ಬೆಂಗಳೂರು: ರಾಜ್ಯದ 189 ಸ್ಥಳಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಎಲ್ಲರೂ ಬಹುಮತದಿಂದ ಆಯ್ಕೆಯಾಗಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.
ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಒಮ್ಮತದ ಸ್ವಾಗತ ದೊರೆತಿದೆ. ಕೆಲವು ಅಸಮಧಾನಿತರ ಜೊತೆ ಮಾತಾಡುವ ಕೆಲಸ ನಡೆದಿದೆ. ಲಕ್ಷ್ಮಣ ಸವದಿ ಅವರೊಂದಿಗೆ ಮಾತಾಡಿದ್ದು, ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ತಿಳಿಸಿರುವುದಾಗಿ ಹೇಳಿದರು. ಸವದಿ ಜೊತೆ ಭಾವನಾತ್ಮಕವಾದ ಸಂಬಂಧ ಇದೆ. ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರು ಕಷ್ಟದಲ್ಲಿದ್ದಾಗ ಪಕ್ಷ ಕೈ ಹಿಡಿದಿದೆ. ಮುಂದೆಯೂ ಅವರ ಕೈ ಹಿಡಿಯುತ್ತದೆ. ಅವರ ಗೌರವ ಕಾಪಾಡಲು ಒಳ್ಳೆಯ ನಿರ್ಧಾರ ಮಾಡಲಾಗುತ್ತದೆ. ಅವರಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ ಎಂದರು.
ಅಪ್ರಸ್ತುತ ವಿಚಾರ
ಬೊಮ್ಮಾಯಿ ಅವರು ಕಾಂಗ್ರೆಸ್‌ಗೆ ಸೇರುತ್ತಿದ್ದರು ಎಂಬ ಸವದಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ವಿಚಾರ ಅಪ್ರಸ್ತುತ. ನಾನು ನನ್ನ ಮನೆಯಲ್ಲಿ ಮಾತ್ರ ಕೂತಿದ್ದೆ. ನಾನು ಯಾವ ಪಕ್ಷಕ್ಕೂ ಹೋಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅನಂತ ಕುಮಾರ್ , ಸಿ.ಸಿ ಪಾಟೀಲ್, ಸವದಿ ಬಂದಿದ್ದು ನಿಜ. ಆದರೆ ಕಾಂಗ್ರೆಸ್ ಗೆ ನಾನು ಹೋಗುತ್ತಿರಲಿಲ್ಲ. ಮಹತ್ವಾಕಾಂಕ್ಷೆಗಳು ಇರಲಿಲ್ಲ ಎಂದರು.