ಯುಗಾದಿ ಎಂಬ ಶಬ್ದವು ಸಂಸ್ಕೃತದ ಯುಗ’ ಮತ್ತು
ಆದಿ’ ಎಂಬ ಎರಡು ಶಬ್ದಗಳಿಂದ ಕೂಡಿದೆ. ಸೃಷ್ಟಿ ನಾಟಕದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಆದಿ’ ಎಂದರೆ ಪ್ರಾರಂಭ, ಪೂರ್ವಕಾಲ ಎಂದಾಗುತ್ತದೆ. ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆ ಇದೆ. ಎಲ್ಲಾ ಶಾಸ್ತ್ರಗಳು ಮತ್ತು ಪೌರಾಣಿಕ ಗ್ರಂಥಗಳಲ್ಲಿ ಯುಗಾದಿಯನ್ನು ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನವನ್ನು ಯುಗಾದಿ ಎಂದು ಹೇಳಲಾಗಿದೆ. ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನವನ್ನು ಸಹ ಯುಗಾದಿಯೆಂದು ಹೇಳಲಾಗಿದೆ. ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನಾರೂಢನಾದನೆಂದು, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದು ಹೇಳಲಾಗುತ್ತದೆ. ಹಿಂದೂಗಳು ಶಾಲಿವಾಹನ ಶಕೆಯ ಸಂವತ್ಸರಗಳನ್ನಾಧರಿಸಿ ಆಯಾ ಸಂವತ್ಸರವನ್ನು ಚೈತ್ರ ಮಾಸದ ಪ್ರತಿಪದದಿಂದ ಆರಂಭಿಸುತ್ತಾರೆ. ಯುಗಾದಿಯು ಚಂದ್ರಮಾನದ ಸಂವತ್ಸರದ ಆರಂಭದ ದಿನ. ವರಾಹ ಮಿಹಿರಾಚಾರ್ಯನು ವರ್ಷಾರಂಭವನ್ನು ಚೈತ್ರ ಮಾಸವೆಂದು ಹೇಳಿದ್ದಾನೆ. ಪಂಚಾಂಗ ಮತ್ತು ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮೂಹೂರ್ತದ ಮೂರುವರೆ ದಿನಗಳೆಂದರೆ ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತದಿಗೆ. ಅದರಲ್ಲಿ ಯುಗಾದಿ ಅತೀ ಶ್ರೇಷ್ಠ ಮೂಹೂರ್ತವೆಂದು ಭಾರತೀಯರು ನಂಬಿದ್ದಾರೆ. ವರ್ಷದ ಶುಭ ದಿನವಾದ ಯುಗಾದಿಯನ್ನು ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳಲಾಗುತ್ತದೆ. ಯುಗಾದಿ ಹಬ್ಬವನ್ನು ಚಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿ ಎಂದು ಎರಡು ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಚಂದ್ರನ ಚಲನೆಯ ನ್ನಾಧರಿಸಿ ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್‌ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.
ಯುಗಾದಿ’ ಬಂದಿತೆಂದರೆ ಎಲ್ಲಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ.
ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಮ್ಮ-ತಮ್ಮ ದೇವರನ್ನು ಪೂಜಿಸುತ್ತಾರೆ. ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಕೋಣೆಯ ಬಾಗಿಲಿಗೆ ಎಳೆಯ ಹಸಿರು ಮಾವಿನೆಲೆ, ಮಧ್ಯೆ ಬೇವಿನ ಎಲೆ ಮತ್ತು ಹೂಗಳ ಗೊಂಚಲು ಸೇರಿಸಿ ತೋರಣವನ್ನು ಕಟ್ಟುವರು. ಮನೆಯ ಮುಂದೆ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲಿನ ಸಂಕೇತವಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು. ಅಂದು ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಊಟದ ಮೊದಲು ಸೇವಿಸುವರು. ನೋವು ನಲಿವು ಎರಡಕ್ಕೂ ನಾವು ಸ್ವಾಗತ ನೀಡಬೇಕು.
ಯುಗಾದಿಯಂದು ಇಷ್ಟದೇವತೆಯ ಪೂಜೆ ಮಾಡುವರು. ಆ ದಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೆಲವು ಊರುಗಳಲ್ಲಿ ಪಂಚಾಂಗ ಶ್ರವಣವನ್ನು ಏರ್ಪಡಿಸುವರು. ಎಲ್ಲಾ ರಾಶಿಗಳ ಫಲಾಫಲಗಳನ್ನು ವಿವರಿಸುವರು. ಪ್ರತಿವರ್ಷದಲ್ಲೂ ಬರುವ ಕಷ್ಟ-ನಷ್ಟ, ಮಳೆ-ಬೆಳೆ ವಿಚಾರವನ್ನು ಜನರು ವರ್ಷದ ಪ್ರಾರಂಭದಲ್ಲೇ ತಿಳಿದುಕೊಳ್ಳಬಹುದು. ಪಂಚಾಂಗ ಕೇಳುವುದರಿಂದ ಮಾನವನ ಆಯುಷ್ಯ ಹೆಚ್ಚಾಗುತ್ತದೆ. ರೋಗ-ಪಾಪಗಳು ನಾಶವಾಗಿ ಗಂಗಾಸ್ನಾನ ಮಾಡಿದಷ್ಟು ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ನವಗ್ರಹ ಪೂಜೆಗಳನ್ನು ಮಾಡುವರು ಹಾಗೂ ದಾನ ಮಾಡುವ ಸಂಪ್ರದಾಯಗಳೂ ಇರುವವು.
ಯುಗಾದಿಯ ಮಾರನೆಯ ದಿನವೂ ಹಬ್ಬದ ವಾತಾವರಣವೇ ಇರುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕ್ಕರಿಸುವರು. ಅಂದು ‘ವರ್ಷ ತೊಡಕು’ ಎಂದು ಆಚರಿಸಲಾಗುತ್ತದೆ. ಅಂದರೆ ಸತ್ಕಾರ್ಯಗಳಿಗೋಸ್ಕರ ನಮ್ಮನ್ನು ತೊಡಗಿಸಿಕೊಳ್ಳುವ ದಿನ. ವರ್ಷವಿಡೀ ಸುಖ ನೀಡುವಂತೆ, ಕಷ್ಟ ನಿವಾರಿಸುವಂತೆ ದೇವರಲ್ಲಿ ಕೇಳಿಕೊಳ್ಳುವ ದಿವಸ. ಈ ದಿನ ಯಾರಿಗೆ ಏನನ್ನು ನೀಡುತ್ತಾರೆಯೋ ಅದು ಇಡೀ ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಇದೆ.
ವಿಶ್ವಾಸ. ಸೋಹೋನಿ