ಬಂಡಾಯ ಅಭ್ಯರ್ಥಿಯಾಗಿ ಡಾ. ನಾಡಗೌಡ ಕಣಕ್ಕೆ

ಡಾ. ನಾಡಗೌಡ
Advertisement

ಬಾಗಲಕೋಟೆ: ಕಾಂಗ್ರೆಸ್‌ನ ಮೂರನೇಯ ಪಟ್ಟಿ ಬಿಡುಗಡೆಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಅತ್ಯಂತ ಕುತೂಹಲ ಮೂಡಿಸಿದ್ದ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನನಗೇ ದೊರಕಲಿದೆ ಎಂಬ ಹುಮ್ಮಸ್ಸಿನಲ್ಲಿದ್ದ ರಬಕವಿಯ ಡಾ. ಪದ್ಮಜೀತ ನಾಡಗೌಡ ಪಾಟೀಲರಿಗೆ ಪಕ್ಷ ತನ್ನೀರೆರಚಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆಂದು ಆಪ್ತರಿಂದ ತಿಳಿದು ಬಂದಿದೆ.
ಈಗಾಗಲೇ ನಾಡಗೌಡ ಬೆಂಬಲಿಗರಿಂದ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಲ್ಲ ಲಕ್ಷಣಗಳಿವೆ.
ಬಿಜೆಪಿ ಭಿನ್ನಮತಿಯರ ಬೆಂಬಲ
ಈಗಾಗಲೇ ಬಿಜೆಪಿಯಿಂದ ಹಾಲಿ ಶಾಸಕ ಸಿದ್ದು ಸವದಿಯವರಿಗೆ ಟಿಕೆಟ್ ಲಭಿಸಿರುವ ಹಿನ್ನಲೆಯಲ್ಲಿ ಟಿಕೆಟ್ ದೊರಕದೆ ತೀವ್ರ ಹತಾಶೆಯಲ್ಲಿರುವ ನೇಕಾರ ಮುಖಂಡ ರಾಜೇಂದ್ರ ಅಂಬಲಿ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಸಿ ಮಗದುಮ್, ನ್ಯಾಯವಾದಿ ಕಿರಣಕುಮಾರ ದೇಸಾಯಿ, ಡಾ. ಎಂ.ಎಸ್. ದಾನಿಗೊಂಡ ಹಾಗೂ ಮನೋಹರ ಶಿರೋಳರ ನಡೆ ನಿಗೂಢವಾಗಿದ್ದು, ಇದರಲ್ಲಿನ ಬಹುತೇಕರು ಕಾಂಗ್ರೆಸ್‌ನಲ್ಲಿ ಹೊಸ ಮುಖಕ್ಕೆ ಅವಕಾಶ ಕಲ್ಪಿಸಿರುವ ಸಿದ್ದು ಕೊಣ್ಣೂರ ಅಥವಾ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಡಾ. ಪದ್ಮಜೀತ ನಾಡಗೌಡ ಪಾಟೀಲರಿಗೆ ಬೆಂಬಲ ನೀಡುವರೇ ಅಥವಾ ಇವರೊಳಗಿನ ಓರ್ವ ವ್ಯಕ್ತಿಯನ್ನು ಕಣಕ್ಕಿಳಿಸಲಿದ್ದಾರಯೇ? ಕಾದು ನೋಡಬೇಕು.