ಫೆ.23 ಕ್ಕೆ ಅಮಿತ್ ಶಾ ಭೇಟಿ : ಕಲ್ಯಾಣ ಕರ್ನಾಟಕ ನಾಯಕರ ಜೊತೆ ಸಭೆ

Advertisement

ಬಳ್ಳಾರಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ 23 ರಂದು ಜಿಲ್ಲೆಯ ಸಂಡೂರಿಗೆ ಭೇಟಿ ನೀಡಲಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಅಂದು ನಗರದಲ್ಲಿ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಅಂದೇ ತೋರಣಗಲ್ಲಿನಲ್ಲಿ ನಾಲ್ಕು ಜಿಲ್ಲೆ ಬಿಜೆಪಿ ಮುಖಂಡರ ಸಭೆ ನಡೆಸಲಿದ್ದಾರೆ. ಕೋರ ಕಮೀಟಿ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಸಚಿವರು ಭಾಗಿಯಾಗಲಿದ್ದಾರೆ. ಸಂಡೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು
ಇನ್ನು ನಿನ್ನೆ ಮಂಡನೆಯಾದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿಪಕ್ಷ ನಾಯಕರು ಬಜೆಟ್ ವೇಳೆ ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿದ್ದರು, ಶಿಷ್ಟಾಚಾರ ಪಾಲಿಸದೆ ಅಗೌರವ ತೋರುವ ಕೆಲಸ ಕಾಂಗ್ರೆಸ್ ಮಾಡಿದೆ, ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಡ್ರಾಮಾ ಆರಂಭಿಸಿದ್ದು, ಅದೊಂದು ಡ್ರಾಮಾ ಕಂಪನಿ, ಬಜೆಟ್ ಜನರಿಗೆ ತಲುಪದಂತೆ ಮಾಡಬೇಕೆಂಬುದು ಕಾಂಗ್ರೆಸ್ ಉದ್ದೇಶ,ಮುಂದಿನ ದಿನಗಳಲ್ಲಿ ಜನರೆ ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣೆಯ ದೃಷ್ಟಿಯನ್ನು ಇಟ್ಟುಕೊಂಡು ಬಜೆಟ್ ಮಂಡಿಸಿಲ್ಲ, ಆರ್ಥಿಕ ದೃಷ್ಟಿಕೋನವಿಟ್ಟು ಕೊಂಡು ಸಿಎಂ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.ಬಜೆಟ್‌ನಲ್ಲಿ ಬಳ್ಳಾರಿ ಜಿಲ್ಲೆಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಕೃಷಿ, ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ, ಮಹಿಳೆಯರ ಸಬಲೀಕರಣ ಸೇರಿದಂತೆ ಎಲ್ಲ ವಲಯಕ್ಕೆ ಆದ್ಯತೆ ನೀಡಲಾಗಿದೆ. ಹಾಲು ಉತ್ಪಾದನೆ ಹೆಚ್ಚಿಸಲು ಮೆಗಾ ಡೈರಿಗೆ ರೂ.100 ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ. ಸಿಗಡಿ ಕೃಷಿ ಕ್ಲಸ್ಟರ್ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.