ಕಾಂತಾರ…
ಸಿನೆಮಾ ಜಗತ್ತಿನಲ್ಲಿ ಈಗ ಇದರದ್ದೇ ಹವಾ. ಕೋಲ, ದೈವ, ಕಂಬಳ, ಕಾನನ ಈ ಸಾಂಸ್ಕೃತಿಕ ಮತ್ತು ಕರಾವಳಿಯ ಜೀವಸೆಲೆಗೆ ಬೆರಗುಗೊಳ್ಳದವರಿಲ್ಲ.
ಕಾಂತಾರ ಎಂದರೆ ಒಂದು ನಿಗೂಢವಾದ ದಟ್ಟಾರಣ್ಯ. ಈ ಸಿನೆಮಾದಲ್ಲೂ ಕಾಡು ಮತ್ತು ಕಾಡಿನ ಸಂರಕ್ಷಣೆ, ಕಾಡಿನೊಂದಿಗಿನ ಬದುಕು ಪ್ರಮುಖ ಪಾತ್ರ ವಹಿಸುತ್ತದೆ. ಕಾಡಿನ ಮಕ್ಕಳಾಗಿ ಅದನ್ನು ಪೂಜಿಸುತ್ತ, ಗೌರವಿಸುತ್ತ ಬದುಕುವ ಜನರಿಗೆ, ಒಂದು ಮರದ ತುಂಡು ಆಚೆ ಹೋಗದಂತೆ ಕಾನ ದೇವರ ಪೂಜೆಯೇ ಪ್ರಧಾನವಾಗಿ ಭಕ್ತಿ ಭಾವನೆಯೊಂದಿಗೆ ಗಮನಸೆಳೆಯುವ ಚಿತ್ರ. ಅಲ್ಲಿರುವ ಅರಣ್ಯಭೂಮಿಯ ಒತ್ತುವರಿ, ಒಕ್ಕಲೆಬ್ಬಿಸುವಿಕೆ, ಅರಣ್ಯ ಸಂಪತ್ತಿನ ಲೂಟಿ, ಅಧಿಕಾರಿಗಳ ತಿಕ್ಕಾಟ ಇತ್ಯಾದಿಗಳು ವಾಸ್ತವ ಹೈಲೈಟ್.
ಹಾಗಾಗಿಯೇ, ಕಾಂತಾರ ಜನಸಾಮಾನ್ಯರ, ನಮ್ಮೆಲ್ಲರ ಬದುಕಿನ ಕತೆಯಾಗಿ, ನಮ್ಮೂರಿನ ಸಮಸ್ಯೆಯಾಗಿ ಎಲ್ಲರ ಮನಸ್ಸನ್ನು ಕಾಡುತ್ತಿದೆ.
ಕಾಂತಾರ ಚಿತ್ರ ಬಿಡುಗಡೆಯಾದ ಎರಡು ಮೂರು ದಿನದಲ್ಲಿಯೇ ಮಲೆನಾಡು ಮತ್ತು ಕರಾವಳಿ ಭಾಗದ ಜನರಲ್ಲಿ ನಮ್ಮ ರಕ್ಷಣೆಗೆ ದೈವ-ಕೋಲ ಬೇಕಾಗಿದೆ' ಎನ್ನುವ ಹೆಚ್ಚು ಹೆಚ್ಚು ಅನ್ನಿಸಿದೆ. ಚಿತ್ರ ಬಿಡುಗಡೆಯಾದ ಎರಡು- ಮೂರು ದಿನದಲ್ಲಿಯೇ ಶರವಾತಿ ಜಲವಿದ್ಯುತ್ ಯೋಜನೆ ಸಂತ್ರಸ್ಥರ ಬದುಕು ಅತಂತ್ರವಾಯಿತು. ಹಾಗೆಯೇ ಅರಣ್ಯ ಸಂರಕ್ಷಿಸಿಕೊಂಡು ಬದುಕು ಕಟ್ಟಿಕೊಂಡ ಮಲೆನಾಡು-ಕರಾವಳಿಯ ಸಾವಿರಾರು ಕುಟುಂಬಗಳು ನಮ್ಮೂರಿಗೂ ಕಾಂತಾರದ ದೈವವಿದ್ದು ನಮ್ಮನ್ನು ರಕ್ಷಿಸಿರೆ ಎಷ್ಟು ಚೆನ್ನ ಎಂದುಕೊಳ್ಳುವಂತೆ ಈ ಸರ್ಕಾರ ಮಾಡಿಬಿಟ್ಟಿತು.! ಆರವತ್ತು ವರ್ಷಗಳ ಹಿಂದೆ ಈ ನಾಡಿಗೆ ಬೆಳಕು ನೀಡಲು ತಮ್ಮ ತೋಟ-ಮನೆ ಸರ್ವಸ್ವವನ್ನು ತ್ಯಾಗ ಮಾಡಿದ, ಜೀವನವನ್ನೇ ಬಲಿಕೊಟ್ಟ ಸಹಸ್ರಾರು ಕುಟುಂಬಗಳು, ತಮಗೆ ನೀಡಿದ ಪುನರ್ವಸತಿಯ ಭೂಮಿಯ ಹಕ್ಕನ್ನು ಕಳೆದುಕೊಂಡು ಮತ್ತೆ ನಿರ್ಗತಿಕರಾದರು. ಸರ್ಕಾರಿ ವ್ಯವಸ್ಥೆ ಪ್ರಭುತ್ವವಾದಿಗಳ, ಜನಪ್ರತಿನಿಧಿಗಳ ಬೇಜವಾಬ್ದಾರಿತ ನವನ್ನ ಕಾಂತಾರದಲ್ಲಿಯ ದೇವೇಂದ್ರನಂಥ ಕುಯುಕ್ತಿ ಯನ್ನು ಜನ ಕಂಡರು. ಶರಾವತಿ ಯೋಜನೆಯಲ್ಲಿ ಸಂತ್ರಸ್ತರಾದವರಿಗೆ ಆರು ದಶಕಗಳ ಹಿಂದೆ ಶಿವಮೊಗ್ಗಾ, ಉತ್ತರಕನ್ನಡದ ಅರಣ್ಯ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸಿ ಸರ್ಕಾರ ಆ ಭೂಮಿಯ ಹಕ್ಕನ್ನೇ ನೀಡಿಲ್ಲ. ಹೋರಾಟ-ಆಕ್ರೋಶ ಎಲ್ಲವನ್ನೂ ಬಳಸಿ ಅಂತೂ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಡಿನೋಟಿಫೈ ಮಾಡಿರೂ, ಈಗ ಡಿನೋಟಿಫೈ ಮಾಡಿ ರುವುದೇ ಕಾನೂನು ಬಾಹಿರ ಎಂದು ಈಗ ಅಧಿಸೂಚನೆಯನ್ನೇ ರದ್ದುಗೊಳಿಸಿರಿಂದ ಲಿಂಗನಮಕ್ಕಿ ಆಣೆಕಟ್ಟೆಯಲ್ಲಿ ಅವರನ್ನೆಲ್ಲ ಪುನಃ ಮುಳುಗಿಸುವಂತಹ ಸ್ಥಿತಿ! ನಿಜ. ಶರಾವತಿ ಸಂತ್ರಸ್ಥರು ಬದುಕು ಅಷ್ಟೇ ಅಲ್ಲ. ಮಲೆನಾಡು-ಕರಾವಳಿ ಭಾಗದಲ್ಲಿ ಅರಣ್ಯವೇ ದೇವತೆಯೆಂದು ನಂಬಿಕೊಂಡು ಅದರ ಪಕ್ಕದಲ್ಲೇ ಭೂಮಿ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡ ಬುಡಕಟ್ಟು ಸಮುದಾಯ, ಕೃಷಿಕ ಕುಟುಂಬ ಎಲ್ಲರ ಸ್ಥಿತಿ ಈಗ ಕಾಂತಾರದ ರೋದನವಾಗಿದೆ. ಕಾಂತಾರದ ಗೋಳಾಗಿದೆ! ಇದೀಗ ಶರಾವತಿ, ವಾರಾಹಿ, ಚಕ್ರ, ಗೇರುಸೊಪ್ಪ, ಕದ್ರಾ, ಸೀಬರ್ಡ್, ಕಾಳಿಯ ಎಲ್ಲ ಸಂತ್ರಸ್ಥರಿಗೆ ಅನ್ವಯವಾಗುವ ಮಾತು. ಸಂತ್ರಸ್ಥರಾದ ಜನರಿಗೆ ಸರ್ಕಾರವೇ ಅರಣ್ಯ ಭೂಮಿಯಲ್ಲಿ ಜಾಗ ಕಲ್ಪಿಸಿ ಕೃಷಿ ಮಾಡಿಕೊಳ್ಳಲು ಅವಕಾಶ ನೀಡಿ ಅವರಿಗೆ ಭೂಮಿಯ ಹಕ್ಕನ್ನು ಕೊಡದೆ ಗೋಳಾಡಿಸಿ ಬದುಕು ಹೈರಾಣಗೊಳಿಸಿರುವುದು! ಇನ್ನು ೨೦ನೇ ಶತಮಾನದ ೫೦-೬೦-೭೦ರ ದಶಕಗಳಲ್ಲಿ ಹಸಿರು ಕ್ರಾಂತಿಗೆ ಪೂರಕವಾಗಿ ಕೃಷಿ ಯೋಗ್ಯ ಭೂಮಿ ಯನ್ನು ಅರಣ್ಯ ಇಲಾಖೆ ಕೃಷಿ ಮಾಡಿಕೊಳ್ಳಲು ಅವಕಾಶ ಕೊಟ್ಟು ಅವರಿಗೆ ಭೂಮಿಯ ಹಕ್ಕನ್ನು ಕೊಡಲಿಲ್ಲ. ಇದು ದೇಶಾದ್ಯಂತ ಇದೆ. ಮೂರನೆಯದ್ದು ಕಾಂತಾರ ಚಿತ್ರದಲ್ಲಿರುವಂತೆ ಅರಣ್ಯವನ್ನೇ, ಅದರ ಉತ್ಪನ್ನವನ್ನು ನಂಬಿ ಅರಣ್ಯ ಸಂಪತ್ತು ಸಂರಕ್ಷಿಸಿಕೊಂಡು ತಾವು ಜೀವನ ಸಾಗಿಸುವ ಪರಂಪರಾಗತ ಬುಡಕಟ್ಟು, ಪರಿಶಿಷ್ಟ ಪಂಗಡ, ಗುಡ್ಡಗಾಡು ಜನರ ಜೀವನ. ಅರಣ್ಯದ ಸೊಪ್ಪು, ಜೇನು, ವನಸ್ಪತಿ ಕಾದುಕೊಳ್ಳುವ ಜೊತೆಗೆ, ಪಕ್ಕದ ಭೂಮಿಯನ್ನು ಕೃಷಿ ಮಾಡಿ ಜನ ಜಾನಪದ ಸಂಸ್ಕೃತಿ ಎಲ್ಲವನ್ನೂ ಉಳಿಸಿ ಬೆಳೆಸಿದ ಮಣ್ಣಿನ ಮಕ್ಕಳಿವರು. ಶರಾವತಿ ಜಲವಿದ್ಯುತ್ ಯೋಜನೆ ಆರಂಭಿಸಿದಾಗ ಸಾಗರ, ಲಿಂಗನಮಕ್ಕಿ, ತೀರ್ಥಹಳ್ಳಿ ಭಾಗದ ಸಾವಿರಾರು ಕುಟುಂಬಗಳಿಗೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪುನರ್ವಸತಿ ಕಲ್ಪಿಸಿ, ಕೃಷಿ ಭೂಮಿ ಮಾಡಿಕೊಂಡು ಬದುಕು ಸಾಗಿಸಲು ಸುಮಾರು 15 ಸಾವಿರ ಎಕರೆಯಷ್ಟು ಅರಣ್ಯ ಭೂಮಿಯನ್ನು ಸರ್ಕಾರ ನೀಡಿತ್ತು. ಕೃಷಿಕರೇ ಆಗಿರುವು ದರಿಂದ ಪರಿಹಾರದೊಟ್ಟಿಗೆ ಕೃಷಿ ಭೂಮಿ-ತುಂಡು ನೆಲ ದೊರೆಯಿತಲ್ಲ ಎಂದು ಜನ ಒಪ್ಪಿಕೊಂಡರು. ರಾಜ್ಯಕ್ಕೆ ಬೆಳಕು ಬಂತು. ಈ ಕುಟುಂಬಗಳಿಗೆ ಅಂದಿನಿಂದಲೇ ಕತ್ತಲು ಆರಂಭವಾಯಿತು. ಜಮೀನು ತೋರಿಸಿದ ಸರ್ಕಾರ ಭೂಮಿಯ ಹಕ್ಕನ್ನು ನೀಡಲೇ ಇಲ್ಲ. ನೂರಾರು ಸಭೆಗಳಲ್ಲಿ ಭೂಮಿ ಹಕ್ಕು ಕೊಡಿ ಎಂದು ಈ ಜನ ಕೇಳುತ್ತಲೇ ಬಂದರು. ಲಿಂಗನಮಕ್ಕಿಯಲ್ಲಿ ಮುಳುಗಡೆಯಾದವರರಿಗೆ ಪುನರ್ವಸತಿ ಕಲ್ಪಿಸಿದ ಚಕ್ರ ಊರಿನ ಸನಿಹದ ಸ್ಥಳದಲ್ಲಿ ಮತ್ತೆ ಯೋಜನೆಯಿಂದ ಸಂತ್ರಸ್ಥರಾಗಬೇಕಾಯಿತು. ಈ ಮಧ್ಯೆ ೧೯೮೦ರಲ್ಲಿ ದೇಶದಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ತರಲಾಯಿತು. ಒಂದು ತುಂಡು ಅರಣ್ಯಭೂಮಿಯನ್ನೂ ಅತಿಕ್ರಮಣ ಮಾಡುವಂತಿಲ್ಲ. ಹೀಗೆ ಮಾಡಿದವರನ್ನು ಒಕ್ಕಲೆಬ್ಬಿಸಲೇಬೇಕು. ರಾಜ್ಯ ಸರ್ಕಾರಗಳು ಇಂಥವರಿಗೆ ಕಂದಾಯ ಭೂಮಿಯನ್ನು ಬೇರೆಡೆ ನೀಡಿ ಪುನರ್ವಸತಿ ಕಲ್ಪಿಸಬಹುದು ಎಂದು ಕಾಯ್ದೆ ಹೇಳಿತು. ಈ ಕಾಯ್ದೆ ರಾಜ್ಯಕ್ಕಿ ಅಲ್ಪಸ್ವಲ್ಪ ಹಕ್ಕನ್ನೂ ಕಸಿದುಕೊಂಡಿಲ್ಲದೇ, ಒಂದಿಷ್ಟು ಅರಣ್ಯ ಭೂಮಿ ಮಂಜೂರಾತಿಗೂ ಕೇಂದ್ರದ ಅನುಮತಿ ಕೇಳಬೇಕಾಗಿ ಬಂತು. ಆಗ ಬೆಳಕಿಗಾಗಿ ತ್ಯಾಗ ಮಾಡಿದವರಿರಲ್ಲ, ಅವರೆಲ್ಲ ಮತ್ತೆ ಅತಂತ್ರರಾದರು! ಹಾಗೆಯೇ ಮಲೆನಾಡು-ಕರಾವಳಿ ಅರಣ್ಯ ಅಂಚಿನಲ್ಲಿ ಕೃಷಿ ಮಾಡಿಕೊಂಡು ಬದುಕಿವರ ಬಾಳಲ್ಲೂ ಕತ್ತಲೆ ಆವರಿಸಿತು. ೧೯೮೩ರಿಂದ ಸಂತ್ರಸ್ಥರ ಅಹವಾಲು, ಪ್ರತಿಭಟನೆ, ಒತ್ತಡ, ಒತ್ತಾಸೆಗಳೆಲ್ಲ ಚೂರಾದವು. ಅದೂ ಹೆಚ್ಚಾಗಿ ಛತ್ತೀಸಗಡ, ಬಿಹಾರ, ಉತ್ತರ ಪ್ರದೇಶಗಳಲ್ಲೂ ಈ ಅರಣ್ಯ ಭೂಮಿ ಹಕ್ಕಿನ ಪ್ರಶ್ನೆ ಉದ್ಭವವಾದಾಗ, ೧೯೯೬, ಮೇ ೫ರಂದು, ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೊಳ್ಳುವ ಮೊದಲು, ಅಂದರೆ ಪ್ರಸ್ತಾವನೆ ಮಂಡಿಸುವಾಗಿನ ಸ್ಥಿತಿಯಲ್ಲಿ (೧೯೭೮ರ ಮೊದಲು) ಅರಣ್ಯ ಭೂಮಿ ಅತಿಕ್ರಮಿಸಿಕೊಂಡಿರೆ ಒಂದು ಕುಟುಂಬಕ್ಕೆ ೩ ಎಕರೆಯಷ್ಟು ಮಂಜೂರು ಮಾಡ ಬಹುದು. ಅದಕ್ಕಿಂತ ಹೆಚ್ಚಿನನ್ನು ತೆರವು ಮಾಡುವಂತೆ ಆದೇಶಿಸಲಾಯಿತು. ಕರ್ನಾಟಕದಲ್ಲಿಯೇ ಸುಮಾರು ೬ ಲಕ್ಷ ಕುಟುಂಬಗಳಿವೆ. ಈ ಆದೇಶ ಬಂದರೂ ಜನರಿಗೆ ಮಾತ್ರ ಭೂಮಿಯ ಫಲ ದಕ್ಕಲಿಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸಮೀಕ್ಷೆ, ದಂಡ, ಸರ್ವೇಗಳು, ಒಬ್ಬ ಗಾರ್ಡ್‌ನಿಂದ, ಅರಣ್ಯ ಕಾರ್ಯದರ್ಶಿ, ಕೇಂದ್ರ ಅರಣ್ಯ ಸಚಿವಾಲಯ ಎಲ್ಲವುಗಳಿಗೆ ಕಡತಗಳು ಓಡಾಡಿ ೨೦೧೫ರ ಹೊತ್ತಿಗೆ ೧೯೭೮ರ ಪೂರ್ವ ಅರಣ್ಯ ಅತಿಕ್ರಮಣ ಮಾಡಿಕೊಂಡವರ ಹೆಸರನ್ನು ಆರ್‌ಟಿಸಿಯಲ್ಲಿ ದಾಖಲಿಸುವ ಅಧಿಸೂಚನೆ ಹೊರಬಿತ್ತು. ಅದೂ ಕೂಡ
ಪರಿಭಾವಿತ ಅರಣ್ಯ’ ಎಂದು ರೈತನ ಹೆಸರಿನೊಟ್ಟಿಗೆ ಅರಣ್ಯ ಇಲಾಖೆಯ ಹಕ್ಕೂ ಕೂಡ ಭೂ ದಾಖಲೆಯಲ್ಲಿ ಸೇರಿಕೊಂಡಿತು!
ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಕುಟುಂಬಗಳು ಈ ಸಮಸ್ಯೆಯಲ್ಲಿ ಸಿಲುಕಿಕೊಂಡವು. ಬಾಣಲೆಯಿಂದ ಬೆಂಕಿಗೆ ಎನ್ನುವಂತಹ ಸ್ಥಿತಿ. ನಂತರ ಮತ್ತೊಂದು ಹೋರಾಟ ಶುರುವಾಯಿತು. ಅರಣ್ಯ ಇಲಾಖೆಯ ಹೆಸರು ತೆಗೆದು ಹಾಕಿ ಎನ್ನುವುದು ಒಂದಾದರೆ, ಈ ದಾಖಲೆ ಇಟ್ಟುಕೊಂಡು ಸಾಲಸೋಲ ಸಿಗದಾದಾಗ ಯಾರಿಗೆ ಏನು ಪ್ರಯೋಜನ? ಅಭಿವೃದ್ಧಿಗೊಳ್ಳುವುದು ಹೇಗೆ? ಕೃಷಿ ಉಪಕರಣ ತಂದು ಸುಧಾರಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆ.
ಈ ಮಧ್ಯೆ ಕೇಂದ್ರ ಸರ್ಕಾರ ಹೊಸ ನೀತಿಯನ್ನು ಜಾರಿಗೆ ತಂತು. ಅರಣ್ಯ ಅಂಚಿನಲ್ಲಿರುವ ಅತ್ಯಂತ ಬುಡಕಟ್ಟು ಮೂಲನಿವಾಸಿಗಳು, ತಲೆತಲಾಂತರದಲ್ಲಿ ಸಾಗುವಳಿ ಮಾಡಿಕೊಂಡು ಬಂದಿವರಿಗೆ ಸಾಮಾಜಿಕ ನ್ಯಾಯದಡಿ ಭೂಮಿ ಮಂಜೂರು ಮಾಡಬೇಕು ಎಂಬುದು. ಈ ಸಂಬಂಧ ರಾಜ್ಯದಲ್ಲಿ ೨.೯೫ ಲಕ್ಷ ಜನರ ಅರ್ಜಿ ಬಂದಿರೆ, ಮತ್ತೆ ಸುದೀರ್ಘ ವಿಚಾರಣೆ-ಹೋರಾಟಗಳ ಅದರಲ್ಲಿಯೂ ಪರಿಣಾಮ ೧.೮೪ ಲಕ್ಷ ಜನರ ಅರ್ಜಿಗಳು ತಿರಸ್ಕೃತಗೊಂಡವು!. ಮೂರು ತಲೆಮಾರಿನ ೧೫ ಲಕ್ಷ ಎಕರೆಯಷ್ಟು ಕೃಷಿ ಯೋಗ್ಯ ಭೂಮಿಯನ್ನು, ಗುಂಟೆ- ಅರ್ಧ ಎಕರೆ, ಮೂರು ಎಕರೆವರೆಗೆ ಸಾಗುವಳಿ ಮಾಡಿಕೊಂಡವರ ಒಕ್ಕಲೆಬ್ಬಿಸುವ ಆದೇಶವೂ ಬಂತು. ಇನ್ನೂ ಇವರೆಲ್ಲ ನ್ಯಾಯಾಲಯದ ಮತ್ತು ಅರಣ್ಯ ಇಲಾಖೆಯ ಕಕ್ಷೆಯಲ್ಲಿದ್ದಾರೆ.
೧೯೯೬, ಮೇ ೫ರ ಕೇಂದ್ರದ ಅಧಿಸೂಚನೆ ಇತ್ತಲ್ಲ, ೧೯೭೮ರ ಪೂರ್ವ ಅರಣ್ಯ ಒತ್ತುವರಿ ಮಾಡಿಕೊಂಡವರು ಅಥವಾ ವಿವಿಧ ಯೋಜನೆಗಳಿಂದ ಪುನರ್ವಸತಿಗೊಂಡಿರುವರಿಗೆ ಮಂಜೂರು ಮಾಡುವ ಪರವಾನಗಿ ಜಾರಿಯಾಗಿದ್ದು ೨೦೧೫- ೧೬ರ ವೇಳೆ. ಶರಾವತಿ ಸಂತ್ರಸ್ಥರದ್ದೂ ಆಗಲೇ ಮಂಜೂರಾಯಿತು. ಕಾಂತಾರದ ದೇವೇಂದ್ರನಂತೆಯೇ ಇಲ್ಲಿಯೂ ವಿಘ್ನಸಂತೋಷಿಗಳು ಹುಟ್ಟಿಕೊಂಡರು. ಪುನಃ ಪುನಃ ಸಂತ್ರಸ್ಥರು ತಮ್ಮ ಅಡಿಯಾಳಾಗಿಯೇ ನಿತ್ಯ ಎಡತಾಕಬೇಕು, ಚುನಾವಣೆಯಲ್ಲಿ ಮತ ಹಾಕಬೇಕು ಎನ್ನುವ ಧೋರಣೆಯವರಿಂದಾಗಿ…
ಮತ್ತೆ ಹಸಿರು ನ್ಯಾಯಪೀಠ, ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿ ಈ ನೋಟಿಫಿಕೇಶನ್ ಸಕ್ರಮವಾಗಿಲ್ಲ; ಕೇಂದ್ರದ ಪರವಾನಗಿ ಪಡೆದಿಲ್ಲ, ಪರಿಸರ ಸಂರಕ್ಷಣಾ ಕಾಯ್ದೆಯ ವಿರುದ್ಧವಾಗಿದೆ ಎಂದು ಕದ ತಟ್ಟಿರ ಪರಿಣಾಮ ಈ ಅಧಿಸೂಚನೆಯಡಿ ಸಕ್ರಮಗೊಂಡಿವರೆಲ್ಲರ ಬಾಳು ಪುನಃ ಅಂತ್ರಯವಾಯಿತು. ಬಹುಶಃ ಇನ್ನು ಹತ್ತಿಪ್ಪತ್ತು ವರ್ಷ ಹೋದರೆ ನಾಲ್ಕು ಪೀಳಿಗೆ ಈ ಹೋರಾಟದಲ್ಲೇ ಸವೆದು ಹೋದಂತಾಗುತ್ತದೆ.
ಮೂಲಭೂತವಾಗಿ ಅರಣ್ಯ ಉಳಿದಿರುವುದು ಅಧಿಕಾರಿಗಳಿಂದ, ಕಾಯ್ದೆಯಿಂದ ಎನ್ನುವ ದೊಡ್ಡ ಭ್ರಮೆ ಆಡಳಿತ ಶಾಹಿ ಯಲ್ಲಿದೆ. ಎರಡನೆಯದ್ದು ಅರಣ್ಯ ಅತಿಕ್ರಮಣ ಎನ್ನುವುದು ಸಂತ್ರಸ್ಥರನ್ನು ಓಟ್ ಬ್ಯಾಂಕ್ ಆಗಿ ಪರಿಗಣಿಸಿರುವುದು. ಇಷ್ಟು ಕ್ರೂರತನದ ಮಧ್ಯೆ ಆರೇಳು ದಶಕದ, ಮೂರು ಪೀಳಿಗೆಯ ಕರಾಳ ಕಥೆಯಿದೆ ಕಾಂತಾರ ಕಥೆ ಇಷ್ಟೊಂದು ಮನಸ್ಸಿಗೆ ನಾಟಲು ಕಾರಣವೆಂದರೆ, ಇವರಿಂದಲೇ ಕಾಡು ಉಳಿದಿರುವುದು. ದೇವರಕಾಡು, ಚೌಡಿ, ಗುತ್ತಿ, ಹುಲಿದೇವ ಇತ್ಯಾದಿಗಳನ್ನು ಸೃಷ್ಟಿಸಿ ಇವರು ಕಾಡು ಉಳಿಸಿಕೊಂಡು ಬರುತ್ತಿದ್ದಾರೆ. ಸರ್ಕಾರದ ನೀತಿ ಧೋರಣೆಗಳ ಪರಿಣಾಮ ಅರಣ್ಯ ಬಯಲಾದದ್ದು. ಈ ವಾಸ್ತವ ಸತ್ಯವನ್ನು ಒಪ್ಪಿಕೊಳ್ಳಲು ಅಧಿಕಾರಿಗಳು ಸಿದ್ಧರಿಲ್ಲ. ಜನಪ್ರತಿನಿಧಿಗಳಿಗೋ ಗೋಳಾಟ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ..
೧೯೯೦ರವರೆಗೆ ಅರಣ್ಯ ಮರಮಟ್ಟುಗಳಿಂದ, ಗಣಿ, ಅದಿರು ಉತ್ಪನ್ನಗಳಿಂದ ಅರಣ್ಯ ಇಲಾಖೆಯ ಮೂಲಕವೇ ಸರ್ಕಾರವೇ ಬೋಳಿಸಿರೆ, ಆ ನಂತರ ಅರಣ್ಯ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿಗೈಯುತ್ತಿರುವುದು ವಿಪರ್ಯಾಸ. ಎಷ್ಟು ವಿಚಿತ್ರ ನೋಡಿ. ಜನಸಹಭಾಗಿತ್ವವಿಲ್ಲದೇ, ಅವರ ಬದುಕಿನೊಂದಿಗೆ ಶತಮಾನಗಳ ಉಕ್ಕೂ ಗೋಳಾಡಿಸುವುದು!?
ಕಾಂತಾರ ಏಕೆ ಪುನಃ ಪುನಃ ಈ ಜನರ ಬದುಕಿನ ಚಿತ್ರವಾಗುತ್ತದೆ ಎನ್ನುವುದಕ್ಕೆ ಇದೇ ಕಾರಣ. ಅರಣ್ಯ ಭೂಮಿ ಸಕ್ರಮಗೊಳಿಸಿದ ನೊಟಿಫಿಕೇಶನ್‌ಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತೋ ಆಗ ಸರ್ಕಾರ, ಮಂತ್ರಿಗಳು, ಇದೇ ಭಾಗದಿಂದ ಹೋದ ಜನಪ್ರತಿನಿಧಿಗಳು ಮತ್ತೆ ದೆಹಲಿಗೆ ದೌಡಾಯಿಸಿ `ಇದಕ್ಕೊಂದು ಪರಿಹಾರ ಕೊಡಿ’ ಎಂದು ಅರಣ್ಯ ಮಂತ್ರಿಗಳಲ್ಲಿ ಹೋಗಿ ಅವರನ್ನು ಸನ್ಮಾನಿಸಿದರು! ತಮ್ಮ ಜೀವಿತಾವಧಿಯಲ್ಲಿ ಭೂ ಮಂಜೂರಾತಿ ಆಗದೆಂಬ ಹತಾಶೆಯಲ್ಲಿ ಅದೇ ರೈತರು, ಸಂತ್ರಸ್ಥರು ಈಗ ಕಾಂತಾರದ ದೈವ- ಕೋಲ ಹುಡುಕಲು ಹೊರಟಿದ್ದಾರೆ.
ಕಾಂತಾರವನ್ನು ವಿಶೇಷವಾಗಿ ನೋಡಿ ಮೆಚ್ಚಿದ ಮಂತ್ರಿ ಮಾಗಧರು ಮಾತ್ರ ಈ ಸಮಸ್ಯೆಗೆ ಪರಿಹಾರ ಹುಡುಕುವುದು ಬಿಡಿ, ದೈವ-ಕೋಲಗಳ ಚಿತ್ರವೆಂಬ ಉಡಾಫೆ ಹೊಡೆಯುತ್ತಿದ್ದಾರೆ. ಪುನಃ ತಮ್ಮನ್ನು ದೆವ್ವವಾಗಿಸಿಕೊಳ್ಳುವ ಮನೋಭೂಮಿಕೆಯಲ್ಲಿದ್ದಾರೆ. ಹಾಗಾಗಿ ಈ ಎಲ್ಲ ಅರಣ್ಯ ಸಾಗುವಳಿದಾರರ ಬದುಕಿನಲ್ಲಿ, ಶರಾವತಿ, ಮಲೆ ಮಕ್ಕಳ ಬಾಳಲ್ಲಿ ದೈವ ಯಾವಾಗ ಸಿಕ್ಕೀತು…!?