ದಾವಣಗೆರೆ: ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಜೊತೆ ಚರ್ಚಿಸಿ ಫೆ.4ಕ್ಕೆ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಜೆಡಿಎಸ್ ವರಿಷ್ಠ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಕೊಂಡಜ್ಜಿಯಲ್ಲಿ ಪಂಚರತ್ನ ಯಾತ್ರೆಯಲ್ಲಿ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಎರಡನೇ ಪಟ್ಟಿಯಲ್ಲಿ ಸುಮಾರು 50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ಹಾಸನ ಟಿಕೆಟ್ ಗೊಂದಲ ವಿಚಾರದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಹಾಸನದಲ್ಲಿ ಗೊಂದಲ ಏನಿದೆ? ಬಿಜೆಪಿ ಅಭ್ಯರ್ಥಿ ಸೋಲಿಸುವುದಕ್ಕೆ ನಮ್ಮ ಒಬ್ಬ ಸಾಮಾನ್ಯ ಕಾರ್ಯಕರ್ತನಲ್ಲೂ ಶಕ್ತಿ ಇದೆ. ಒಬ್ಬ ಸಾಮಾನ್ಯ ಕಾರ್ಯಕರ್ತನೂ ನಿಂತು ಗೆಲ್ಲುತ್ತಾನೆ. ಎಲ್ಲದಕ್ಕೂ ಚರ್ಚೆ ಆಗಿ ಮುಗಿದು ಹೋಗಿದೆ. ಇನ್ನೂ ಏನೂ ನಿರ್ಧಾರ ಮಾಡಿಲ್ಲ, ಫೆ. 4ಕ್ಕೆ ಹಮ್ಮಿಕೊಂಡಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರ ಬಿಜೆಪಿ ನಾಯಕರ ವಾಯ್ಸ್ ಅಬ್ಬರ ಇದೆ, ಜನ ಸಂಘಟನೆ ಇಲ್ಲ. ಪಂಚರತ್ನ ಯಾತ್ರೆ ಸುನಾಮಿ ಅಲೆ ಮುಂದೆ ರಾಷ್ಟ್ರೀಯ ಪಕ್ಷಗಳು ನಿಲ್ಲಲಿಕ್ಕೆ ಸಾಧ್ಯವೇ ಇಲ್ಲ, ಮೋದಿಯವರು ನೂರು ಬಾರಿ ಬರಬಹುದು. ಆದರೆ, ಬಂದಾಗ ರಾಜ್ಯಕ್ಕೆ ಏನು ಕೊಡುಗೆ ನೀಡಿದರು ಎಂದು ಹೇಳಬೇಕಲ್ಲ. ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಉತ್ತರ ಕೊಟ್ಟಿದ್ದಾರ? ಒಂಭತ್ತು ವರ್ಷಗಳಲ್ಲಿ ಕನ್ನಡಿಗರಿಗೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದ ಹೆಚ್ಡಿಕೆ ಇವರು ಒಬ್ಬರ ಮೇಲೊಬ್ಬರು ಹೇಳುತ್ತಾ ಖೋ-ಖೋ ಆಟ ಆಡ್ತಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಯ ಬಿ ಟೀಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ನಾವು ಯಾರ ಬಿ ಟೀಂ ಅಥವಾ ಬಿ ಪ್ಲಸ್ ಟೀಂ ಅಲ್ಲ. ಬಿಜೆಪಿ ಕಾಂಗ್ರೆಸ್ ನ ಎರಡು ಸಂಖ್ಯೆ ಜೆಡಿಎಸ್ ಮಡಿಲಿಗೆ ಬೀಳಲಿದೆ. ಅತಂತ್ರ ಎನೂ ಇಲ್ಲ, 120 ಕ್ಷೇತ್ರ ಗೆಲ್ಲುತ್ತೇವೆ. ಅವರು ಗೆಲ್ಲುವುದಾಗಿ ದುಡ್ಡು ಕೊಟ್ಟು ಸರ್ವೆ ಮಾಡಿಸಿಕೊಳ್ಳುತ್ತಾರೆ. ಆದರೆ, ನನ್ನ ಸರ್ವೆ ಪ್ರಕಾರ ಜನರ ನಾಡಿ ಮಿಡಿತ ನೋಡುತ್ತಿದ್ದೇನೆ. ಈ ಬಾರಿ ಜನ ಎರಡು ಪಕ್ಷ ತಿರಸ್ಕಾರ ಮಾಡಿ ಜೆಡಿಎಸ್ ಬೆಂಬಲಿಸುತ್ತಾರೆ ಎಂದು ಭವಿಷ್ಯ ನುಡಿದರು.