ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿ ಚುನಾವಣೆಯ ಕಾವೇರುತ್ತಿರುವ ಬೆನ್ನಲ್ಲೇ ನಗರದ ಬ್ರೂಸ್‌ಪೇಟೆ ಪೊಲೀಸರು ಕೋಟಿಗಟ್ಟಲೇ ಹಣ, ಚಿನ್ನ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ದಾಖಲೆ ರಹಿತ ೭.೬೦ ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಚಿನ್ನ, ಬೆಳ್ಳಿ ವ್ಯಾಪಾರಿ ನರೇಶ್ ಎಂಬುವವರ ಮನೆಯಲ್ಲಿ ನಗದು, ಚಿನ್ನ, ಬೆಳ್ಳಿ ಸಿಕ್ಕಿದೆ. ಕಂಬಳಿ ಬಜಾರ್‌ನಲ್ಲಿರುವ ಚಿನ್ನದ ವ್ಯಾಪಾರಿ ನರೇಶ್ ಸೋನಿ ಎನ್ನುವವರ ಮನೆಯಲ್ಲೇ ದಾಳಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಮನೆಯಲ್ಲಿದ್ದ ೫.೬೦ ಕೋಟಿ ರೂ. ನಗದು ಹಣ, ೧.೪ ಕೋಟಿ ರೂ. ಮೌಲ್ಯದ ಮೂರು ಕೆಜಿ ಚಿನ್ನದ ಆಭರಣ, ೪೨ ಕೆಜಿ ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಬೆಂಗಳೂರು ರಸ್ತೆಗೆ ಹೊಂದಿಕೊಂಡಿರುವ ಲಕ್ಷ್ಮೀನರಸಿಂಹ (ಎಲ್‌ಎನ್) ದೇವಸ್ಥಾನ ಬೀದಿಯಲ್ಲಿ ಹೇಮಾ ಜ್ಯುವೆಲ್ಲರ್ಸ್ ಮಳಿಗೆಯನ್ನು ಹೊಂದಿರುವ ನರೇಶ್ ಸೋನಿ, ಸಗಟು, ಗಟ್ಟಿಚಿನ್ನದ ಬಿಸ್ಕತ್ ವ್ಯಾಪಾರ ಮಾಡುತ್ತಿದ್ದರಂತೆ. ಜೊತೆಗೆ ಈ ಹಿಂದೆ ಕೆಆರ್‌ಪಿ ಪಕ್ಷದದೊಂದಿಗೂ ಗುರುತಿಸಿಕೊಂಡಿದ್ದರಂತೆ.
ನಗರದ ಎರಡು ಮಳಿಗೆಗಳ ಮೇಲೆ ಶನಿವಾರ ಮಾರಾಟ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರಿಂದ ಅಂಗಡಿಯಲ್ಲಿದ್ದುದನ್ನು ಮನೆಗೆ ತೆಗೆದುಕೊಂಡು ಹೋಗಿ ಇಟ್ಟಿರಬೇಕು. ಯಾರೋ ಆಗದವರು ಈ ಖಚಿತ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.