ಒಂದು ಪ್ಲೇಟಲ್ಲಿ ಹೆಸರುಬೇಳೆ ಕೋಸಂಬರಿ, ಎರಡು ಟಂಬ್ಲರ್‌ಗಳಲ್ಲಿ ಪಾನಕ ಮತ್ತು ನೀರು ಮಜ್ಜಿಗೆ ತಂದಿಟ್ಟಿದ್ದಳು ವಿಶ್ವನ ಮಡದಿ ವಿಶಾಲು. ಎಲ್ಲಿಂದ ಶುರು ಮಾಡಬೇಕೆಂಬುದೇ ಗೊತ್ತಾಗಲಿಲ್ಲಿ.
“ಜಾಸ್ತಿ ಆಗುತ್ತೆ ಸ್ವಲ್ಪ ತೆಗೆದು ಬಿಡಿ” ಎಂದೆ.
“ಅದು ದೇವರ ಪ್ರಸಾದ, ರಾಮನವಮಿ ದಿನ ಪಾನಕ, ಕೋಸಂಬರಿ ಬೇಡ ಅಂದ್ರೆ ಕುಂಭಕರ್ಣ ಆಗಿ ಹುಟ್ತಾರಂತೆ” ಎಂದು ಹೆದರಿಸಿದಳು.
ವಿಶ್ವ ರೆಕ್ಮೆಂಡ್ ಮಾಡಿದ
“ಒಂದಾದ್ ಮೇಲೆ ಒಂದ್ ತಗೋ, ಮಧ್ಯೆ ಮಧ್ಯೆ ಮಜ್ಜಿಗೆ ಕುಡಿ. ಶ್ರೀರಾಮನವಮಿ ಬರೋದೇ ಬಿಸಿಲು ಕಾಲದಲ್ಲಿ, ಬಿಸಿಲಿಗೆ ಹೆಸರುಬೇಳೆ ಬಹಳ ತಂಪು, ಇನ್ನು ದಾಹ ತಣಿಸೋಕೆ ಪಾನಕ, ನೀರು ಮಜ್ಜಿಗೆ ಅದ್ಭುತ”.
“ಪಾನಕ, ಪಣ್ಯಾರಕ್ಕೆ ನಮ್ಮ ಮನೆಗೆ ಬಂದಿದ್ದು ಸಂತೋಷವಾಯ್ತು” ಎಂದಳು ವಿಶಾಲು. ಆಗ ವಿಶ್ವ ಅನುಮಾನದಿಂದ ಪ್ರಶ್ನಿಸಿದ.
“ಪಾನಕ ಗೊತ್ತು ಈ ಪಣ್ಯಾರ ಅಂದ್ರೆ ಏನು?”
“ಪಣ್ಯಾರ ಅಂದ್ರೆ ದೇವರಿಗೆ ನೈವೇದ್ಯವಾಗಿ ಅರ್ಪಿಸುವ ಕೋಸಂಬರಿ, ರಸಾಯನ, ಇತ್ಯಾದಿಗಳಿಗೆ ಪಣ್ಯಾರ ಅಂತ ಹೇಳ್ತಾರೆ” ಎಂದೆ.
ಶ್ರೀರಾಮನವಮಿಯನ್ನು ಭಕ್ತಿಯಿಂದ ನೆರವೇರಿಸಿದ್ದಳು ವಿಶಾಲು.
“ನಮ್ಮ ರಾಮ ಪಟ್ಟ ಕಷ್ಟದ ಮುಂದೆ ನಮ್ಮ ಕಷ್ಟ ಏನೇನೂ ಇಲ್ಲ” ಎಂದಳು.
“ಹೌದು ವಿಶಾಲು, ನೀನ್ಹೆಳೋದು ಕರೆಕ್ಟ್. ಹೆಂಡ್ತೀನ ರಾವಣ ಹೊತ್ತುಕೊಂಡು ಹೋದ, ಈ ಕಾಲ್ದಲ್ಲಿ ಆಗಿದ್ರೆ ಬಿಡಿಸಿಕೊಂಡು ಬರೋಕೆ ಗಂಡ ಹೋಗ್ತ್ತಾನೇ ರ‍್ಲಿಲ್ಲ.”
ವಿಶಾಲುಗೆ ಸಿಟ್ಟು ಬಂತು.
“ರೀ, ರಾಕ್ಷಸ ಬಂದು ನನ್ನ ಕಿಡ್ಯ್ನಾಪ್ ಮಾಡ್ಕೊಂಡ್ ಹೋದ್ರೆ ಬಿಡಿಸಿಕೊಳ್ಳೋಕೆ ಬರೋದಿಲ್ವಾ ನೀವು?” ಎಂದು ಕೇಳಿದಳು.
“ತುಂಬಾ ರಿಸ್ಕು, ಪೊಲೀಸ್ ಕಂಪ್ಲೇಯಂಟ್ ಕೊಟ್ಟು ಸುಮ್ಮನಾಗ್ತೀನಿ ಯಾಕೇಂದ್ರೆ ಹೆಂಡತಿ ಇಲ್ಲದಿದ್ರೆ ನೆಮ್ಮದಿ ಇರುತ್ತಲ್ಲ?” ಎಂದು ಬಾಯಿ ತಪ್ಪಿ ಹೇಳಿ ಬಿಟ್ಟ. ವಿಶಾಲುಗೆ ಮತ್ತಷ್ಟು ಸಿಟ್ಟು ಬಂತು.
ಆ ವೇಳೆಗೆ ಬಾಗಿಲು ಸದ್ದಾಯ್ತು, ರಾಜಕಾರಣಿ ರಾಜಣ್ಣ ತನ್ನ ಶಿಷ್ಯರೊಂದಿಗೆ ಬಂದಿದ್ದ. ಎರಡು ಬಕೆಟ್ ಪಾನೀಯ ಮತ್ತು ಕೋಸಂಬರಿಯ ಮಂಕರಿ ತಂದಿದ್ದ.
“ನಮಸ್ಕಾರಮ್ಮ, ಶ್ರೀರಾಮನವಮಿ ಹಬ್ಬದ ಶುಭಾಶಯಗಳು, ಪಾನಕ, ನೀರು ಮಜ್ಜಿಗೆ ಕೊಡ್ತಾ ಇದ್ದೀನಿ” ಎಂದು ಹೇಳಿ ಪ್ಲಾಸ್ಟಿಕ್ ತಟ್ಟೆ, ಲೋಟಗಳಲ್ಲಿ ಕೋಸಂಬರಿ, ನೀರು ಮಜ್ಜಿಗೆ ಮತ್ತು ಪಾನಕ ಕೊಟ್ಟ.
“ಪ್ರತೀ ವರ್ಷ ಶ್ರೀರಾಮನವಮಿ ಬರುತ್ತೆ, ಯಾವತ್ತು ಬರದೇ ಇರೋರು ಇವತ್ತು ಬಂದಿದ್ದೀರಲ್ಲ? ಎಂದ ವಿಶ್ವ.
“ಕಾರ್ಯವಾಸಿ ಕತ್ತೆ ಕಾಲು ಕಟ್ಟು ಎಂಬ ಗಾದೆನೇ ಇದೆ” ಎಂದಳು ವಿಶಾಲು, ರಾಜಕಾರಣಿ ನಕ್ಕು,
“ಉಗಿಸಿಕೊಂಡು ಅಭ್ಯಾಸ ಇದೆಯಮ್ಮ, ಓಟು ಕೊಡೋ ಜನಕ್ಕೆ ನಾನು ಕತ್ತೆ ಥರ ಸೇವೆ ಮಾಡ್ತೀನಿ”ಎಂದ
ವಿಶ್ವ ಅಟ್ಯಾಕ್ ಶುರು ಮಾಡಿದ.
“ಐದು ವರ್ಷ ಆಯ್ತು ನಿಮ್ಮ ಮುಖ ನೋಡಿ, ನಿಮ್ಮ ಆಫೀಸ್‌ಗೆ ಬಂದಾಗ ನನ್ನ ಒಳಗೆ ಬಿಡಲಿಲ್ಲ, ಇವತ್ತು ನೀವೇ ನಮ್ಮ ಮನೆ ಬಾಗಿಲಿಗೆ ಬಂದಿದ್ದೀರ”
“ಗೆದ್ದ ಮೇಲೆ ಬ್ಯುಸಿ ರ‍್ತೀವಿ, ಎಲೆಕ್ಷನ್‌ಗೆ ನಿಂತಾಗ ಜನರನ್ನು ಭೇಟಿ ಮಾಡೋಕೆ ಪರ‍್ಸೊತ್ತು ಸಿಗುತ್ತೆ ಬಂದು ನಮಸ್ಕಾರ ಮಾಡ್ತೀವಿ, ಕೈಲಾಗಿದ್ದನ್ನ ಕೊಟ್ಟು ಹೋಗ್ತೀವಿ” ಎಂದ.
“ಕೈಲಾಗಿದ್ದು ಅಂದ್ರೆ ಪಾನಕ ಕೋಸಂಬರಿನಾ?” ಎಂದು ಕೇಳಿದಳು ವಿಶಾಲು.
“ಶ್ರೀರಾಮನವಮಿಯ ದಿನ ನೀವು ಬಂದಿರೋದು, ಶ್ರೀರಾಮನಿಗೂ ಸಂತೋಷ ಆಯ್ತು, ರಾಮರಾಜ್ಯ ಕೊಡಿಸ್ತ್ತೀರ” ಎಂದು ವಿಶ್ವ ಕೇಳಿದ.
“ಖಂಡಿತ ಕೊಡಿಸ್ತೀನಿ ಸರ್, ನಮ್ಮ ಪಾರ್ಟಿನ ಗೆಲ್ಲಿಸಿ ನೀವು ಕೇಳಿದಕ್ಕೆಲ್ಲ ಯಸ್ಸು”
“ಕೆಲವರು ಉಚಿತವಾಗಿ ಬಸ್ ಕೊಟ್ಟಿದ್ದಾರೆ, ನೀವು?” ಎಂದಳು ವಿಶಾಲು.
“ನಾನು ಉಚಿತವಾಗಿ ರೈಲು ಕೊಡ್ತೀವಿ” ಎಂದು ರೈಲು ಬಿಟ್ಟ.
“ಹೌದು ಇದಕ್ಕೆಲ್ಲ ದುಡ್ಡು ಎಲ್ಲಿಂದ ಬರುತ್ತೆ?” ಎಂದಳು ವಿಶಾಲು.
“ಕಾಗೇನ ಹೊಡ್ದು ಹದ್ದಿಗೆ ಹಾಕ್ತಾರೆ” ಎಂದೆ ನಾನು.
“ನಿಜವಾದ ಮಾತು, ನಮ್ಮ ದುಡ್ಡು ನಮಗೇ ಕೊಡ್ತೀರ. ಪೂರ್ತಿ ನಮಗೇ ಕೊಡ್ತೀರಾ?” ಎಂದು ಕೇಳಿದಳು.
“ಎಲ್ಲಾದ್ರೂ ಉಂಟೇ ತಾಯಿ, ನಮ್ಮ ಕಮಿಷನ್ ನಾವು ಹಿಡ್ಕೊಂಡ್ ಬಾಕಿ ಎಲ್ಲಾ ನಿಮಗೇ ಕೊಡ್ತೀವಿ”
“ರಾಜಕೀಯ ಅಂದ್ರೆ ಕಮಿಷನ್ ಹೊಡೆಯೋ ಕೆಲ್ಸಾನಾ?” ಎಂದು ವಿಶಾಲು ನೇರವಾಗಿ ಕೇಳಿದಳು.
“ಹಾಗೇನು ಇಲ್ಲ ತಾಯಿ, ಬಡವರಿಗೆ ಹಂಚೋಕೆ ಯಾರಾದ್ರೂ ನೇತೃತ್ವ ವಹಿಸಬೇಲ್ಲ?”
“ಒಂದೇ ಒಂದು ಪ್ರಶ್ನೆ, ಶ್ರೀರಾಮನನ್ನು ಇಡೀ ಜಗತ್ತೇ ಪೂಜೆ ಮಾಡುತ್ತೆ, ಅವನ ಜಾತಿ ಯಾವುದು ಎಂದು ಯಾರೂ ಕೇಳ್ಲಿಲ್ಲ. ಭಾರತ ಕೂಡ ಜಾತ್ಯಾತೀತ ರಾಷ್ಟç ಅಂತಾರೆ, ಸರಿಯಾ?” ಎಂದು ಕೇಳಿದಳು ವಿಶಾಲು.
“ಜಾತ್ಯಾತೀತ ರಾಷ್ಟ್ರ ಅಂದ್ರೆ ಜಾತಿಯನ್ನು ಮೀರಿದ ರಾಷ್ಟ್ರ, ಜಾತಿ ಇಲ್ಲದ ರಾಷ್ಟ್ರ” ಎಂದು ವಿವರಿಸಿದ ಆತ. “ನಮ್ಮಲ್ಲಿ ಜಾತಿ, ಭೇದ, ಭಾವ ಇಲ್ಲ. ಎಲ್ಲರೂ ಸಮಾನರು” ಎಂದ.
“ಹಾಗಿದ್ರೆ ನೀವು ಜಾತಿ ಆಧಾರದ ಮೇಲೆ ಸೀಟುಗಳನ್ನು ಹಂಚೋದ್ಯಾಕೆ? ಯಾವ ಯಾವ ಊರುಗಳಲ್ಲಿ ಯಾವ ಜಾತಿಯ ಜನ ಇದ್ದಾರೆ, ಅಂತ ಅಂಕಿ ಅಂಶ ಕಲೆ ಹಾಕೋದ್ಯಾಕೆ?” ಎಂದು ಬೆಂಡ್ ಎತ್ತಿದಳು.
“ಎಲೆಕ್ಷನ್ ಟೈಮಲ್ಲಿ, ಜಾತಿ ವಿವರ ಬೇಕಾಗುತ್ತಮ್ಮ, ನಮ್ಮ ಜಾತಿಯವರು ಬಂದ್ರೆ ನಮಗೆ ಅನುಕೂಲ ಅಲ್ವೆ, ಮಠಗಳು ಇರೋವರೆಗೂ ಜಾತಿ ಇರುತ್ತಮ್ಮ” ಎಂದ ರಾಜಕಾರಣಿ.
“ಬಸವಣ್ಣನವರು ಜಾತಿ ನಿರ್ಮೂಲನೆ ಮಾಡಿದ್ರು. ನೀವು ಮತ್ತೆ ಜಾತಿ ರ‍್ತಾ ಇದ್ದೀರಾ?” ಎಂದು ವಿಶಾಲು ಸವಾಲು ಎಸೆದಳು.
ಈ ವಿತಂಡ ವಾದಕ್ಕೆ ಕೊನೆ ಮೊದಲು ಇರುವಂತೆ ಕಾಣಲಿಲ್ಲ.
“ನೋಡಮ್ಮ, ಜಾತೀನ ಯಾವ ಅಪ್ಲಿಕೇಷನ್‌ನಿಂದಲೂ ತೆಗೆದಿಲ್ಲ ಏಕೆ ಅಂತಂದ್ರೆ, ರಾಜಕೀಯದಲ್ಲಿ ಜಾತಿ ಬಹಳ ಮುಖ್ಯ ಆಗುತ್ತೆ, ಧರ್ಮ ಮುಖ್ಯ ಆಗುತ್ತೆ, ಜಾತಿನ ನೋಡೇ ಜನರನ್ನ ಚುನಾವಣೆಗೆ ನಿಲ್ಸೋದು” ಎಂದು ಸತ್ಯ ಹೇಳಿದ.
“ನನ್ನಿಂದ ಏನಾದ್ರೂ ಸಹಾಯ ಆಗೋದು ಇದ್ಯಾ?” ಎಂದು ವಿಶ್ವ ಕೇಳಿದ.
“ಏನೂ ಇಲ್ಲ, ನಾನು ಇಂಡಿಪೆಂಡೆಂಟ್ ಆಗಿ ನಿಂತಿದ್ದೀನಿ, ನಿಮ್ಮ ಓಟು ನನಗೇ ಒತ್ತ ಬೇಕು”
“ನಿಮಗೆ ಒತ್ತೋದ್ರಿಂದ ನಮಗೇನು ಅನುಕೂಲವಾಗುತ್ತೆ?”
“ನೀವು ಕೇಳಿದ್ದೆಲ್ಲಾ ಕೊಡ್ತೀವಲ್ಲ, ಇಂಥಾದ್ ಇಲ್ಲ ಅನ್ನೋ ಮಾತೇ ಇಲ್ಲ, ಚಾಮುಂಡಿ ಬೆಟ್ಟ ಕೇಳಿ ಬೆಂಗಳೂರಿಗೆ ಶಫ್ಟ್ ಮಾಡ್ಸಿ ಕೊಡ್ತೀವಿ, ಗಂಗಾ ನದಿ ಕೇಳಿ ಟನಲ್ ಮುಖಾಂತರ ಹೆಸರುಘಟ್ಟಕ್ಕೆ ನೀರು ಹೊಡೆಸ್ತೀವಿ” ಎಂದ. ವಿಶ್ವನಿಗೆ ಖುಷಿ ಆಯ್ತು.
“ಐದು ವರ್ಷ ಆದ ಮೇಲೆ ಬಂದಿದ್ದೀರ, ಪಾನಕ – ಪಣ್ಯಾರ ತಗೋಬೇಕು” ಎಂದಳು ವಿಶಾಲು.
“ಬೇಡ ತಾಯಿ, ಹೊಟ್ಟೆ ತುಂಬೋಗಿದೆ” ಎಂದು ಕೈ ಮುಗಿದ.
“ಮನುಷ್ಯ ಸಾಕು ಅನ್ನೋದು ಊಟಕ್ಕೆ ಮಾತ್ರ, ದುಡ್ಡು ಎಷ್ಟು ಕೊಟ್ರು ತಗೋತಾನೆ ಅಲ್ವಾ?” ಎಂದಳು ವಿಶಾಲು. ರಾಜಣ್ಣನಿಗೆ ಮಾತು ಚುಚ್ಚಿದಂತಾಯ್ತು.
“ಇರಲಿ ಇನ್ನು ತುಂಬಾ ಮನೆಗಳಲ್ಲಿ ಓಟ್ ಕೇಳೋದಿದೆ, ರ‍್ಲಾ?” ಎಂದು ಬಕೆಟ್‌ಗಳ ಹಿಡಿದು ಜಾಗ ಖಾಲಿ ಮಾಡಿದ.