ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿವೆ. ಈ ಸುದೀರ್ಘ ಕಾಲಾವಧಿಯಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡಿರುವ ದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ ಎನ್ನುವುದು ನಿರ್ವಿವಾದದ ಸಂಗತಿ.
ಬ್ರೀಟಿಷರ ಕೈಯಿಂದ ಮುಕ್ತಿ ಪಡೆದ ಭಾರತದ ರಾಜಕೀಯ ನಾಯಕರ ದೇಶದ ಚುಕ್ಕಾಣಿ ಹಿಡಿದಾಗ ಇದ್ದಂತ ಸಾಲು ಸಾಲು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ತಂದು ನಿಲ್ಲಿಸಿದ ದೇಶದ ಮಹನೀಯರನ್ನು ಯುವಜನತೆ ಸ್ಮರಿಸಬೇಕು. ಕೆಲವು ವರ್ಷಗಳ ಹಿಂದೆ ಇದ್ದಂತಹ ರಾಜಕೀಯ ವ್ಯವಸ್ಥೆ ಪ್ರಸ್ತುತ ಮಾಯವಾಗಿದೆ. ಹಣ ಗಳಿಸುವುದಕ್ಕಾಗಿಯೇ ರಾಜಕಾರಣಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಆಪಾದನೆಗಳ ನಡುವೆ ಕೆಲವು ವ್ಯಕ್ತಿಗಳು ತಮ್ಮ ಕಳಂಕರಹಿತ ವ್ಯಕ್ತಿತ್ವದಿಂದ ಅಜರಾಮರಾಗಿ ಉಳಿದಿದ್ದಾರೆ.
ಅಂತವರ ಸಾಲಿಗೆ ಚಿತ್ರದುರ್ಗದ ಮಾಜಿ ರಾಜ್ಯಸಭಾ ಸದಸ್ಯರಾದ ಎಚ್. ಹನುಮಂತಪ್ಪನವರೂ ಕೂಡ ಸ್ಮರಣೀಯರು. 94 ವಸಂತಗಳನ್ನು ಪೂರೈಸಿರುವ ಮುತ್ಸದ್ಧಿ ರಾಜಕಾರಣಿ ಎಚ್. ಹನುಮಂತಪ್ಪನವರು ಸತತ 18 ವರ್ಷಗಳ ಕಾಲ ರಾಜ್ಯಸಭೆಯ ಸದಸ್ಯರಾಗಿ ಕೇಂದ್ರ ಸರ್ಕಾರದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಸರ್ಕಾರ ರಚನೆಯ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಶ್ರೀಯುತರು ಶುದ್ಧಹಸ್ತದ ರಾಜಕಾರಣಿಗಳು. ಸುದೀರ್ಘ 60 ವರ್ಷಗಳ ಕಾಲ ಮುಂಚೂಣಿ ರಾಜಕಾರಣದಲ್ಲಿದ್ದರೂ ಕೂಡ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಹಣ ಗುಡ್ಡೆ ಹಾಕಲಿಲ್ಲ. ತಮ್ಮ ಮಕ್ಕಳು, ಸಂಬಂಧಿಗಳಿಗೆ ರಾಜಕಾರಣಕ್ಕೆ ಅವಕಾಶ ನೀಡಲಿಲ್ಲ. ಈಗಲೂ ಕೂಡ ಚಿತ್ರದುರ್ಗದಲ್ಲಿ ಹಳೆಯ ಮನೆಯೊಂದರಲ್ಲಿ ವಾಸಿಸುತ್ತಾ ಜನಸಾಮಾನ್ಯರಂತೆ ಬದುಕುತ್ತಿರುವ ಎಚ್. ಹನುಮಂತಪ್ಪನವರು ಎಂದಿಗೂ ತತ್ವ-ಸಿದ್ಧಾಂತಗಳನ್ನು ಬಿಟ್ಟುಕೊಟ್ಟು ನಡೆದವರಲ್ಲ. ಇಂಥ ಮಹನೀಯರು ಪ್ರಸ್ತುತ ರಾಜಕಾರಣಕ್ಕೆ ರೋಲ್ ಮಾಡೆಲ್ ಆಗಬೇಕಿದೆ.