ದಮ್ ಇದ್ದರೆ, ತಾಕತ್ತಿದ್ದರೆ ಎದುರಿಸಿ ನೋಡೋಣ…
ಈ ಮಾತು ವಿಧಾನಸೌಧದ ಒಳಗೆ ಮತ್ತು ಹೊರಗೆ ಸಾರ್ವಜನಿಕ ಸಭೆಗಳಲ್ಲಿ ಮಾರ್ದನಿಸಿದಾಗ, ಅಬ್ಬಾ ನಮ್ಮ ಬಸವರಾಜ ಬೊಮ್ಮಾಯಿ ಇಷ್ಟು ಗಟ್ಟಿಯಾದ್ರಾ ಎಂದು ಅಚ್ಚರಿಪಟ್ಟವರೇ ಹೆಚ್ಚು.
ನಿಜ. ರಾಜ್ಯದ ಮೂವತ್ತೊಂದನೆಯ ಮುಖ್ಯಮಂತ್ರಿಯಾಗಿ, ಭಾರತೀಯ ಜನತಾ ಪಕ್ಷದ ನಾಲ್ಕನೆಯ ಸಿಎಂ ಆಗಿ, ಬಸವರಾಜ ಬೊಮ್ಮಾಯಿ ಈಗ ಜನಾದೇಶ ಕಳೆದುಕೊಂಡು ಸದ್ಯಕ್ಕಂತೂ ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿ ಮುಂದುವರಿದಿದ್ದಾರೆ.
ಉತ್ತರ ಕರ್ನಾಟಕದ ದುರದೃಷ್ಟವೋ ಏನೋ, ಈ ಭಾಗದ ಯಾರೇ ಮುಖ್ಯಮಂತ್ರಿಯಾದರೂ ಅವರದ್ದು ಅಲ್ಪ ಅವಧಿಯ ಆಡಳಿತ ಮಾತ್ರ ಎನ್ನುವ ನಿರಾಸೆ ಹಾಗೂ ಕಳಂಕಕ್ಕೆ ಬಸವರಾಜ ಬೊಮ್ಮಾಯಿ ಕೂಡ ಸೇರ್ಪಡೆಯಾದರು. ಈ ಹಿಂದೆ ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಎಸ್.ಆರ್.ಬೊಮ್ಮಾಯಿ, ಜಗದೀಶ ಶೆಟ್ಟರ ಎಲ್ಲರೂ ಅಲ್ಪ ಅವಧಿಗೆ ಮುಖ್ಯಮಂತ್ರಿಗಳೇ.
ಕೇವಲ ೬೬ಸ್ಥಾನಗಳಿಸಿದ ಬಸವರಾಜ ಬೊಮ್ಮಾಯಿ, ಪಕ್ಷವನ್ನು ಮತ್ತೆ ಗೆಲ್ಲಿಸಿಕೊಂಡು ಬರಲಾಗದೇ ತಮ್ಮ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಹಾಗೆ ನೋಡಿದರೆ ಬಸವರಾಜ ಬೊಮ್ಮಾಯಿಯವರ ರಾಜಕೀಯ ನಡೆ ನುಡಿ, ವರ್ತನೆ ಮತ್ತು ನಿರ್ಧಾರಗಳೆಲ್ಲವೂ ಆಕಸ್ಮಿಕ ಹಾಗೂ ಅದೃಷ್ಟದ ಆಟದಂತೆಯೇ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಭಾರತೀಯ ಜನತಾ ಪಕ್ಷ ನೇಮಕ ಮಾಡಿ ಕರ್ನಾಟಕದಂತಹ ದೊಡ್ಡ ರಾಜ್ಯಕ್ಕೆ ಆಯ್ಕೆ ಮಾಡಿದಾಗಲೇ ಎಲ್ಲರಿಗೂ ಆಶ್ಚರ್ಯ. ಮೂಲತಃ ಬಿಜೆಪಿಯವರಲ್ಲದ ಸಂಘ ಪರಿವಾರದ ಸೋಂಕು ಸಂಕಲ್ಪ- ದೀಕ್ಷೆ ಇಲ್ಲದ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು ರಾಷ್ಟ್ರದಲ್ಲಿ ಇದೇ ಮೊದಲು. ಇಷ್ಟೇ ಅಚ್ಚರಿ, ಬಸವರಾಜ ಬೊಮ್ಮಾಯಿ ಪ್ರಪ್ರಥಮ ಬಾರಿಗೆ ಶಿಗ್ಗಾಂವಿ ವಿಧಾನಸಭೆ ಕೇತ್ರದಿಂದ ಆಯ್ಕೆಯಾದದ್ದು ಹಾಗೂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲದಲ್ಲಿ ಪ್ರಥಮ ಬಾರಿಗೇ ನೀರಾವರಿಯಂತಹ ಪ್ರಮುಖ ಖಾತೆಯನ್ನು ನೀಡಿದಾಗಲೂ ಆಗಿತ್ತು.ಹತ್ತಿರದಿಂದ ಬಲ್ಲವರೆಲ್ಲರೂ ಅರಿತಂತೆ ಬಸಣ್ಣ ಸದಾ ಹೊಂದಾಣಿಕೆ ರಾಜಕೀಯ'ಕ್ಕೆ ಮಹತ್ವ ಕೊಟ್ಟವರು. ಹಾಗೇ ಪಕ್ಕಾ ಲೆಕ್ಕಾಚಾರಸ್ಥ ಕೂಡ (ಅಡ್ಜಸ್ಟ್ಮೆಂಟ್ ಮತ್ತು ಕ್ಯಾಲಿಕ್ಯೂಲೇಟಿವ್). ಸೇಡು ಸೆಡವು ಕಡಿಮೆ. ಹಾಗಂತ ಬುದ್ಧಿವಂತ. ಓದಿದ್ದು ಎಂಜಿನಿಯರಿಂಗ್ ಆದರೂ ಬದುಕಿನುದ್ದಕ್ಕೂ ಕೈ ಹಿಡಿದದ್ದು ಅವರ ಆರ್ಥಿಕ ಹಾಗೂ ವ್ಯಾವಹಾರಿಕ ಪರಿಣಿತಿ. ಅದಕ್ಕಾಗಿಯೇ ಜಿಎಸ್‌ಟಿ ಮೆಂಬರ್ ಕೂಡ ಆದವರು. ತಂದೆ ಎಸ್.ಆರ್.ಬೊಮ್ಮಾಯಿ ರಾಜ್ಯ ರಾಜಕೀಯದಲ್ಲಿ ಮತ್ತು ಶಾಸಕಾಂಗ ಹಾಗೂ ಸಂವಿಧಾನದ ಮಹತ್ವ ಎತ್ತಿ ಹಿಡಿದ ಮುತ್ಸದ್ದಿ. ಸದ್ಯ ಆಯಾರಾಂ- ಗಯಾರಾಂ ಸಂಸ್ಕೃತಿ, ಶಾಸಕರ ತಲೆ ಎಣಿಕೆ ಪ್ರವೃತ್ತಿ, ಇವಕ್ಕೆಲ್ಲ ಕಡಿವಾಣ ಬಿದ್ದಿದೆಯಲ್ಲ, ಅವೆಲ್ಲಕ್ಕೆ ರಾಯಿಸ್ಟ್ ಎಸ್.ಆರ್.ಬೊಮ್ಮಾಯಿ ಕಾರಣ. ತಂದೆ ಇರುವಾಗಲೇ ರಾಜಕೀಯಕ್ಕೆ ಬಂದು ಜೆ.ಎಚ್.ಪಟೇಲ್ ಸರ್ಕಾರದಲ್ಲಿ ರಾಜಕೀಯ ಕಾರ್ಯದರ್ಶಿಯೂ ಆಗಿದ್ದ ಬಸವರಾಜ ಬೊಮ್ಮಾಯಿ ಜನಪ್ರತಿನಿಧಿಯಾಗಬೇಕೆಂಬ ಕನಸು, ಮಹತ್ವಾಕಾಂಕ್ಷೆ ಇದೇ ಜಗದೀಶ ಶೆಟ್ಟರ ಅವರೆದುರೇ ದಂತಭಗ್ನವಾದದ್ದು. ಹುಬ್ಬಳ್ಳಿ ಗ್ರಾಮೀಣದಲ್ಲಿ ಶೆಟ್ಟರ ಎದುರು ಬೊಮ್ಮಾಯಿ ಬಸಣ್ಣ ಸೋಲುನುಭವಿಸಿದ್ದರು (ಜನತಾ ದಳ). ಆ ನಂತರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ, ಎರಡು ಸಾರೆ (ಹನ್ನೆರಡು ವರ್ಷ) ಪರಿಷತ್ತಿನ ಸದಸ್ಯರಾಗಿ, ಉಪನಾಯಕನಾಗಿಯೂ ಕಾರ್ಯನಿರ್ವಹಿಸಿದವರು. ಅ ನಂತರವೇ, ೨೦೦೮ರಲ್ಲಿ ಬಿಜೆಪಿ ಸೇರಿ ಶಿಗ್ಗಾಂವಿಯಿಂದ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಈಗ ಒಂದು ವರ್ಷ ಹತ್ತು ತಿಂಗಳು ಮುಖ್ಯಮಂತ್ರಿಯಾಗಿ ಹತ್ತು ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿ ಕೆಳಗಿಳಿದಿದ್ದಾರೆ. ರಾಜ್ಯ ಭಾಜಪದ ನಾಲ್ಕನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಸಾಕಷ್ಟು ಕಾರ್ಯ ನಿರ್ವಹಿಸಬಹುದಿತ್ತು. ಹಾಗಂತ ಈಗ ಅದೇ ಭಾಜಪ ಮಂದಿ ಹೇಳುತ್ತಾರೆ.
ದಮ್ಮಿದ್ರೆ- ತಾಕತ್ತಿದ್ದರೆ ಎದುರಿಸಿ ನೋಡೋಣ’ ಎನ್ನುವ ಸವಾಲು ಹಾಕುವಷ್ಟರ ಮಟ್ಟಿಗೆ ಬೊಮ್ಮಾಯಿ ರಾಷ್ಟçದ ಗಮನ ಸೆಳೆದರಲ್ಲ…! ಹಾಗೆಯೇ ಈಗ ಪಕ್ಷ ಗೆಲ್ಲಿಸಿಕೊಂಡು ಬರಲಾಗದ ವಿಷಾದ- ದುರಂತ ನಾಯಕರಾದರಲ್ಲ ಅದು ಹೇಗೆ ?
ಬೊಮ್ಮಾಯಿಯವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತು, ಅವರಲ್ಲಿ ಎದುರಿಸುವ ತಾಕತ್ತಿಲ್ಲ; ಛಲದ ಕೊರತೆ ಇದೆ, ಸದಾ ಹೊಂದಾಣಿಕೆಯ ರಾಜಕೀಯ ಅವರದ್ದು ಎನ್ನುವುದು. ಹಾಗಾಗಿ ಮುಖ್ಯಮಂತ್ರಿ ಗಾದಿ ಏರಿದರೂ ಕೂಡ ಇಡೀ ಜುಟ್ಟನ್ನು ಕೇಂದ್ರ ನಾಯಕರೇ ಇಟ್ಟುಕೊಂಡು ಅವರ ನಿರ್ಧಾರವನ್ನೇ ಇವರು ಮುದ್ರೆಯೊತ್ತಿ ಯಶಸ್ಸು, ಅಪಯಶಸ್ಸು ಎಲ್ಲವನ್ನೂ ನುಂಗಿಕೊಂಡ, ವಿಷಕಂಠನಾದರು ಬೊಮ್ಮಾಯಿ.
ನೀರಾವರಿ ಮಂತ್ರಿಯಾದಾಗ ಬೊಮ್ಮಾಯಿ ತೋರಿದ ಪರಿಣತಿ, ನಿವಾರಿಸಿದ ಜಟಿಲತೆಗಳು, ಕಾನೂನು ಮಂತ್ರಿಯಾದಾಗ ಹೊಂದಿದ ಸ್ಟೇಟಸ್, ಕಾನೂನು ಪಂಡಿತರ, ನ್ಯಾಯಾಧೀಶರ ಗೌರವ ಅಭಿಮಾನ; ಗೃಹ ಮಂತ್ರಿಯಾದಾಗ ಕೈಗೊಂಡ ಕ್ರಮ, ಆಡಳಿತ ಅವೆಲ್ಲವೂ ಬಸವರಾಜ ಬೊಮ್ಮಾಯಿಯವರನ್ನು ಯಡಿಯೂರಪ್ಪನವರ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದು ನಿಜ ಎನ್ನಬಹುದು.
ಆದರೆ ಸಿಎಂ ಆಗಿ ಬೊಮ್ಮಾಯಿ ಆಯ್ಕೆ ಎಲ್ಲರಿಗೂ ಅಚ್ಚರಿಯೇ. ಅದೂ ಕೂಡ ನನಗೂ ಮುಖ್ಯಮಂತ್ರಿಯಾಗಿ ಆಫರ್ ಬಂದಿತ್ತು, ೨೫೦೦ ಕೋಟಿ ಕೊಡಿ ಎಂದು ಸ್ವಪಕ್ಷೀಯ ನಾಯಕರೇ ಹೇಳಿಕೊಂಡಾಗಲಂತೂ ಜನ ಸಂಶಯದಿಂದ ನೋಡುವಂತಾಯಿತು. ಬೊಮ್ಮಾಯಿ ದಿಟ್ಟತನ ಪ್ರದರ್ಶಿಸಿದ್ದು ಕಡಿಮೆಯೇ. ಜುಟ್ಟು ಹಿಡಿದ ಹೈಕಮಾಂಡ್ ಬೊಮ್ಮಾಯಿಗೆ ಕೆಲಸ ಮಾಡಲೂ ಬಿಡಲಿಲ್ಲ ಎನ್ನುವುದು ಅಷ್ಟೇ ಸತ್ಯ.
ಒಂದು ಸಂಪುಟ ಪುನಾರಚನೆಗೆ ವಾರಕ್ಕೊಮ್ಮೆ ಅಲೆದಾಡಿದರೂ ಕೊನೆಗೂ ಅಸಾಧ್ಯವಾಯಿತು. ಮೊದಲ ಸಂಪುಟ ರಚನೆಗಾಗಿಯೇ ವಾರ ಕಳೆದರು. ಆ ನಂತರ ಪುನರಚನೆಗಂತೂ ಅಲೆದಾಡಿಸಿ ನಿರಾಸೆಗೊಳಿಸಿದರು. ನಿಗಮ, ಮಂಡಳಿ, ರ‍್ಗಾರ‍್ಗಿ ಎಲ್ಲವೂ ಹೈಕಮಾಂಡ್ ಒಪ್ಪಿಗೆಯಂತೆ ಹಾಗೂ ರಾಜ್ಯ ಪ್ರತಿನಿಧಿಸುವ ಕೇಂದ್ರ ಮಂತ್ರಿಗಳ ಆಣತಿಯಂತೆ ನಡೆಯುವಂತಾಯಿತು. ಆದರೆ ಅವರು ಹೈಕಮಾಂಡ್ ಕೂಸು ಆಗಿರುವುದರಿಂದ ಬೊಮ್ಮಾಯಿಯವರಿಗೆ ಯಡಿಯೂರಪ್ಪನವರಿಂದ ಅಸಾಧ್ಯವಾದ ಕೆಲಸವೊಂದು ಮಾಡಿಸಲು ಸಾಧ್ಯವಾಯಿತು. ಅದು ಕೇಂದ್ರದ ಸಹಕಾರ ಮತ್ತು ಅನುದಾನ.
ಅವರದ್ದೇ ಪಕ್ಷದ ಕೇಂದ್ರ ಸರ್ಕಾರವಿದ್ದರೂ ಅತಿವೃಷ್ಟಿ, ಕೋವಿಡ್‌ನಂತಹ ಭಾರಿ ಸಮಸ್ಯೆಗಳಿದ್ದರೂ, ಕೇಂದ್ರ ನೆರವಿಗೆ ಧಾವಿಸಿರಲಿಲ್ಲ. ಜಿಎಸ್‌ಟಿ ಪರಿಹಾರ ನೀಡಿರಲಿಲ್ಲ. ಯಾವುದೇ ಯೋಜನೆಗಳಿಗೂ ಸ್ಪಂದಿಸುತ್ತಿರಲಿಲ್ಲ. ಕೇಂದ್ರ ನಾಯಕರನ್ನು ಯಡಿಯೂರಪ್ಪ ಹೊಗಳಿದರೂ ಅವರಿಗೆ ನಿವೃತ್ತಿ ಕೊಡಿಸುವಲ್ಲಿ ತೋರಿಸಿದ ಆಸಕ್ತಿ ರಾಜ್ಯದ ಅಭಿವೃದ್ಧಿಗೆ ತೋರಲಿಲ್ಲ. ಅಂದು ಡಬಲ್ ಎಂಜಿನ್' ಸರ್ಕಾರ ಇದೆ ಎಂದು ತೋರಿಸಿದ್ದರೆ ಇಂದು ಮತದಾರರು ಡಬಲ್ ಎಂಜಿನ್ ಸರ್ಕಾರಕ್ಕೇ ಮಹತ್ವ ಕೊಡುತ್ತಿದ್ದರೇನೋ? ಬೊಮ್ಮಾಯಿಯ ವೈಯಕ್ತಿಕ ಜ್ಞಾನ, ಸೌಜನ್ಯ, ಸ್ನೇಹತ್ವಗಳನ್ನು ಯಾರೂ ದೂಷಿಸುವುದಿಲ್ಲ. ಕಚೇರಿಯ ಸಿಬ್ಬಂದಿಯಾದಿಯಾಗಿ ಉನ್ನತ ಅಧಿಕಾರಿಗಳವರೆಗೆ ಅವರ ಸ್ನೇಹಿತರು, ಸಂಬಂಧಿಕರು ಎಲ್ಲರೂ ಎಲ್ಲ ವಿಷಯಗಳಲ್ಲಿಯೂ ಬೊಮ್ಮಾಯಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗುತ್ತಾರೆ. ಹಲವರಿಗೆ ಹೋಲಿಸಿದರೆ ಬಸವರಾಜ ಬೊಮ್ಮಾಯಿ ಅತ್ಯುತ್ತಮ ಗುಣಗ್ರಾಹಿ, ಸ್ನೇಹಮಯಿ. ಹಾಗೇ ಸಾವಧಾನಿ. ಎಲ್ಲಕ್ಕೂ ಹೆಚ್ಚಾಗಿ ಮೊದಲು ಕೇಳುವ, ಆಲೋಚಿಸುವ ಗುಣವುಳ್ಳವರು. ನಿಜ, ಪಾಂಡಿತ್ಯವಿದೆ. ಆದಾಗ್ಯೂ ಬೊಮ್ಮಾಯಿ ವಿಫಲರಾದದ್ದೇಕೆ ಎಂದರೆ ಅವರು ಒಂದು ವರ್ಷ ಹತ್ತು ತಿಂಗಳು ನಡೆಸಿದ ಆಡಳಿತದ ಹಿಂದಿನ ಛಾಯಾ ವ್ಯಕ್ತಿಗಳು ಎನ್ನಬಹುದೇನೋ...!? ಉದ್ದಕ್ಕೂ ಹತ್ತಾರ ವಿವಾದಗಳು ಸುತ್ತಿಕೊಂಡವು. ಇವನ್ನೆಲ್ಲ ಸೃಷ್ಟಿಸಿದ್ದು ಅವರದ್ದೇ ಪಕ್ಷದವರು. ಹಿಜಾಬ್, ಹಲಾಲ್ ಕಟ್, ಪಿಎಸ್‌ಐ ಹಗರಣ, ಎಲ್ಲಕ್ಕೂ ಹೆಚ್ಚಾಗಿ ಸುದ್ದಿ ಮಾಡಿದ್ದು ಬಿಟ್ ಕಾಯಿನ್. ಪ್ರವೀಣ್ ನೆಟ್ಟಾರು ಹತ್ಯೆ, ಆ ನಂತರ ಭ್ರಷ್ಟಾಚಾರ, ಸ್ವತಃ ಮಂತ್ರಿಯೊಬ್ಬರ ಹೆಸರನ್ನು ನಮೂದಿಸಿ ಗುತ್ತಿಗೆದಾರನೊಬ್ಬ ೪೦ ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡ ಎನ್ನುವುದು ಈ ಬೊಮ್ಮಾಯಿ ಸರ್ಕಾರದ ಅಂತಿಮ ಮೊಳೆ ಅಂದೇ ಹೊಡೆದಂತಿತ್ತು.ಅಧಿಕಾರ ಸ್ವೀಕರಿಸಿದ ತಕ್ಷಣ ರೈತ ಮಕ್ಕಳಿಗೆ ನೀಡಿದ ವಿದ್ಯಾಸಿರಿ ಯೋಜನೆ ಮತ್ತು ಅಸಹಾಯಕ ವೃದ್ಧರಿಗೆ ಏರಿಸಿದ ವೃದ್ಧಾಪ್ಯ ವೇತನ ಬೊಮ್ಮಾಯಿಯವರ ವ್ಯಕ್ತಿತ್ವವನ್ನು ಉತ್ತುಂಗಕ್ಕೆ ಏರಿಸಿದ್ದರೆ, ಅನಿಯಂತ್ರಗೊಂಡ ಅಂಕೆಗೆ ಬಾರದ ಮಂತ್ರಿಗಳು, ತಂಟೆ ಬಿಡದ ಬೆಂಬಲಿತ ಸಂಘಟನೆಗಳು, ಬಾಯಿ ಹರುಕ ಲೀಡರ್‌ಗಳು, ಸದಾ ತನ್ನ ಕಪಿಮುಷ್ಟಿಯಲ್ಲೇ ಆಡಳಿತ ನಡೆಸಬೇಕೆಂಬ ದುಷ್ಟಬುದ್ಧಿಗಳು ಎಲ್ಲವುಗಳಿಂದ ಕೊನೆಗೆ ಒಂದು ಟಿಕೆಟ್ ಹಂಚಿಕೆಯ ಸ್ವಾತಂತ್ರ್ಯವೂ ಇಲ್ಲದ ಸ್ಥಿತಿಗೆ ಬೊಮ್ಮಾಯಿ ಅವರದ್ದಾಗಿತ್ತೇ? ತನ್ನ ಖಾಸಗಿ ಕಾರ್ಯದರ್ಶಿ ನೇಮಕದಿಂದ ಹಿಡಿದು ಸ್ವಾತಂತ್ರ್ಯವಿಲ್ಲದ ಸ್ಥಿತಿಗೆ ಬೊಮ್ಮಾಯಿಯನ್ನು ತಂದಿಟ್ಟಿದ್ದುದನ್ನು ವಿಧಾನಸೌಧ ಹೇಳುತ್ತದೆ. ಈ ಮಧ್ಯೆ ಬೆಂಗಳೂರು ಶಾಸಕರು ಮಂತ್ರಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಬೆಂಗಳೂರು ನಗರಾಭಿವೃದ್ಧಿ ಖಾತೆ ಹಾಗೂ ಉಸ್ತುವಾರಿಯನ್ನು ಇಟ್ಟುಕೊಂಡು ವ್ಯವಸ್ಥೆಯ ನಿಯಂತ್ರಣಕ್ಕೆ ಪರದಾಡಬೇಕಾಯಿತು. ಕೊನೆ ಕೊನೆಗೆ ಯಾವ ನಿರ್ಧಾರವನ್ನೂ ಕೈಗೊಳ್ಳದ, ಯಾವ ಕಡತವನ್ನೂ ಪರಿಶೀಲಿಸಲಾಗದ,
ಕಾದು ನೋಡುವ’ಅಥವಾ `ಮುಂದೂಡುವ ಧೋರಣೆ’ಗೆ ಬೊಮ್ಮಾಯಿಯನ್ನು ತಂದಿಟ್ಟರು. ತಮಗಿಂತ ಹಿರಿಯರಾದ ಈಶ್ವರಪ್ಪ, ಜಗದೀಶ ಶೆಟ್ಟರ, ಲಕ್ಮಣ ಸವದಿ ಮೊದಲಾದವರಿಗೆ ಟಿಕೆಟ್ ನಿರಾಕರಿಸಲು, ಸಮಾಧಾನಗೊಳಿಸಲು ಬೊಮ್ಮಾಯಿ ಬಳಸಿಕೊಂಡರು.. ಆದರೆ ಬೊಮ್ಮಾಯಿಯವರಿಂದ ಹೇಳಿಸಿದ್ದು ಅಥವಾ ಓಲೈಸಲು ಹೇಳಿದ್ದು ಮಾತ್ರ ದಮ್ಮಿದ್ದರೆ, ತಾಕತ್ತಿದ್ದರೆ ಎನ್ನುವ ಸವಾಲಿನ ಮಾತುಗಳು.
ಬಸವರಾಜ ಬೊಮ್ಮಾಯಿ ಇನ್ನೇನು ಮುಖ್ಯಮಂತ್ರಿ ಕಾರ್ಯಾಲಯದಿಂದ ಹೊರಗೆ ಕಾಲಿಟ್ಟಂತಾಗಿದೆ.. ಈ ವೇಳೆ ನೆನಪಾಗುವುದು ಹೀಗೊಂದು ಕಾಕತಾಳೀಯ ವಿದ್ಯಮಾನ. ೧೯೮೯ರ ಎಪ್ರಿಲ್ ೨೧ರ ಘಟನೆ. ಜನತಾ ದಳ ನಾಯಕರ ಬಿಕ್ಕಟ್ಟು ಉಲ್ಬಣಗೊಂಡು ಮುಖ್ಯಮಂತ್ರಿಯಾಗಿದ್ದ ಸೋಮಪ್ಪ ಬೊಮ್ಮಾಯಿ ಅವರಲ್ಲಿ ಕೆಲ ಶಾಸಕರು ಅವಿಶ್ವಾಸ ವ್ಯಕ್ತಪಡಿಸಿ ಸಲ್ಲಿಸಿದ ಪತ್ರವನ್ನು ರಾಜ್ಯಪಾಲರು ಅಂಗೀಕರಿಸಿ ಸರ್ಕಾರ ವಜಾಗೊಳಿಸಿದಾಗ ಅಂದು ಜನತಾ ದಳದ ಮನೆಯಲ್ಲಿ ಮಂಕು ಕವಿದಿತ್ತು… ಭವಿಷ್ಯತ್ತಿನ ಕಾರ್ಮೋಡ ಕವಿದಿತ್ತು.. ಈಗ ಬಿಜೆಪಿದ್ದು ಹೆಚ್ಚು ಕಮ್ಮಿ ಅದೇ ಸ್ಥಿತಿ! ಮತ್ತೆ ರಾಜ್ಯ ಚುಕ್ಕಾಣಿ ತಮ್ಮದೇ ಎಂದು ಬೀಗುತ್ತಿದ್ದವರು ಫಲಿತಾಂಶದಿಂದ ಕಂಗೆಟ್ಟಿದ್ದಾರೆ. ಗರಬಡಿದಿದ್ದಾರೆ..!
ಆದರೆ, ಜನತಾದಳಕ್ಕೆ ಕವಿದ ಕಾರ್ಮೋಡ ಸರಿಸಿ ಕಾರ್ಯಕರ್ತರಿಗೆ ಧೈರ್ಯ ತುಂಬಲು ಅಂದು ರಾಮಕೃಷ್ಣ ಹೆಗಡೆ, ದೇವೇಗೌಡರಿದ್ದರು. ೧೯೯೪ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು.
ಈಗ ಬಿಜೆಪಿಯಲ್ಲಿ…? ಎಲ್ಲರನ್ನೂ ಕಟ್ಟಿಕೊಂಡು ಸರಿದೂಗಿಸಲು ಎಚ್.ಎನ್ ಅನಂತಕುಮಾರ ಇಲ್ಲ. ಸಾಮರ್ಥ್ಯ ಇರುವ ಇನ್ನೊಬ್ಬ ನಾಯಕ ಯಡಿಯೂರಪ್ಪನವರಿಗೆ ವಯಸ್ಸಾಗಿದೆ… (ಅವರಿಗೆ ಪಕ್ಷವೇ ನಿವೃತ್ತಿ ಕೊಡಿಸಿಬಿಟ್ಟಿದೆ) ಬಸವರಾಜ ಬೊಮ್ಮಾಯಿ ಒಪ್ಪಿತರಲ್ಲ, ಕಟೀಲು ತಿರಸ್ಕೃತ…!
ಇಷ್ಟಕ್ಕೂ ಏಳುವ ಪ್ರಶ್ನೆ ಎಂದರೆ ಅಲ್ಪಾವಧಿಯ, ಯಾರದ್ದೋ ನೆರಳಿನ ಮುಖ್ಯಮಂತ್ರಿ ಎಂದು ಗೊತ್ತಿದ್ದೂ ಬೊಮ್ಮಾಯಿ ಒಪ್ಪಿಕೊಂಡಿದ್ದು ಏಕೆಂದರೆ ಮತ್ತೆ ಈ ಸ್ಥಾನ ಸಿಗದಿರಬಹುದು ಎಂದು ಅಷ್ಟೇ. ಏನೇ ಆಗಲಿ, ರಾಜ್ಯದ ಇತಿಹಾಸ ಪುಟದಲ್ಲಿ ಬಸವರಾಜ ಬೊಮ್ಮಾಯಿ ರಾಜಕೀಯ ಹಾಗೂ ಅವರ ಆಡಳಿತ ಸದಾ ಚರ್ಚಿತವಾಗಿರುತ್ತದೆ. ಇನ್ನೂ ಹತ್ತಾರು ವರ್ಷ (ಈಗ ಅವರಿಗೆ ೬೩) ಬಸವರಾಜ ಬೊಮ್ಮಾಯಿ ಈ ರಾಜ್ಯದ ರಾಜಕಾರಣದಲ್ಲಿ ಇರುತ್ತಾರೆ. ಇನ್ನಷ್ಟು ನೊಗ ಕಟ್ಟಿಕೊಳ್ಳಬೇಕಾಗಿದೆ…
ನೋವಿನ ಸಂಗತಿ ಎಂದರೆ, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೂ ಈ ಭಾಗಕ್ಕೆ ಏನೂ ಮಾಡಿಲ್ಲ ಎನ್ನುವ ಹೀಗಳಿಕೆ, ದೌರ್ಭಾಗ್ಯದ ಮಾತು ಮಾತ್ರ ಮುಂದುವರಿಯುವಂತಾಯಿತು..