ಬದಲಾದ ಗ್ರಹಿಕೆಗಳು

Advertisement

ನಾವು ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ಯಾಕೆ ತಪ್ಪಾಗುತ್ತವೆ? ಒಂದು ಕೋರ್ಟಿನಲ್ಲಿ ಒಬ್ಬ ವ್ಯಕ್ತಿ ತಪ್ಪಿತಸ್ಥ ಎಂದು ಶಿಕ್ಷೆಗೆ ಒಳಗಾದರೆ, ಆತ ಮೇಲಿನ ಕೋರ್ಟಿಗೆ ಅಪೀಲ್ ಹೋದಾಗ ನಿರಪರಾಧಿ ಎಂದು ಬಿಡುಗಡೆಯಾದ ಅನೇಕ ಘಟನೆಗಳನ್ನು ನಾವು ಕಂಡಿದ್ದೇವೆ. ದೇಶದ ನಾಯಕರು ಯಾವುದೋ ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ಆ ತೀರ್ಮಾನಕ್ಕೆ, ಅಂದಿನ ದೇಶದ ಪರಿಸ್ಥಿತಿ, ಹಣಕಾಸು ವಿಷಯ, ಧರ್ಮಸೂಕ್ಷ್ಮಗಳು, ರಾಜಕೀಯ ಹೊಂದಾಣಿಕೆಗಳು, ಜನರ ಅವಶ್ಯಕತೆ ಇವೆಲ್ಲ ಕಾರಣವಾಗಿರುತ್ತವೆ. ಮುಂದೆ ಐವತ್ತು ವರ್ಷಗಳು ಕಳೆದ ಮೇಲೆ ಹೊಸ ತಲೆಮಾರಿನವರು, ಹಿಂದಿನ ತೀರ್ಮಾನಗಳನ್ನು ಖಂಡಿಸಿ, ಅದು ದೇಶಕ್ಕೆ ಮಾಡಿದ ಅನ್ಯಾಯ, ಆಗಿನ ನಾಯಕರಿಗೆ ದೂರದೃಷ್ಟಿ ಇರಲಿಲ್ಲ, ಸಮಯಸಾಧಕತೆಯಿಂದ ಸ್ವಾರ್ಥಲಾಭ ಮಾಡಿಕೊಂಡರು ಎಂದೆಲ್ಲ ಕೂಗು ಹಾಕಿದ್ದು, ಹಾಕುತ್ತಿದ್ದುದು ಹೊಸದೇನಲ್ಲ. ಬಹುಶಃ ಇವರು ಆ ಕಾಲದಲ್ಲಿ ಇದ್ದಿರೆ ಇಂತಹದೇ ನಿರ್ಣಯವನ್ನು ತೆಗೆದುಕೊಳ್ಳುತ್ತಿರೇನೋ! ಹಾಗಾದರೆ ಯಾಕೆ ಈ ತರಹದ ಗೊಂದಲಗಳು ಕಾಣುತ್ತವೆ? ಇದಕ್ಕೆ ಪ್ರಮುಖ ಕಾರಣ, ನಮ್ಮ ಗ್ರಹಿಕೆಗಳಲ್ಲಿ ಇರುವ ವ್ಯತ್ಯಾಸ. ನಾವು ಯಾವುದೋ ಒಂದು ವಸ್ತುವನ್ನು, ಘಟನೆಯನ್ನು, ವ್ಯಕ್ತಿಯನ್ನು ಒಂದು ದೃಷ್ಟಿಕೋನದಿಂದ ಕಂಡಾಗ ಒಂದು ರೀತಿಯ ಅಭಿಪ್ರಾಯ ಬರುತ್ತದೆ. ಅದನ್ನೇ ಬೇರೆಯವರು ಮತ್ತೊಂದು ದೃಷ್ಟಿಕೋನದಿಂದ ನೋಡಿದಾಗ ಬೇರೊಂದು ಅಭಿಪ್ರಾಯ ಬರುವುದು ಸಹಜ. ಇಲ್ಲದಿರೆ ಭಿನ್ನಾಭಿಪ್ರಾಯಗಳು ಏಕೆ ಬರುತ್ತಿವು? ನಮ್ಮ ಅನಿಸಿಕೆಗಳು, ಅಭಿಪ್ರಾಯಗಳು, ನಮಗಿರುವ ಅನುಭವದ, ಹಿನ್ನೆಲೆಯ, ಕೂಸುಗಳು. ನಮ್ಮೆಲ್ಲರಿಗೂ ಬೇರೆ ಬೇರೆ ಅನುಭವಗಳೇ, ಹಿನ್ನೆಲೆಗಳೇ ಇರುವುದರಿಂದ ದೃಷ್ಟಿಭೇದ ಸಾಮಾನ್ಯ.
ಇಲ್ಲಿ ತೋರಿಸಿರುವ ಚಿತ್ರವನ್ನು ನೋಡಿ. ಅದನ್ನು ದೀರ್ಘಕಾಲ ನೋಡುವುದು ಬೇಡ. ಒಂದು ಕ್ಷಣ ನೋಡಿ ಅದರಲ್ಲಿ ನಿಮಗೆ ಏನು ಕಂಡಿತು ಎಂಬುವು ದನ್ನು ಪಟ್ಟಿ ಮಾಡಿ. ಕೆಲವರಿಗೆ ಅಲ್ಲಿ ಒಬ್ಬ ಗಡುಸು ಮುಖದ, ಬೋಳುತಲೆಯ ಮನುಷ್ಯ ಕಾಣುತ್ತಾನೆ. ಅವನ ದಪ್ಪ ಅದರ ಸರಿಯಾದ ಕತ್ತರಿಸಿದ ಮೀಸೆ, ಹಿಂದೆ ಹಾರುತ್ತಿರುವ ಬಿಳಿಕೂದಲು, ದಿಟ್ಟಿಸಿ ನೋಡುವ ಕಣ್ಣುಗಳು, ಎದೆಯ ಮೇಲೆ ಹಿಡಿದ ಕೈ ಕಾಣುವುದು ಎಲ್ಲ ಸರಿ. ಆದರೆ ಕಿವಿಯ ಹತ್ತಿರ ಒಂದು ಹುಡುಗಿಯ ಆಕಾರದ ಅಲಂಕಾರವಿದೆ. ಆ ಮುದುಕನ ತಲೆಯ ಮೇಲೆ ಒಂದು ಕಮಾನಿದೆ. ಕಮಾನಿನ ಮೇಲೆ ಹುಲ್ಲು ಬೆಳೆದಿದೆ. ಇವೆಲ್ಲ ತಕ್ಷಣಕ್ಕೆ ಕಂಡವುಗಳು. ಸ್ವಲ್ಪ ನಿಧಾನವಾಗಿ ಚಿತ್ರವನ್ನು ಗಮನಿಸುತ್ತ ಹೋಗಿ. ಆಗ ನಿಮಗೆ ಮತ್ತೊಂದು ಚಿತ್ರವೇ ಕಂಡೀತು. ಒಂದು ಕಮಾನಿನ ಮುಂದೆ ತಲೆಗೆ ಹ್ಯಾಟ್ ಹಾಕಿಕೊಂಡ ಮುದುಕ ನಿಂತಿದ್ದಾನೆ. ಫ್ರಾಕ್ ತರಹದ ಕೋಟು, ಪ್ಯಾಂಟ್ ಧರಿಸಿದ್ದಾನೆ. ಕಾಲಿನಲ್ಲಿ ಶೂಗಳಿವೆ. ಅವನ ಕೈಯಲ್ಲಿ ಒಂದು ಮಣಿದ, ಸುರುಳಿಯಾಕಾರದ ಊರುಗೋಲಿದೆ. ಮುಖದ ತುಂಬ ಗಡ್ಡ, ಮೀಸೆಗಳಿವೆ. ಅವನ ಮುಂದೆ ಲಂಗ ಧರಿಸಿದ ಹೆಣ್ಣುಮಗಳು ನಿಂತಿದ್ದಾಳೆ. ಆಕೆಯ ಎಡಗೈಯಲ್ಲಿ ಪುಟ್ಟ ಮಗು. ಬಲ ಹೆಗಲ ಮೇಲೆ ಹುಲ್ಲಿನ ಹೊರೆ ಇದೆ. ಇಬ್ಬರೂ ನಿಂತಿದ್ದು ಫುಟ್‌ಪಾತ್ ಮೇಲೆ. ಅವರ ಮುಂದೆ ಒಂದು ನಾಯಿ ನೆಲದ ಮೇಲೆ ಮಲಗಿದೆ.
ಈ ಚಿತ್ರವನ್ನು ಬಿಡಿಸಿದವನು ಇಟಲಿಯ ಪ್ರಸಿದ್ಧ ಚಿತ್ರಕಾರ ಒಕ್ಟೇವಿಯೋ ಓಕಾಂಪೊ. ಅವನು ಈ ಚಿತ್ರವನ್ನು ಬರೆದು ಪ್ರದರ್ಶನಕ್ಕೆ ಇಟ್ಟಾಗ ಅದನ್ನು ನೋಡಲು ಬಂದ ಜನರಿಗೆ ತುಂಬ ಗಲಿಬಿಲಿಯಾಯಿತಂತೆ. ಇದು ನಿಜವಾಗಿಯೂ ಏನು, ಇದರಲ್ಲಿ ಏನಿದೆ ಎಂದು ಕೇಳಿದರಂತೆ. ಆತ ವಿವರಿಸಿದ್ದು ತುಂಬ ಸುಂದರ. “ಒಂದು ಚಿತ್ರ, ಅದೂ ನಿಶ್ಚಲವಾದ ಚಿತ್ರವೇ ಹೀಗೆ ಮನುಷ್ಯರ ಮನಸ್ಸಿನಲ್ಲಿ ಬೇರೆ ಬೇರೆ ಆಕಾರಗಳನ್ನು ಹುಟ್ಟಿಸುವಂತಿರೆ, ಒಂದು ಸಾಕ್ಷಾತ್ ಘಟನೆ, ಜೀವಂತ ವ್ಯಕ್ತಿ ಅದೆಷ್ಟು ವಿಭಿನ್ನ ಕಲ್ಪನೆಗಳನ್ನು ಹುಟ್ಟಿಸಲು ಸಾಧ್ಯ ಎಂದು ತೋರಿಸಲು ಈ ಚಿತ್ರವನ್ನು ಬಿಡಿಸಿದ್ದೇನೆ. ಚಿತ್ರವನ್ನು ಇನ್ನೂ ದಿಟ್ಟಿಸಿ ನೋಡಿ. ಅಲ್ಲಿ ಮುದುಕ, ಅವನ ಮಗಳು ಮತ್ತು ಅವಳ ಕೈಯಲ್ಲಿಯ ಮಗುವಲ್ಲದೆ ಇನ್ನೂ ಐದು ಮುಖಗಳಿವೆ. ಕಮಾನಿನ ಎಡಗಡೆ ಪಕ್ಕದಲ್ಲಿರುವ ಕಂಬದ ಎರಡೂ ಬದಿಗೆ, ಅದಕ್ಕೆ ಪಕ್ಕದಲ್ಲಿ ಹೀಗೆ ವಿವಿಧ ಮುಖಗಳಿವೆ. ಹುಡುಕುತ್ತಾ ಹೋದರೆ ಮತ್ತೆಷ್ಟೋ ಆಗೋಚರವಾದ ಚಿತ್ರಗಳು ಕಂಡಾವು. ಒಂದು ಸ್ಥಿರ ಚಿತ್ರದಲ್ಲೇ ಹೀಗೆ ಹೊಸಹೊಸತು ದೊರಕುತ್ತ ಹೋದರೆ, ಒಬ್ಬ ವ್ಯಕ್ತಿ, ಒಂದು ವ್ಯವಸ್ಥೆ ಹೀಗೇ ಎಂದು ಹೇಗೆ ಹೇಳುತ್ತೀರಿ? ಬಹುಶ: ಅದು ನೀವು ಕಂಡ ಮುಖ. ಬದುಕಿನುಕ್ಕೂ ವ್ಯಕ್ತಿಯನ್ನು ಗಮನಿಸಿದರೆ, ಹೊಸ ಹೊಸ ವ್ಯಕ್ತಿತ್ವದ ಮುಖಗಳು ದೊರೆಯಬಹುದು. ಆರಿಂದ ನಿಮಗೆ ಕಂಡ ಮುಖವೇ ಸತ್ಯವೆಂದು ನಂಬುವುದು ಬೇಡ”. ಇದೊಂದು ಅದ್ಭುತ ಸತ್ಯವಲ್ಲವೆ?

ಸಾಕ್ಷಿ

ಈಗ ಇಲ್ಲಿ ಇನ್ನೊಂದು ಚಿತ್ರವನ್ನು ತೋರಿಸಿದ್ದೇನೆ. ಅದನ್ನು ಕೇವಲ ಕ್ಷಣಮಾತ್ರ ನೋಡಿ, ನಂತರ ಅದನ್ನು ಬದಿಗಿಟ್ಟು ಚಿತ್ರದಲ್ಲಿ ಏನು ಕಂಡಿರಿ ಎಂದು ಯೋಚಿಸಿ. ನಾನು ಕಂಡಂತೆ ಇಲ್ಲಿ ಎರಡು ಸಾಧ್ಯತೆಗಳಿವೆ. ಕೆಲವರಿಗೆ ಇದರಲ್ಲಿ ಏನೂ ಅರ್ಥವಾಗದ ಕಪ್ಪು ಬಣ್ಣದ, ವಿಚಿತ್ರ ಆಕಾರದ ಪಟ್ಟಿಗಳಿವೆ. ಹೇಗೆ ನೋಡಿದರೂ ಅವೇ ಕಾಣುತ್ತವೆ. ಮತ್ತೆ ಕೆಲವರಿಗೆ ಚಿತ್ರದಲ್ಲಿ ಇಂಗ್ಲೀಷಿನ ಪದ LIFT ಕಾಣಬಹುದು. ಅವರಿಗೆ ಕಪ್ಪು ಪಟ್ಟಿಗಳೇ ಕಾಣುವುದಿಲ್ಲ! ಮತ್ತೊಮ್ಮೆ ಚಿತ್ರವನ್ನು ನಿಧಾನವಾಗಿ, ವಿರಾಮವಾಗಿ ನೋಡಿ. ಯಾರು ಚಿತ್ರದಲ್ಲಿಯ ಕಪ್ಪುಬಣ್ಣವನ್ನೇ ಹೆಚ್ಚು ಗಮನಿಸಿದರೋ ಅವರಿಗೆ ಬರೀ ಪಟ್ಟಿಗಳೇ ಕಂಡಿವೆ. ಆದರೆ ಯಾರು ಕೇವಲ ಬಿಳೀ ಬಣ್ಣವನ್ನು ಮಾತ್ರ ನೋಡುತ್ತ ಬಂದರೋ ಅವರಿಗೆ LIFT ಪದ ಕಾಣುತ್ತದೆ. ಅಂದರೆ, ಒಂದೇ ಚಿತ್ರದಲ್ಲಿ ಎರಡು ನೋಟಗಳು. ನಮ್ಮ ದೃಷ್ಟಿಯ ಹಾಗೆ ನಮ್ಮ ನೋಟ. ನಾನು ಇದನ್ನು ಕೊಂಚ ಆಧ್ಯಾತ್ಮಿಕವಾಗಿ ನೋಡಲು ಹೇಳುತ್ತೇನೆ. ಯಾರು ಕೇವಲ ಕಪ್ಪು ಬಣ್ಣದ ಕಂಭಗಳನ್ನೇ ನೋಡುತ್ತ ಬಂದರೋ ಅವರಿಗೆ ಅರ್ಥವಿಲ್ಲದ ಗೊಂದಲ ಕಂಡಿದೆ. ಹಾಗೆಂದರೆ ಯಾವಾಗ ನಾವು ನಮ್ಮ ಸುತ್ತಮುತ್ತ ಕಂಡನ್ನು ಋಣಾತ್ಮಕವಾಗಿ ನೋಡಿದೆವೋ ಆಗ ಕೇವಲ ನಿರಾಸೆ, ದುಃಖ, ಅರ್ಥಹೀನತೆ ಕಾಣುತ್ತದೆ. ಆದರೆ ಬರೀ ಬಿಳೀ ಬಣ್ಣವನ್ನು ನೋಡಿದಾಗ LIFT ಕಂಡಿತಲ್ಲ. LIFT ಪದಕ್ಕೆ ಕನ್ನಡದಲ್ಲಿ ಅನೇಕ ಅರ್ಥಗಳು. ಮೇಲೆತ್ತು, ಉತ್ಕರ್ಷಿಸು, ಉತ್ತೇಜಕ, ದೊಡ್ಡಸ್ತಿಕೆ, ಎತ್ತರಿಸು ಹೀಗೆಲ್ಲ ಸಮಾನಾರ್ಥ ಗಳು ಹೊರಡುತ್ತವೆ. ಇವೆಲ್ಲ ಧನಾತ್ಮಕವಾದವುಗಳು. ಬದುಕಿಗೊಂದು ಸಾರ್ಥಕ ನಿರ್ದೇಶನಗಳನ್ನು ಕೊಡುವಂಥವು. ಬಿಳೀ ಬಣ್ಣವನ್ನು ಸಾಮಾನ್ಯವಾಗಿ ತಿಳುವಳಿಕೆಯ, ವಿಸ್ತಾರದ, ಧನಾತ್ಮಕತೆಯ ಸಂಕೇತವೆಂದು ತಿಳಿಯಲಾಗುತ್ತದೆ. ಇದರರ್ಥ, ಧನಾತ್ಮಕತೆಯಿಂದ, ಆಶಾವಾದ ದಿಂದ ಏನನ್ನು ಕಂಡರೂ ಅದು ನಮ್ಮನ್ನು ಮೇಲಕ್ಕೆತ್ತುತ್ತದೆ, ಉತ್ಕರ್ಷಿಸುತ್ತದೆ, ಉತ್ತೇಜಿಸುತ್ತದೆ; ಬದುಕಿಗೊಂದು ಅರ್ಥಕೊಡುತ್ತದೆ. ಈ ಚಿತ್ರ, ಬದುಕನ್ನು ಹೇಗೆ ನೋಡಬೇಕೆಂಬುದನ್ನು ಸೂಚ್ಯವಾಗಿ ತೋರುತ್ತದೆ.
ಇನ್ನೊಂದು ಕೊನೆಯ ಚಿತ್ರ. ಇದನ್ನು ಒಂದೇ ಕ್ಷಣ ನೋಡಿ, ಬದಿಗಿರಿಸಿ. ಅಲ್ಲಿ ಕಂಡ ತ್ರಿಕೋನದಲ್ಲಿ ಬರೆದದ್ದು ಏನು? ಅದನ್ನು ಎರಡು ಬಾರಿ ಹೇಳಿಕೊಂಡು, ಈಗ ಚಿತ್ರವನ್ನು ಮತ್ತೊಮ್ಮೆ ಆಳವಾಗಿ ನೋಡಿ. ಒಂದೊಂದೇ ಪದವನ್ನು ಸರಿಯಾಗಿ ಗಮನಿಸುತ್ತ ಬನ್ನಿ. ಈಗ ನೀವು ಓದುವುದು “A BIRD IN THE THE BUSH” ಅಲ್ಲವೇ? ಬಹಳಷ್ಟು ಜನ ಅದನ್ನು ಮೊದಲ ಬಾರಿಗೆ ಓದಿದಾಗ, ಅದನ್ನು “A BIRD IN THE BUSH’ ಎಂದೇ ಓದುತ್ತಾರೆ. ಆ ವಾಕ್ಯದಲ್ಲಿ ಎರಡು THE ಇರುವುದನ್ನು ಗಮನಿಸುವುದಿಲ್ಲ. ಅದು ಅಲ್ಲೇ, ಕಣ್ಣಮುಂದೆಯೇ ಇರೂ ಏಕೆ ಕಾಣಲಿಲ್ಲ? ಕೆಲವರು ಎರಡೆರಡು ಬಾರಿ ಓದಿದರೂ ಎಡರನೆಯ THE ಕಂಡಿಲ್ಲ. ಇದಕ್ಕೆ ಕಾರಣವೇನು ಗೊತ್ತೇ? ಇಂಗ್ಲೀಷನ್ನು ಬಲ್ಲವರಿಗೆ, ಒಂದೇ ವಾಕ್ಯದಲ್ಲಿ, ಜೊತೆ ಜೊತೆಯಾಗಿ ಎರಡು THEಇ ಇರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮನದಲ್ಲಿ ಅದು ಖಚಿತವಾದ ಮೇಲೆ, THE ಪದ ಕಣ್ಣಮುಂದಿರೂ ಮನಷ್ಸು ಅದನ್ನು ಒಪ್ಪುವುದಿಲ್ಲ, ಕಂಡರೂ ತಿರಸ್ಕರಿಸಿ ಬಿಡುತ್ತದೆ. ಆದರೆ ಈ ಚಿತ್ರವನ್ನು ಪುಟ್ಟ ಮಕ್ಕಳಿಗೆ ತೋರಿಸಿ, ಓದಲು ಹೇಳಿ. ಅವರು ಖಂಡಿತವಾಗಿಯೂ ಎರಡನೆಯ THE ಯನ್ನು ಗಮನಿಸಿಯೇ ಬಿಡುತ್ತಾರೆ. ಯಾಕೆಂದರೆ ಅವರು ಪದಗಳನ್ನು ಓದುತ್ತಾರೆ, ವಾಕ್ಯವನ್ನು ಒಮ್ಮಲೇ ಓದುವುದಿಲ್ಲ. ನಮ್ಮ ಜೀವನದಲ್ಲಿಯೂ ಹೀಗೆಯೇ ಅಲ್ಲವೆ? ಯಾರ ಬಗ್ಗೆಯೋ ಒಂದು ಅಭಿಪ್ರಾಯವನ್ನು ಮಾಡಿಕೊಂಡುಬಿಡುತ್ತೇವೆ. ಅವರು ಒಳ್ಳೆಯವರು ಎಂಬ ಭಾವನೆ ಬಂದರೆ ಅವರಲ್ಲಿಯ ದೋಷಗಳು ನಮಗೆ ಕಾಣುವುದಿಲ್ಲ. ಅವರು ಕೆಟ್ಟವರು ಎಂದು ತೀರ್ಮಾನಿಸಿಕೊಂಡಿರೆ ಅವರು ಮಾಡಿದ ಒಳ್ಳೆಯ ಕೆಲಸಗಳೆಲ್ಲ ನಾಟಕಗಳಂತೆ ಭಾಸವಾಗುತ್ತವೆ.
ನಮ್ಮ ಗ್ರಹಿಕೆಗಳು ಅದೆಂತಹ ಆಟವಾಡುತ್ತವೆ! ಗ್ರಹಿಕೆ ಆಳವಾದಂತೆ, ವ್ಯಕ್ತಿತ್ವದ, ವಿಷಯದ, ವ್ಯವಸ್ಥೆಯ ಬಗೆಗಿನ ನಮ್ಮ ಅರಿವು ಹೆಚ್ಚಾಗುತ್ತದೆ. ಧನಾತ್ಮಕವಾಗಿ ಚಿಂತಿಸಿದಂತೆ, ಯಾವುದು ಕೆಟ್ಟದೆಂದುಕೊಂಡಿದ್ದೇವೋ ಅದರಲ್ಲಿ ಸುಭಗವಾದದ್ದು ತೋರುತ್ತದೆ. ಮನಸ್ಸಿನಲ್ಲಿ ಪೂರ್ವಾಗ್ರಹವಿಲ್ಲದಾಗ ಯಾರನ್ನೂ ನಮಗೆ ಬೇಕಾದಂತೆ, ನಮ್ಮ ತಿಳುವಳಿಕೆಯಂತೆ ಗ್ರಹಿಸದೆ, ಅವರ ನಿಜವಾದ ವ್ಯಕ್ತಿತ್ವವನ್ನು ತಿಳಿಯಲು ಸಾಧ್ಯವಾಗುತ್ತದೆ.
ನಮ್ಮ ಜೀವನ, ಸುಂದರವೋ, ಕಷ್ಟದಾಯಕವೋ, ನರಕವೋ ಎಂಬುದು ನಮ್ಮ ನಮ್ಮ ಗ್ರಹಿಕೆಯ ಮೇಲೆ ಅವಲಂಬಿತವಾಗಿದೆ.