ಬಡವರ ಉದ್ಧಾರಕರನ್ನು ಕಂಡರೆ ಕಾಂಗ್ರೆಸ್‌ಗೆ ಹೊಟ್ಟೆ ಉರಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಕುಡಚಿ ಶಾಸಕ ಪಿ.ರಾಜೀವ್ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಬೆಲ್ಲದಲ್ಲಿ ತಯಾರಿಸಿದ ಪ್ರತಿಮೆಯನ್ನು ನೀಡಿ ಸತ್ಕರಿಸಿದರು.
Advertisement

ಬೆಳಗಾವಿ(ಕೋಳಿಗುಡ್ಡ): ಬಡವರ, ದೀನದಲಿತರ ಪರ ಕೆಲಸ ಮಾಡುವವರನ್ನು ಕಂಡರೆ ಕಾಂಗ್ರೆಸ್‌ನವರಿಗೆ ಹೊಟ್ಟೆ ಉರಿ. ಹಿಂದೆ ದಲಿತರ ಉದ್ಧಾರಕ್ಕೆ ಶ್ರಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ ನವರು ಬಿಡಲಿಲ್ಲ. ಬ್ರಿಟೀಷರ ಕೈಗೊಂಬೆ, ಅಸುರ ಎಂದು ಕರೆದು ಮಾನಸಿಕ ಹಿಂಸೆ ನೀಡಿದ್ದನ್ನು ಡಾ.ಅಂಬೇಡ್ಕರ್ ಬೆಳಗಾವಿಗೆ ಬಂದಾಗ ಸ್ಮರಿಸಿದ್ದರು. ಈಗ ನನ್ನನ್ನು ಪ್ರತಿನಿತ್ಯ ತೆಗುಳುವುದು ಅವರ ಕೆಲಸವಾಗಿದೆ. ಅವರು ತೆಗಳುವ ಕೆಲಸ ಮಾಡತ್ತಲೆ ಇರಲಿ, ನಾವು ಬಡವರ ಅಭಿವೃದ್ಧಿ ಕೆಲಸ ಮಾಡುತ್ತಲೆ ಇರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಹೊರವಲಯದಲ್ಲಿ ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯ ಸುಮಾರು 10 ಮತಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಶನಿವಾರ ಮಾತನಾಡಿದರು. ಕರ್ನಾಟಕದ ಮೇಲೆ ನನಗೆ ವಿಶೇಷ ಪ್ರೀತಿ. ಕರ್ನಾಟಕದ ಅಭಿವೃದ್ಧಿ ಮಾಡಬೇಕೆಂಬುದು ನನ್ನ ಮಹಾದಾಸೆ. ಅದಕ್ಕಾಗಿ ರಾಜ್ಯದ ಮತದಾರರು ಮತ್ತೆ ಡಬಲ್ ಇಂಜಿನ್ ಸರಕಾರ ಬರಲಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಡಬಲ್ ಇಂಜಿನ್ ಸರಕಾರದ ಪರಿಣಾಮ ಕರ್ನಾಟಕ ಸಾಂಸ್ಕೃತಿಕ ಹಾಗೂ ತಂತ್ರಜ್ಞಾನ ಎರಡರಲ್ಲೂ ಸಮಾನ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿನ ಸ್ಟಾರ್ಟಪ್‌ಗಳು ಪ್ರಪಂಚದ ಗಮನ ಸೆಳೆಯುತ್ತಿವೆ ಎಂದರು.
ಕಾಂಗ್ರೆಸ್ ಸರಕಾರ ರೈತರ ಸಾಲಮನ್ನಾ ಮುಂತಾದ ಅಗ್ಗದ ಯೋಜನೆಗಳ ಮೂಲಕ ಜನರನ್ನು ಮೂರ್ಖರನ್ನಾಗಿಸಿದರು. ಈ ಹಣ ಜನರ ಕೈಸೇರುತ್ತಿರಲಿಲ್ಲ. ಬದಲಾಗಿ ಕಾಂಗ್ರೆಸ್ಸಿಗರ ಜೇಬು ತುಂಬಿಸುತ್ತಿತ್ತು. ಇವರು ಶ್ರೀಮಂತರಾಗುತ್ತ ಹೋದರೆ, ಬಡವರು ಬಡವರಾಗಿಯೇ ಉಳಿದರು. ನಮ್ಮ ಸರಕಾರ ಬಂದ ನಂತರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೊಳಿಸಿ ರೈತರ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಿದೆವು. ಬೆಳಗಾವಿ ಜಿಲ್ಲೆಯೊಂದರಲ್ಲೇ ಈವರೆಗೆ ಸುಮಾರು 16 ಸಾವಿರ ಕೋಟಿ ಹಣ ರೈತರ ಖಾತೆಗೆ ಸಂದಾಯ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಇಲ್ಲಿ ಸೇರಿರುವ ತಾಯಂದಿರು, ಯುವಕರು ಎಲ್ಲರೂ ನನ್ನದೊಂದು ವೈಯಕ್ತಿಕ ಬೇಡಿಕೆ ಈಡೇಸಿಕೊಡಬೇಕು. ಪ್ರತಿ ಮನೆಮನೆಗೆ ತೆರಳಿ ನನ್ನ ನಮಸ್ಕಾರ ಮುಟ್ಟಿಸುವುದರ ಜೊತೆಗೆ ಬಿಜೆಪಿಗೆ ಮತಚಲಾಯಿಸಲು ಮನವೊಲಿಸಬೇಕೆಂದು ಪ್ರಧಾನಿ ಮೋದಿ ಮನವಿ ಮಾಡಿದರು.
ಪ್ರಚಾರ ಸಭೆಯಲ್ಲಿ ಸುಮಾರು 3ಲಕ್ಷಕ್ಕೂ ಅಧಿಕ ಜನ ಸೇರಿದ್ದರು. ನಿಗದಿತ ಸಮಯಕ್ಕೆ ಪ್ರಧಾನಿ ಮೋದಿ ವೇದಿಕೆಗೆ ಆಗಮಿಸಿದರೆ ಅವರು ಭಾಷಣ ಮಾಡುವಾಗ ಸಭಾಂಗಣದಲ್ಲಿ ನೆರದಿದ್ದ ಜನಸ್ತೋಮದಷ್ಟೆ ಜನ ವೇದಿಕೆಯತ್ತ ಆಗಮಿಸಲು ಎರಡು ಕಿಮೀವರೆಗೆ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದರು.