ರಾಯಚೂರು: ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕೂತುಕೊಳ್ಳಲು ಆಸನವಿಲ್ಲದ ಕಾರಣ ಬಸ್‌ನಲ್ಲಿ ಬ್ಯಾಗ್‌ಗಳನ್ನು ಇಡಲು ಮಾಡಿರುವ ಕ್ಯಾರಿಯರ್(ಲಗೇಜ್ ಇಡುವ ಸ್ಥಳ)ನಲ್ಲಿಯೇ ತನ್ನ ಮಗುವನ್ನು ಮಹಾತಾಯಿಯೊಬ್ಬಳು ಮಲಗಿಸಿದ್ದಾಳೆ.
ಕಳೆದ ಮೂರ‍್ನಾಲ್ಕು ದಿನಗಳ ಹಿಂದೆ ಲಿಂಗಸುಗೂರು-ಕಲಬುರಗಿ ಮಾರ್ಗದ ಬಸ್‌ನಲ್ಲಿ ಈ ಘಟನೆ ನಡೆದಿದ್ದು ಸಹಪ್ರಯಾಣಿಕರೊಬ್ಬರು ಚಿತ್ರೀಕರಣಗೊಳಿಸಿದ ವಿಡಿಯೋ ವೈರಲ್ ಆಗಿದೆ.
ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಜನರು ಆಸನ ದೊರಕದೇ ಇದ್ದಾಗ ಲಗೇಜ್ ಇಡುವ ಸ್ಥಳದಲ್ಲಿಯೇ ಮಲಗಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ಈ ಮಹಾತಾಯಿ ಬಸ್‌ನಲ್ಲಿ ಲಗೇಜ್ ಇಡುವ ಸ್ಥಳದಲ್ಲಿ ಮಗುವನ್ನು ಮಲಗಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಯುಗಾದಿ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಧಾರ್ಮಿಕ ಸ್ಥಳಗಳಿಗೆ ಸರ್ಕಾರಿ ಬಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಜನರಿಂದ ಕೂಡಿರುತ್ತದೆ. ಆಸನ ದೊರಕಲಿಲ್ಲ ಎಂಬ ಕಾರಣದಿಂದ ಈ ರೀತಿ ಮಾಡಿದ್ದಾಳೆಂದು ಗೊತ್ತಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದಾಗಿನಿಂದಲೂ ಇಂಥ ಅನೇಕ ಅವಘಡಗಳ ವಿಡಿಯೋಗಳು ವೈರಲ್ ಆಗುತ್ತಿವೆ.