ಬದುಕಿದ ಸಾತ್ವಿಕ್: ಹರಕೆ ತೀರಿಸಿದ ಕಾಸುಗೌಡ ಬಿರಾದಾರ

Advertisement

ವಿಜಯಪುರ: ಲಚ್ಯಾಣ ಗ್ರಾಮದ ಸಾತ್ವಿಕ್ ಎಂಬ ೨ ವರ್ಷದ ಮಗು ಕೊಳವೆ ಬಾವಿಯಲ್ಲಿ ಬಿದ್ದು ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದಾಗ ಹರಕೆ ಹೊತ್ತಿದ್ದ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಲಚ್ಯಾಣದ ಸಿದ್ಧಲಿಂಗಜ್ಜನಿಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಕಾಸುಗೌಡ ಮಗು ಬದುಕುಳಿಯಲಿ ಎಂದು ಲಚ್ಯಾಣ ಕಮರಿಮಠದ ಶ್ರೀ ಸಿದ್ಧಲಿಂಗ ಮಹಾರಾಜರ ಸನ್ನಿಧಿಯಲ್ಲಿ ದೀರ್ಘದಂಡ ನಮಸ್ಕಾರ ಹಾಕುವುದಾಗಿ ಶ್ರೀ ಸಿದ್ಧಲಿಂಗ ದೇವರಿಗೆ ಹರಕೆ ಹೊತ್ತಿದ್ದರು. ಮಗು ಸುರಕ್ಷಿತವಾಗಿ ಹೊರಗಡೆ ಬಂದ ಹಿನ್ನೆಲೆ ಕಾಸುಗೌಡ ಹರಕೆ ತೀರಿಸಿದ್ದಾರೆ.
ಅತ್ತ ಮಗು ಬದುಕುಳಿದ ಸುದ್ದಿ ತಿಳಿಯುತ್ತಿದ್ದಂತೆ ಸಂತಸಗೊಂಡ ಕಾಸುಗೌಡ ಬಿರಾದಾರ ಕೂಡಲೇ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠಕ್ಕೆ ಬಂದು ದೀರ್ಘದಂಡ ನಮಸ್ಕಾರ ಮೂಲಕ ಪ್ರದಕ್ಷಿಣೆ ಹಾಕಿ ಸಿದ್ಧಿ ಪುರುಷ ಸಿದ್ಧಲಿಂಗ ಮಹಾರಾಜರ ಗರ್ಭಗುಡಿ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಲಚ್ಯಾಣ ಸಿದ್ಧಲಿಂಗೇಶ ನೀನು ಪವಾಡ ಪುರುಷ, ನಿನ್ನ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಕೊಳವೆ ಬಾವಿಯಲ್ಲಿ ಬಿದ್ದ ಮಗು ನಿನ್ನ ಮಗು. ಆ ಮಗುವನ್ನು ರಕ್ಷಿಸುವ ಶಕ್ತಿ ನಿನಗಿದೆ, ಬೇರೆ ಯಾರಿಗೂ ಸಾಧ್ಯವಿಲ್ಲ. ನೀನು ಆ ಮುದ್ದು ಕಂದಮ್ಮನನ್ನು ರಕ್ಷಿಸಿದರೆ ನೀನಗೆ ಧೀರ್ಘದಂಡ ನಮಸ್ಕಾರ ಹಾಕುವೆ ಎಂದು ಸದ್ದಿಲ್ಲದೆ ಹರಕೆ ಹೊತ್ತು ಘಟನಾ ಸ್ಥಳಕ್ಕೆ ಧಾವಿಸಿದ್ದರು. ಪವಾಡವೆಂಬಂತೆ ಸಾವು ಬದುಕಿನ ಹೋರಾಟದ ನಡುವೆ ಮಗು ಸಾತ್ವಿಕ್ ಬದುಕಿ ಬಂದಿದ್ದು ಪವಾಡವಷ್ಟೇ ಅಲ್ಲ ಇತಿಹಾಸವಾಗಿದೆ.