ಬಾಂಬರ್‌ಗಾಗಿ ಹುಬ್ಬಳ್ಳಿಯಲ್ಲೂ ಶೋಧ

Advertisement

ಹುಬ್ಬಳ್ಳಿ: ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿಗಾಗಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದು, ಹುಬ್ಬಳ್ಳಿ- ಧಾರವಾಡದಲ್ಲೂ ಶೋಧ ಕಾರ್ಯವನ್ನು ಎರಡು ತಂಡಗಳಲ್ಲಿ ನಡೆಸಲಾಗುತ್ತಿದೆ.
ಶಂಕಿತ ಆರೋಪಿ ಬಳ್ಳಾರಿ, ಕಲಬುರ್ಗಿ, ಹೊಸಪೇಟೆ ಸುತ್ತಾಡಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎನ್‌ಐಎ ಸಿಬ್ಬಂದಿ ಅಲ್ಲಿರುವ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದರು. ಶಂಕಿತ ಓಡಾಡಿರುವ ಸ್ಥಳಗಳನ್ನು ಗುರುತಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದರೂ ಪತ್ತೆಯಾಗಿಲ್ಲ.
ಈಗ ಎನ್‌ಐಎ ತಂಡಗಳು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲೂ ಸ್ಥಳೀಯ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ, ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ, ಚನ್ನಮ್ಮ ವೃತ್ತ, ಹಳೇಹುಬ್ಬಳ್ಳಿ ಇಂಡಿಪಂಪ್ ವೃತ್ತ, ಧಾರವಾಡದ ಜ್ಯುಬಿಲಿ ವೃತ್ತ, ಕೋರ್ಟ್ ವೃತ್ತ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ವಿಡಿಯೊ ಫೂಟೇಜ್ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದಿದೆ.
ಫೆಬ್ರುವರಿ ೨೭ರಿಂದ ಮಾರ್ಚ್ ೭ ರವರೆಗೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ವಿಡಿಯೊ ಫೂಟೇಜ್ ಪರಿಶೀಲನೆಯನ್ನು ಒಂದು ತಂಡ ಮಾಡುತ್ತಿದ್ದರೆ, ಲೈವ್ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆಯನ್ನು ಮತ್ತೊಂದು ತಂಡ ಮಾಡುತ್ತಿದೆ. ತಲಾ ಎರಡು ತಂಡಗಳು ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಎರಡು ದಿನಗಳಿಂದ ಪರಿಶೀಲನೆ ನಡೆಯುತ್ತಿದ್ದು, ಸುಮಾರು ೧೦೦ಕ್ಕೂ ಹೆಚ್ಚು ವಿಡಿಯೊ ಫೂಟೇಜ್‌ಗಳ ಪರಿಶೀಲನೆ ನಡೆಸಲಾಗಿದೆ ಎಂದು ಗೊತ್ತಾಗಿದೆ.