರಕ್ಕೆ ಆಗಮಿಸುವ ವೇಳೆ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಪಕ್ಕದ ತನ್ನ ಅಂಗಡಿ ಮುಂದೆ ನಿಂತ ಬಾಲನಾಗಮ್ಮ ಕಂಡಿದ್ದಾರೆ.
ಅವರನ್ನು ನೋಡಿದ ತಕ್ಷಣ ಅದೇನಾಯಿತೊ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಅವರು ಕಾರಿನಿಂದ ಇಳಿದು ನೇರವಾಗಿ ಬಾಲನಾಗಮ್ಮನ ಹತ್ತಿರ ಬಂದಿದ್ದಾರೆ.
ಇದನ್ನು ಕಂಡ ಬಾಲನಾಗಮ್ಮನಿಗೆ ಅಚ್ಚರಿ ಮತ್ತು ಸಂತೋಷ ಎರಡೂ ಆಗಿದೆ. ಒಂದು ಕ್ಣಣ ಏನು ಮಾಡಬೇಕು ಎಂದು ತೋಚಿಲ್ಲ. ಇವರ ಗಲಿಬಿಲಿ ಕಂಡ ಪ್ರಿಯಾಂಕಾ ಗಾಂಧಿ ನಸುನಕ್ಕಿದ್ದಾರೆ.
ಬನ್ನಿ ಬನ್ನಿ ನಿಮ್ಮ ಮನೆಯೊಳಗೆ ಹೋಗೋಣ. ಕುಳಿತು ಮಾತಾಡೋಣ ಎಂದು ಗುಬ್ಬಚ್ಚಿ ಗೂಡಿನಂತಿರುವ ಪುಟಾಣಿ ಮನೆಯೊಳಗೆ ಹೆಜ್ಜೆ ಇಟ್ಟಿದ್ದಾರೆ.
ನೀವು ಏನು ಮಾಡುತ್ತೀರಿ? ಎಷ್ಟು ಮಕ್ಕಳು? ಇಷ್ಟು ಪುಟ್ಟ ಮನೆ, ಏಳು ಜನ ಮಕ್ಕಳು, ಚಿಕ್ಕ ಕಿರಾಣಿ, ಟೀ ಸ್ಟಾಲ್, ಪಾನ್‌ಶಾಪ್‌ನಲ್ಲಿ ಜೀವನ ನಡೆಯುತ್ತಾ? ಹೀಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ಬಾಲನಾಗಮ್ಮ, ಹಿಂದೆ ಜೀವನ ಚೆನ್ನಾಗಿತ್ತು ಈಗ ಬಹಳ ಕಷ್ಟವಾಗಿದೆ. ಮನೆ ಮಂದಿಯೆಲ್ಲ ದುಡಿದರೂ ಬದುಕುವುದು ಕಷ್ಟ. 1200 ರೂ ಸಿಲಿಂಡರ್ ಬೆಲೆ, ಅಕ್ಕಿ, ಬೇಳೆ, ಜೋಳ, ವಿದ್ಯುತ್ ಎಲ್ಲವೂ ಜಾಸ್ತಿ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಇಷ್ಟಾದ ಮೇಲೆ ಪ್ರಿಯಾಂಕಾ ಅವರು, ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸಿ. ನಿಮ್ಮೆಲ್ಲ ಕಷ್ಟ ಪರಿಹರಿಸುತ್ತೆ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಬಾಲನಾಗಮ್ಮ ಅವರು ಸ್ವಲ್ಪ ಉಪಹಾರ ಸೇವಿಸಿ ಎಂದು ಉಪಹಾರ ಸಿದ್ಧ ಮಾಡಲು ಎದ್ದು ನಿಲ್ಲುತ್ತಿದ್ದಂತೆಯೇ. ಅದೆಲ್ಲ ಬೇಡ. ನಾನು ಟೀ ಕುಡಿತೀನಿ. ಬ್ಲ್ಯಾಕ್ ಟೀ ಎಂದಿದ್ದಾರೆ.
ನೀವೇನು ಮಾಡುವುದು ಬೇಡ. ಸಕ್ಕರೆ, ಚಹಾ ಪುಡಿ ಕೊಡಿ, ಒಂದು ಗ್ಲಾಸ್ ಕೊಡಿ ಎಂದು ಕೇಳಿದ್ದಾರೆ. ನಾಗಮ್ಮ ಸಕ್ಕರೆ, ಚಹಾ ಪುಡಿ ಕೊಟ್ಡ ಮೇಲೆ ಡಿಕಾಂಕ್ಷನ್ (ಬ್ಲ್ಯಾಕ್ ಟಿ) ತಾವೇ ಮಾಡಿಕೊಂಡು ಪ್ರಿಯಾಂಕಾ ಕುಡಿದಿದ್ದಾರೆ.
ಬಳಿಕ ನಿಮ್ಮ ವಯಸ್ಸು ಎಷ್ಟು ಎಂದಿದ್ದಾರೆ ಬಾಲನಾಗಮ್ಮ 53 ಎಂದಿದ್ದಾರೆ. ಹೌದಾ! ನನಗೆ 51 ವರ್ಷ. ನೀವು ನನ್ನ ಅಕ್ಕನಂತೆ ಎಂದು ಅಪ್ಪಿಕೊಂಡು ನಗೆಚೆಲ್ಲಿದ್ದಾರೆ.
ಅಷ್ಟೇ ಅಲ್ಲ ಬಾಲನಾಗಮ್ಮ ಅವರ ಮೊಮ್ಮಗಳನ್ನು ಮಾತನಾಡಿಸಿದ್ದಾರೆ. ತಮ್ಮ ಮೊಬೈಲ್ ನಲ್ಲಿದ್ದ ತಮ್ಮ ಮಕ್ಕಳ ಚಿತ್ರಗಳನ್ನು ತೋರಿಸಿದ್ದಾರೆ. ಅಲ್ಲದೇ ತಮ್ಮ ಮುದ್ದಿನ ನಾಯಿ ಚಿತ್ರವನ್ನು ತೋರಿಸಿ ನಗೆ ಚಟಾಕಿ ಹಾರಿಸಿದ್ದಾರೆ.
ಹೀಗೆ ಸುಮಾರು 40 ನಿಮಿಷ ಬಾಲನಾಗಮ್ಮ ಅವರ ಮನೆಯಲ್ಲೇ ಸಮಯ ಕಳೆದ ಪ್ರಿಯಾಂಕಾ ಗಾಂಧಿ ಬಳಿಕ ಸಾರ್ವಜನಿಕ ಸಭೆಗೆ ಬಂದು ಪ್ರಚಾರ ಭಾಷಣ ಮಾಡಿದರು.
ವೇದಿಕೆಯಲ್ಲಿ ತಾವು ಬಾಲನಾಗಮ್ಮನ ಮನೆಗೆ ಹೋಗಿದ್ದೆ ಎಂದು ಪ್ರಿಯಾಂಕ ಗಾಂಧಿ ಹೇಳುವಾಗ ವೇದಿಕೆಯ ಮುಂದಿನ ಜನಸ್ತೋಮದಲ್ಲಿ ಬಾಲನಾಗಮ್ಮ ಅವರ ಮಕ್ಕಳು ಕುಳಿತಿದ್ದರು. ಈ ಮಾತು ಕೇಳಿ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.