ಚಿತ್ರದುರ್ಗ: ಬಳ್ಳಾರಿ ಜನ್ಮ ಭೂಮಿ ರಾಜಕೀಯವಾಗಿ ಪುನರ್ಜನ್ಮ ನೀಡಿದ ಮೊಳಕಾಲ್ಮೂರು ಕ್ಷೇತ್ರ ಕರ್ಮಭೂಮಿ. ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಲಾಗುವುದು. ಯಾವ ಕ್ಷೇತ್ರ ಎನ್ನುವುದನ್ನು ನಂತರ ತಿಳಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ಮೊಳಕಾಲ್ಮೂರು ಪಟ್ಟಣದಲ್ಲಿ ಬಸ್ ಘಟಕ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲಾಗುವುದು. ಕ್ಷೇತ್ರ ಆಯ್ಕೆ ಮಾಡಿಲ್ಲ ಎಂದರು.
ಕಳೆದ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದಾ ಮೊಳಕಾಲ್ಮೂರು ಮತದಾರರು ಆಯ್ಕೆ ಮಾಡಿದ್ದರು. ಆಯ್ಕೆಯಾದ ಮೇಲೆ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ. ಅಲ್ಲದೆ ನನಗೆ ದೂರವಾಗುವುದರಿಂದ ಹಳ್ಳಿಗಳಿಗೆ ಭೇಟಿ ನೀಡಲು ಆಗುತ್ತಿಲ್ಲ. ಮುಖ್ಯವಾಗಿ ಸ್ಥಳೀಯರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಬಳ್ಳಾರಿಯಲ್ಲಿ ಸ್ಪರ್ಧಿಸುವುದಾಗಿ ಕಾರಣ ತಿಳಿಸಿದರು.
ಮೊಳಕಾಲ್ಮೂರು ನನಗೆ ಪವಿತ್ರ ಸ್ಥಳ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ. ಪಟ್ಟಣದ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿದೆ. ಮಿನಿ ವಿಧಾನ ಸೌಧಕ್ಕೆ ರೂ.೨ ಕೋಟಿ ಹೆಚ್ಚುವರಿ ಅನುದಾನ ನೀಡಿ ಪೂರ್ಣಗೊಳಿಸಲಾಗಿದೆ. ವಾಲ್ಮೀಕಿ ಭವನಕ್ಕೆ ರೂ.೨ ಕೋಟಿ ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ ಎಸ್.ಸಿ. ಹಾಗೂ ಎಸ್.ಟಿ. ಮೀಸಲಾತಿ ಹೆಚ್ಚಿಸಿದೆ. ಎಸ್.ಟಿ ಸಮುದಾಯದ ಶೇ.೩ ರಷ್ಟು ಮೀಸಲಾತಿಯನ್ನು ಶೇ.೭ಕ್ಕೆ ಹೆಚ್ಚಿಸಲಾಗಿದೆ. ಎಸ್.ಸಿ.ಮೀಸಲಾತಿಯನ್ನು ಶೇ.೧೫ ರಿಂದ ೧೭ಕ್ಕೆ ಹೆಚ್ಚಿಸಲಾಗಿದೆ. ಶಾಸಕರ ಅನುದಾನದಲ್ಲಿ ಕ್ಷೇತ್ರದ ೧೭೦ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿದೆ. ವಸತಿ ರಹಿತ ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ೨೫೦೦ ಮನೆಗಳ ನಿರ್ಮಿಸಲಾಗುತ್ತಿದೆ. ಮೊಳಕಾಲ್ಮೂರು ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಅಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದರು.