ಬಾರ್ ತೆರೆಯಲು ಮಹಿಳೆಯರ ವಿರೋಧ: ತಳ್ಳಾಟ, ಹಲ್ಲೆ ಹಲವರು ಆಸ್ಪತ್ರೆಗೆ ದಾಖಲು

Advertisement

ಗದಗ (ಲಕ್ಷ್ಮೇಶ್ವರ): ಪಟ್ಟಣದ ಸವಣೂರ ರಸ್ತೆ ಬದಿಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಪ್ರಾರಂಭ ವಿರೋಧಿಸಿ ಮಂಗಳವಾರ ರಾತ್ರಿ ಈ ಪ್ರದೇಶದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಾರ್ ಮಾಲಿಕ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ-ತಳ್ಳಾಟದಿಂದ ಬುಧವಾರವೂ ಈ ವಿಷಯದ ಕುರಿತು ಪಟ್ಟಣದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ.
ವಾರ್ಡ್ ನಂ. ೧೭, ೧೮ರ ವ್ಯಾಪ್ತಿಯ ಜನವಸತಿ ಪ್ರದೇಶದ ಹತ್ತಿರವೇ ಬಾರ್ ಆ್ಯಂಡ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆದ ಮಾಲಕರು ಕಳೆದ ಒಂದೂವರೆ ವರ್ಷದ ಹಿಂದೆಯೆ ಇಲ್ಲಿ ಬಾರ್ ಪ್ರಾರಂಭಿಸುವ ವೇಳೆ ಈ ಪ್ರದೇಶದ ಮಹಿಳೆಯರಿಂದ ದೊಡ್ಡ ಮಟ್ಟದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಾರ್ ಪ್ರಾರಂಭದಿಂದ ಹಿಂದೆ ಸರಿದಿದ್ದರು.
ವರ್ಷದ ನಂತರ ಮಂಗಳವಾರ ರಾತ್ರಿ ಏಕಾಏಕಿ ಮಧ್ಯದ ಬಾಟಲಿಗಳ ದಾಸ್ತಾನು ತಂದು ಬಾರ್ ಪ್ರಾರಂಭಿಸಲು ಮುಂದಾಗಿದ್ದರು. ಕೂಡಲೇ ಸೇರಿದ ಮಹಿಳೆಯರು, ಇದು ಮಹಿಳೆಯರು, ಮಕ್ಕಳು ಇರುವ ಜನವಸತಿ ಪ್ರದೇಶ. ಅಕ್ಕಪಕ್ಕದಲ್ಲಿಯೆ ದೇವಸ್ಥಾನ, ವಿದ್ಯಾರ್ಥಿ ನಿಲಯ, ಆಸ್ಪತ್ರೆಗಳಿವೆ. ಇಲ್ಲಿ ಬಾರ್ ಪ್ರಾರಂಭವಾದರೆ ನಿತ್ಯದ ಬದುಕಿಗೆ ತೊಂದರೆಯಾಗುತ್ತದೆ ಮತ್ತು ಇಡಿ ವಾತಾವರಣ, ಕುಟುಂಬಗಳು ಹಾಳಾಗುತ್ತವೆ. ನಮ್ಮ ಪ್ರಾಣ ಹೋದರೂ ಇಲ್ಲಿ ಬಾರ್ ಪ್ರಾರಂಭಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಬಾರ್ ಮಾಲಿಕ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ-ತಳ್ಳಾಟ ನಡೆದು ಕೊನೆಗೆ ಬಾರ್ ಮಾಲಿಕ ಮತ್ತು ಸಿಬ್ಬಂದಿ ಬೀಗ ಹಾಕಿಕೊಂಡು ಹೋಗಿದ್ದಾರೆ. ಬುಧವಾರ ಬೆಳಿಗ್ಗೆ ಬಾರ್ ಮಾಲಿಕ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ರಾತ್ರಿ ನಡೆದ ಘಟನೆಯಲ್ಲಿ ತಮಗೂ ಪೆಟ್ಟಾಗಿವೆ ಎಂದು ವಯೋವೃದ್ಧರಾದ ನೀಲಮ್ಮ ಹುರಕನವರ, ಸಿದ್ದಮ್ಮ ಶರಸೂರಿ, ಪಾರಮ್ಮ ಗದ್ದಿ, ದೇವಕ್ಕ ಇಮ್ಮಡಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದು ಬುಧವಾರ ರಾತ್ರಿಯವರೆಗೂ ಪ್ರಕರಣ ದಾಖಲಾಗಿಲ್ಲ. ಪ್ರತಿಭಟನೆಗಾಗಿ ನಿವಾಸಿಗಳು ಬಾರ್ ಮುಂದೆ ಟೆಂಟ್ ಹಾಕಿದ್ದು, ಪೊಲೀಸರು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.