ಬಾದಾಮಿ ಕ್ಷೇತ್ರದ ಟ್ರೆಂಡ್ ಅರಿಯಲು ಬಂದರೆ ಶಾಸಕ ಜಮೀರ್..!

ಜಮಿರ್
Advertisement

ಬಾಗಲಕೋಟೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಶನಿವಾರ ಬಾದಾಮಿ ಕ್ಷೇತ್ರದ ಹಲವೆಡೆ ಸಂಚರಿಸಿದ್ದು, ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರಿಗೆ ಜನರ ನಾಡಿಮಿಡಿತ ಅರಿತು ವರದಿ ನೀಡಲು ಭೇಟಿ ನೀಡಿದರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಬಾದಾಮಿ ಕ್ಷೇತ್ರದ ಕೆರೂರು ಪಟ್ಟಣ ಸುತ್ತಮುತ್ತಲೂ ಸಂಚರಿಸಿರುವ ಜಮೀರ್ ಅಹ್ಮದ್‌ ಖಾನ್ ಅವರು ಕೆರೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದಲೇ ನಿಲ್ಲುವಂತೆ ಜನರ ಒತ್ತಾಯವಿದೆ ಈ ಅಂಶವನ್ನು ಅವರ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ದೂರವಾಗುತ್ತದೆ ಎಂಬ ಕಾರಣಕ್ಕಾಗಿ ಬಾದಾಮಿಯಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅವರಿಗೆ ಬಂದು ಹೋಗಲು ದೂರ ಆಗುವುದಾದರೆ ಜನರೇ ದುಡ್ಡು ಸೇರಿಸಿದ ಅವರಿಗೆ ಹೆಲಿಕಾಪ್ಟರ್ ಕೊಡಿಸುವುದಾಗಿ ಹೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಅವರ ಬಗ್ಗೆ ಇಲ್ಲಿನ ಜನರಿಗೆ ಅಭಿಮಾನವಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತದೆ ಎಂಬುದು ಜನರ ನಂಬಿಕೆ. ಕಳೆದ ಬಾರಿ ಸಿದ್ದರಾಮಯ್ಯ ಅವರು ಗೆದ್ದ ನಂತರ ಅದನ್ನು ನಿಜವಾಗಿಸಿಯೂ ತೋರಿಸಿದ್ದಾರೆ ಹೀಗಾಗಿ ಸಹಜವಾಗಿ ಇಲ್ಲಿಂದ ಸ್ಪರ್ಧೆಗೆ ಒತ್ತಡವಿದೆ. ಈ ಎಲ್ಲ ವಿಚಾರವನ್ನೂ ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.
ಚಿಮ್ಮನಕಟ್ಟಿ ಕುಟುಂಬದ ವಿರೋಧವಿಲ್ಲ:
ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರನ್ನು ಕಡೆಗಣಿಸಿರುವುದರಿಂದ ಅವರ ವಿರೋಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ ಅಹ್ಮದ್ ಖಾನ್ ಅವರು, ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಬೇಕೆಂದು ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಆ ಕಾರಣಕ್ಕಾಗಿ ಬಾದಾಮಿ ಕ್ಷೇತ್ರದಿಂದಲೇ ಅವರು ಸ್ಪರ್ಧಿಸಬೇಕೆಂಬುದು ಜನರ ಆಗ್ರಹವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರು ಕ್ಷೇತ್ರ ಬಿಟ್ಟುಕೊಟ್ಟಿದ್ದು ನಿಜ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಚಿಮ್ಮನಕಟ್ಟಿ ಅವರಿಗೆ ಸಿದ್ದರಾಮಯ್ಯ ಅವರು ಸೂಕ್ತ ಅವಕಾಶಗಳನ್ನು ಮಾಡಿಕೊಡುತ್ತಿದ್ದರು. ಸಿದ್ದರಾಮಯ್ಯ ತಮಗೆ ಸಹಾಯ ಮಾಡಿದವರನ್ನು ಎಂದಿಗೂ ಮರೆತಿಲ್ಲ. ಅವರು ಸುತ್ತಲು ಇರುವ ಎಲ್ಲರನ್ನೂ ಕೈ ಹಿಡಿದಿದ್ದಾರೆ. ಚಿಮ್ಮನಕಟ್ಟಿ ಅವರಿಗೆ ಅವಕಾಶ ಒದಗಿ ಬಾರದಿರುವುದು ಅವರ ಬ್ಯಾಡ್‌ಲಕ್ ಎಂದು ಬೇಸರದಿಂದ ನುಡಿದರು. ಕ್ಷೇತ್ರದಲ್ಲಿ ಗುಂಪುಗಾರಿಕೆ ಇದೆ ಎಂಬ ವಿಚಾರಕ್ಕೆ ಉತ್ತರಿಸಿದ ಅವರು ಸಣ್ಣಪುಟ್ಟ ಗೊಂದಲಗಳು ಎಲ್ಲ ಪಕ್ಷದಲ್ಲಿ ಇದ್ದೆ ಇರುತ್ತದೆ ಎಂದರು.