ಫಸ್ಟ್ ಕ್ಲಾಸ್ ಸಿಟಿಯಲ್ಲಿ ಸೆಕೆಂಡ್ ಕ್ಲಾಸ್ ಮತದಾನ: ಅನಿಸಿಕೆ ಹಂಚಿಕೊಂಡ ಶಾಸಕ ಸುರೇಶ್ ಕುಮಾರ್

Advertisement

ಬೆಂಗಳೂರು: ” ಫಸ್ಟ್ ಕ್ಲಾಸ್ ಸಿಟಿಯಲ್ಲಿ ಸೆಕೆಂಡ್ ಕ್ಲಾಸ್ ಮತದಾನ” ಎಂಬ ಬಿರುದೂ ಸಹ ನಮ್ಮ ಪಾಲಾಗಿದೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಮತ್ತೊಮ್ಮೆ ನಗರ ಪ್ರದೇಶಗಳಲ್ಲಿ ಅದರಲ್ಲೂ ಬೆಂಗಳೂರು ಮಹಾನಗರದಲ್ಲಿ ಮತದಾನ ತೀರ ಕಡಿಮೆ ಎಂಬುದು ಎಲ್ಲಾ ಮಾಧ್ಯಮಗಳಲ್ಲಿ ಕಂಡುಬಂದಿರುವ ನಿಟ್ಟುಸಿರು.
” ಫಸ್ಟ್ ಕ್ಲಾಸ್ ಸಿಟಿಯಲ್ಲಿ ಸೆಕೆಂಡ್ ಕ್ಲಾಸ್ ಮತದಾನ” ಎಂಬ ಬಿರುದೂ ಸಹ ನಮ್ಮ ಪಾಲಾಗಿದೆ.
ನಾನೊಬ್ಬ ಬೆಂಗಳೂರಿನ ನಾಗರಿಕ ನಾಗಿ ಬೆಂಗಳೂರು ಬಗ್ಗೆ ಬಂದಿರುವ ಈ “ಪ್ರಶಂಸಾ” ಪತ್ರವನ್ನು ತಲೆ ಬಾಗಿ ಸ್ವೀಕರಿಸುತ್ತ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ
1) ನಾನು ಚುನಾವಣಾ ಆಯೋಗವನ್ನು ಕನಿಷ್ಠ ಮೂರು ನಾಲ್ಕು ಬಾರಿ ಮನವಿ ಮಾಡಿಕೊಂಡಿದ್ದೇನೆ.
” ಬೆಂಗಳೂರು ನಗರದಲ್ಲಿ ಚುನಾವಣೆಯನ್ನು ಶುಕ್ರವಾರ, ಶನಿವಾರ, ಭಾನುವಾರ ಅಥವಾ ಸೋಮವಾರ ಇಡಬಾರದು” ಎಂದು.
ಮತದಾನದ ದಿನ ಶುಕ್ರವಾರ ವಾದರೆ, ಆಯಾ ದಿನವನ್ನು ಚುನಾವಣಾ ಆಯೋಗ ರಜೆಯೆಂದು ಘೋಷಿಸಿದರೆ ಅನೇಕರು ಇದನ್ನು ದೀರ್ಘ ವಾರಂತ್ಯ ವೆಂದು ಪರಿಗಣಿಸಿ ತಮ್ಮ ಸಂತೋಷಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ.
ಇದು ಸಹಜ
2) ಕೆಲವು ಮತದಾನ ಕೇಂದ್ರಗಳಲ್ಲಿ ಉದಾಹರಣೆಗೆ ರಾಜಾಜಿನಗರ ಕ್ಷೇತ್ರದ ಕಾಮಾಕ್ಷಿಪಾಳ್ಯ ವಾರ್ಡಿನ ವಾರ್ಡ್ ಆಫೀಸ್ ಮತಗಟ್ಟೆ ಸಂಖ್ಯೆ 99ರಲ್ಲಿ ಇರುವ ಮತದಾರರ ಸಂಖ್ಯೆ 1424.
ಇಂತಹ ಕಡೆ (ಮತದಾನ ಪ್ರಕ್ರಿಯೆಯಲ್ಲಿ ನಿಧಾನವಾದ ಕಾರಣ) ಅಲ್ಲಿ ನಿಂತ ಉದ್ದವಾದ ಸಾಲನ್ನು ಕಂಡು ಕೆಲವರು ವಾಪಸ್ ಹೋಗಿದ್ದು ನಿಜ. ಇಂತಹ ಕಡೆಗಳಲ್ಲಿ ಮತ್ತೊಂದು ಉಪ ಕೇಂದ್ರ ಮಾಡಿದ್ದರೆ ಒಳಿತಾಗುತ್ತಿತ್ತು.
3)ನಮ್ಮ ಕ್ಷೇತ್ರದ ಮತ್ತೊಂದು ಉದಾಹರಣೆ ಕೊಡಬೇಕೆಂದರೆ ನಮ್ಮ ಕ್ಷೇತ್ರದಲ್ಲಿ ಇರುವ ಮತದಾರರ ಪೈಕಿ ಸುಮಾರು 50 ಸಾವಿರ ಮತದಾರರಿಗೆ ನಮ್ಮ ಕಾರ್ಯಕರ್ತರು ಮತದಾನ ಚೀಟಿ ತಲುಪಿಸಲು ಆಗಲಿಲ್ಲ.
ಏಕೆಂದರೆ ಅನೇಕ ವರ್ಷಗಳ ಹಿಂದೆ ತೀರಿ ಹೋದವರು, ಮನೆಗಳಲ್ಲಿ ಬಾಡಿಗೆಗೆ ಇದ್ದ ಅನೇಕರು ಇಲ್ಲಿಂದ ಬೇರೆ ಕಡೆ ಮನೆ ಮಾಡಿಕೊಂಡು ಹೋಗಿದ್ದರೂ, ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇನ್ನೂ ಇವೆ.
ಅವರನ್ನು ಸಂಪರ್ಕಿಸಲು ನಮ್ಮ ಕಾರ್ಯಕರ್ತರು ಪ್ರಯತ್ನ ಪಟ್ಟರೂ ಸಹ ಬಹುತೇಕ ಸಾಧ್ಯವಾಗಲಿಲ್ಲ.
ನಮ್ಮ ಮತದಾರ ಪಟ್ಟಿಯನ್ನು ಪೂರ್ಣ ಸ್ವಚ್ಛಗೊಳಿಸುವ ಕಾರ್ಯ ಆಗುವ ವರೆಗೂ “ಮತದಾನ ಪ್ರಮಾಣ ಕಡಿಮೆ” ಎಂಬ
ಗೊಣಗಾಟ ಕೇಳುತ್ತಲೇ ಇರಬೇಕು.
3) ಓರ್ವ ಮತದಾರರನ್ನು ಸಂಪರ್ಕಿಸಿ “ನಿಮ್ಮ ಮತ ನಮ್ಮ ಕ್ಷೇತ್ರದಲ್ಲಿ ಇದೆ, ದಯವಿಟ್ಟು ಬಂದು ಮತ ಚಲಾಯಿಸಿ” ಎಂದು ಮನವಿ ಮಾಡಿಕೊಂಡಾಗ ಆ ಮಹನೀಯರು ಹೇಳಿದ್ದು” ನನ್ನದು ಇನ್ನೂ ಮೂರು ಕಡೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಇದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವೈದ್ಯ ಅಭ್ಯರ್ಥಿ ನನಗೆ ಇಷ್ಟ ಅದಕ್ಕೋಸ್ಕರ ನಾನು ಅಲ್ಲಿ ಮತ ಚಲಾಯಿಸುತ್ತೇನೆ” ಎಂದು.
ಆಧಾರ್ ಕಾರ್ಡ್ ಲಿಂಕ್ ಆಗುವವರೆಗೂ ಎರಡು ಮೂರು ಹೆಚ್ಚು ಕಡೆಗಳಲ್ಲಿ ಮತದಾರರ ಹೆಸರು ಇರುವುದು ಮುಂದುವರೆಯುತ್ತದೆ. ಇದರಿಂದ ಮತದಾನ ಪ್ರಮಾಣಕ್ಕೆ ಏಟು ಬೀಳುತ್ತದೆ
4) ಅಭ್ಯರ್ಥಿಗಳ ಜೊತೆ ಕ್ಷೇತ್ರದ ಜನತೆ ಯಾವುದಾದರೂ ಒಂದು ರೀತಿಯಲ್ಲಿ ನಂಟು, ಸಂಬಂಧ, ಸದಾ ಅಭಿಪ್ರಾಯ ಇದ್ದಲ್ಲಿ ಮತದಾನ ಪ್ರಮಾಣ ಹೆಚ್ಚಾಗಲು ಸಹಾಯವಾಗುತ್ತದೆ
ನಮ್ಮ ರಾಜಾಜಿನಗರ ಕ್ಷೇತ್ರದಲ್ಲಿ ವರದಿ ಆಗಿರುವಂತೆ ಮತದಾನ ಪ್ರಮಾಣ ಶೇಕಡ 51.11.
ಆದರೆ ನಮ್ಮಲ್ಲಿ ಮತದಾನ ಪಟ್ಟಿಯಲ್ಲಿ ಹೆಸರು ಇದ್ದು ಕ್ಷೇತ್ರದಲ್ಲಿ ಇಲ್ಲದ, ಮರಣ ಹೊಂದಿದವರ ಹೆಸರುಗಳು ಇನ್ನೂ ಮುಂದುವರೆದಿರುವುದು…ಇವೆಲ್ಲ ಸೇರಿ ದಂತೆ ಸಂಖ್ಯೆ ಲೆಕ್ಕ ಹಾಕಿ ಅದನ್ನು ಒಟ್ಟು ಮತದಾರರ ಸಂಖ್ಯೆಯಿಂದ ಕಳೆದರೆ ಉಳಿಯುವ ಮತದಾರರ ಪೈಕಿ ಆಗಿರುವ ಮತದಾನ ಶೇಕಡ 75 ಕ್ಕೂ ಹೆಚ್ಚು ಎಂಬುದು ನನ್ನ ಅನಿಸಿಕೆ.
ಇಷ್ಟೆಲ್ಲ ಸಂಗತಿಗಳ ಮಧ್ಯೆ ರಾಜಾಜಿನಗರ ಕ್ಷೇತ್ರದಿಂದ ಬೆಂಗಳೂರು ಕೇಂದ್ರ ಬಿಜೆಪಿ ಗೆ 40,000 ಕ್ಕೂ ಹೆಚ್ಚು ಮತಗಳ ಬಹುಮತ ಬರುವ ವಿಶ್ವಾಸ ನಮ್ಮೆಲ್ಲರದ್ದೂ ಎಂದಿದ್ದಾರೆ.