ಬಿ. ಅರವಿಂದ
ಹುಬ್ಬಳ್ಳಿ: ನಾಳೆ ಮಂಗಳವಾರ ಮತ ಎಣಿಕೆ ನಡೆಯಲಿದ್ದು ಮೂರನೇ ಹಂತದಲ್ಲಿ (ಕರ್ನಾಟಕದ ೨ನೇ ಹಂತ) ಚುನಾವಣೆ ಎದುರಿಸಿದ ಉತ್ತರದ ಹದಿನಾಲ್ಕು ಕ್ಷೇತ್ರಗಳ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಿದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಮಾಜಿ ಸ್ಪೀಕರ್ ಹಾಗೂ ಓರ್ವ ಪ್ರಭಾವಿ ಕೇಂದ್ರ ಸಚಿವ ಕಣದಲ್ಲಿರುವ ಪ್ರಮುಖರು. ಇವರಿಗೆ ಪ್ರತಿಸ್ಪರ್ಧಿಗಳಾಗಿ ಸಚಿವರ ಕುಟುಂಬ ವರ್ಗದವರು ಸೆಣಸಿರುವುದು ವಿಶೇಷ. ಹೀಗಾಗಿ ಇಲ್ಲಿ, ಫಲಿತಾಂಶ ಏನೇ ಆದರೂ ದಾಖಲೆಯಾಗಲಿದೆ.
ಮಧ್ಯ ಕರ್ನಾಟಕದ ದಾವಣಗೆರೆ ಮತ್ತು ಮಲೆನಾಡಿನ ಶಿವಮೊಗ್ಗ ಹೊರತುಪಡಿಸಿ ಉಳಿದ ಹನ್ನೆರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇಲ್ಲಿ ಏರ್ಪಟ್ಟಿತ್ತು. ಅಲ್ಲದೇ ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ ಕೆಲ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ಅನುಭವ ಇಲ್ಲದವರನ್ನು ಕಣಕ್ಕೆ ಇಳಿಸಿದ್ದವು.
ಈ ಎಲ್ಲ ಹದಿನಾಲ್ಕು ಕ್ಷೇತ್ರಗಳು ೨೦೧೯ರಲ್ಲಿ ಬಿಜೆಪಿ ಪಾಲಾಗಿದ್ದವು. ಆದರೂ ಬಿಜೆಪಿ ಆರು ಹಾಲಿ ಸಂಸದರನ್ನು (ಅನಂತ ಕುಮಾರ ಹೆಗಡೆ, ಜಿ.ಎಂ.ಸಿದ್ದೇಶ್ವರ, ಶಿವಕುಮಾರ ಉದಾಸಿ, ಮಂಗಳಾ ಅಂಗಡಿ, ವೈ.ದೇವೇಂದ್ರಪ್ಪ ಮತ್ತು ಕರಡಿ ಸಂಗಣ್ಣ) ಕೈ ಬಿಟ್ಟು ಹೊಸಬರಿಗೆ ಟಿಕೆಟ್ ನೀಡಿತು.
ಬಿಜೆಪಿ ಹೊಸ ಮುಖಗಳ ಪೈಕಿ ಕೊಪ್ಪಳದ ಡಾ.ಬಸವರಾಜ ಕ್ಯಾವತರ್, ರಾಜ್ಯ ರಾಜಕಾರಣದಲ್ಲಿ ಇನ್ನೂ ಅಷ್ಟಾಗಿ ಪರಿಚಯ ಇಲ್ಲದಿರುವ ಹೆಸರು. ಈ ಮಾನದಂಡದಲ್ಲಿ ನೋಡಿದಾಗ ಸಂಪೂರ್ಣ ಹೊಸ ಮುಖ. ದಾವಣಗೆರೆಯ ಗಾಯತ್ರಿ ಸಿದ್ದೇಶ್ವರ ಕೂಡ ರಾಜಕೀಯಕ್ಕೆ ಹೊಸಬರು.
ಉಳಿದಂತೆ ಬೆಳಗಾವಿಯಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿರುವ ಜಗದೀಶ ಶೆಟ್ಟರ, ಹಾವೇರಿಯಲ್ಲಿ ಆಶೀರ್ವಾದ ಬಯಸಿರುವ ಬಸವರಾಜ ಬೊಮ್ಮಾಯಿ, ಕೆನರಾದಲ್ಲಿ (ಉತ್ತರ ಕನ್ನಡ) ಸ್ಪರ್ಧಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ಬಳ್ಳಾರಿಯಲ್ಲಿ ನಿಂತಿರುವ ಬಿ.ಶ್ರೀರಾಮುಲು ಬಿಜೆಪಿಯ
ರಾಜಕೀಯದ ಹಳೇ ಹುಲಿಗಳು.
ಬಿಜೆಪಿ ಅಭ್ಯರ್ಥಿಗಳ ಪೈಕಿ ಬಸವರಾಜ ಬೊಮ್ಮಾಯಿ ಹಾಲಿ ಶಾಸಕರೂ (ಶಿಗ್ಗಾವಿ) ಕೂಡ. ಉತ್ತರ ಕರ್ನಾಟಕದ ಕಣದಲ್ಲಿರುವವರ ಕೇಸರಿ ಪಡೆಯ ರಾಜ್ಯ ಪ್ರಮುಖರ ಪೈಕಿ ಏಕೈಕ ಶಾಸಕ ಇವರಾಗಿದ್ದಾರೆ. ಉಳಿದವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರು.
ದಾವಣಗೆರೆಯಲ್ಲಿ ಹಾಲಿ ಸಂಸದ ಸಿದ್ದೇಶ್ವರ ಬದಲು ಅವರ ಪತ್ನಿ ಗಾಯತ್ರಿ ಅವರಿಗೆ ಮಣೆ ಹಾಕಿದ್ದು ಬಿಟ್ಟರೆ ಉಳಿದಂತೆ ಕುಟುಂಬ ವರ್ಗದಲ್ಲಿ ಟಿಕೆಟ್ ನೀಡಿಲ್ಲ.
ಪ್ರಹ್ಲಾದ ಜೋಶಿ ಮತ್ತು ಗದ್ದಿಗೌಡರ್ ಐದನೇ ಸತತ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಜಿಗಜಿಣಗಿ sಸತತ ಏಳನೇ (ದಾಖಲೆ) ಗೆಲುವಿಗೆ ಕಾದಿದ್ದಾರೆ. ಭಗವಂತ ಖೂಬಾ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.
ಪ್ರತಿಸ್ಪರ್ಧಿ ಕಾಂಗ್ರೆಸ್ ಈ ಬಾರಿ ಎಲ್ಲ ಹದಿನಾಲ್ಕು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಈ ಪೈಕಿ ಸಂಡೂರಿನ ಶಾಸಕ ಮತ್ತು ಮಾಜಿ ಸಚಿವ ಇ.ತುಕಾರಾಂ ಹಾಲಿ ರಾಜ್ಯ ಕಾಂಗ್ರೆಸ್ ರಾಜಕಾರಣದ ಸಕ್ರಿಯ ಪಡಸಾಲೆಯಲ್ಲಿರುವಂಥವರು. ಉಳಿದವರಲ್ಲಿ ಅಂಜಲಿ ನಿಂಬಾಳ್ಕರ್ (ಕೆನರಾ) ಮತ್ತು ರಾಜು ಅಲಗೂರ (ವಿಜಯಪುರ) ಮಾತ್ರ ಲೋಕಸಭೆ ಕಣಕ್ಕೆ ಹೊಸಬರಾದರೂ ಮಾಜಿ ಶಾಸಕರಾಗಿ ಸಂಸದೀಯ ಅನುಭವ ಪಡೆದಿದ್ದಾರೆ.
ಸಚಿವ ಲಕ್ಷಿ ಹೆಬ್ಬಾಳಕರ್ ಪುತ್ರ ಮೃಣಾಲ್ ಹೆಬ್ಬಾಳಕರ್ (ಬೆಳಗಾವಿ), ಸಚಿವರಾದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (ಚಿಕ್ಕೋಡಿ), ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ (ಬೀದರ್) ಹಾಗೂ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ, ರಾಜಕೀಯಕ್ಕೆ ಸಂಪೂರ್ಣ ಹೊಸ ಮುಖಗಳು.
ರಾಯಚೂರಿನ ಕುಮಾರ್ ನಾಯಕ್ (ನಿವೃತ್ತ ಐಎಎಸ್ ಅಧಿಕಾರಿ), ದಾವಣಗೆರೆಯ ಡಾ.ಪ್ರಭಾ ಮಲ್ಲಿಕಾರ್ಜುನ (ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ), ಶಿವಮೊಗ್ಗದ ಗೀತಾ ಶಿವರಾಜಕುಮಾರ, ಹಾವೇರಿಯ ಆನಂದಯ್ಯ ಸ್ವಾಮಿ ಗಡ್ಡದೇವರಮಠ, ಧಾರವಾಡದ ವಿನೋದ ಅಸೂಟಿ, ಕೊಪ್ಪಳದ ರಾಜಶೇಖರ ಹಿಟ್ನಾಳ್, ಕಲಬುರಗಿಯ ರಾಮಕೃಷ್ಣ ದೊಡ್ಡಮನಿ (ಮಲ್ಲಿಕಾರ್ಜುನ ಖರ್ಗೆ ಅಳಿಯ) ಇವರ ಮತ್ತು ಇವರ ಹಿಂದಿರುವ `ಪ್ರಭಾ- ವಲಯ’ದ ಭವಿಷ್ಯ ನಾಳೆ ನಿರ್ಧಾರವಾಗಲಿದೆ.
ಉತ್ತರದ ಕಣದಲ್ಲಿ ಬಿಜೆಪಿಯ ಅನುಭವಿಗಳನ್ನು ಕಾಂಗ್ರೆಸ್ ಹೊಸಬರು ಸೋಲಿಸಿದರೆ ದಾಖಲೆ ನಿರ್ಮಾಣವಾಗಲಿದೆ. ಹಾಗೆಯೇ ಬಿಜೆಪಿಯ ಅಭ್ಯರ್ಥಿಗಳು ಗೆದ್ದರೆ ಒಂದಲ್ಲ ಒಂದು ಬಗೆಯ ಸಂಸದೀಯ ದಾಖಲೆ ತೆರೆದುಕೊಳ್ಳಲಿದೆ.
ಶಿವಮೊಗ್ಗ, ದಾವಣಗೆರೆಯತ್ತ ಗಮನ
ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಇವೆರಡೂ ಕ್ಷೇತ್ರಗಳ ಫಲಿತಾಂಶದ ಕಡೆಗೆ ರಾಜಕೀಯ ವಿಶ್ಲೇಷಕರ ಗಮನ ಹರಿದಿದೆ. ಪುತ್ರನಿಗೆ ಟಿಕೆಟ್ ಕೊಡಲಿಲ್ಲ ಎಂದು ಮುನಿಸಿಕೊಂಡು ಬಿಜೆಪಿಯಿಂದ ಬಂಡೆದ್ದು ಶಿವಮೊಗ್ಗದಲ್ಲಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪ ಹಾಗೂ ತಮಗೆ ಟಿಕೆಟ್ ತಪ್ಪಿತೆಂದು ಸಿಟ್ಟಿನಿಂದ ದಾವಣಗೆರೆ ಕಾಂಗ್ರೆಸ್‌ನಿಂದ ಬಂಡಾಯ ಎದ್ದು ಕಣದಲ್ಲಿರುವ ವಿನಯ ಕುಮಾರ್ ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಇಕ್ಕಟ್ಟು ತಂದೊಡ್ಡಿದ್ದಾರೆ.
ಉಳಿದ ಹನ್ನೆರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ನಡೆದಿತ್ತು.
ಕ್ಷೇತ್ರಗಳು, ಅಭ್ಯರ್ಥಿಗಳು
- ಶಿವಮೊಗ್ಗ: ಬಿ.ವೈ.ರಾಘವೇಂದ್ರ (ಬಿಜೆಪಿ), ಗೀತಾ ಶಿವರಾಜಕುಮರ (ಕಾಂಗ್ರೆಸ್), ಕೆ.ಎಸ್.ಈಶ್ವರಪ್ಪ (ಪಕ್ಷೇತರ).
- ದಾವಣಗೆರೆ: ಗಾಯತ್ರಿ ಸಿದ್ದೇಶ್ವರ (ಬಿಜೆಪಿ), ಡಾ.ಪ್ರಭಾ ಮಲ್ಲಿಕಾರ್ಜುನ (ಕಾಂಗ್ರೆಸ್), ವಿನಯ ಕುಮಾರ್ (ಪಕ್ಷೇತರ).
- ಹಾವೇರಿ: ಬಸವರಾಜ ಬೊಮ್ಮಾಯಿ (ಬಿಜೆಪಿ), ಆನಂದಯ್ಯ ಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್).
- ಧಾರವಾಡ: ಪ್ರಲ್ಹಾದ ಜೋಶಿ (ಬಿಜೆಪಿ), ವಿನೋದ ಅಸೂಟಿ (ಕಾಂಗ್ರೆಸ್).
- ಬೆಳಗಾವಿ: ಜಗದೀಶ ಶೆಟ್ಟರ (ಬಿಜೆಪಿ), ಮೃಣಾಲ್ ಹೆಬ್ಬಾಳಕರ್ (ಕಾಂಗ್ರೆಸ್).
- ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ), ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್)
- ಕೆನರಾ (ಉತ್ತರ ಕನ್ನಡ): ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ), ಡಾ.ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್).
- ಬಾಗಲಕೋಟೆ: ಪಿ.ಸಿ.ಗದ್ದಿಗೌಡರ್ (ಬಿಜೆಪಿ), ಸಂಯುಕ್ತಾ ಪಾಟೀಲ (ಕಾಂಗ್ರೆಸ್).
- ವಿಜಯಪುರ: ರಮೇಶ್ ಜಿಗಜಿಣಗಿ (ಬಿಜೆಪಿ), ರಾಜು ಅಲಗೂರ (ಕಾಂಗ್ರೆಸ್).
- ಕೊಪ್ಪಳ: ಡಾ.ಬಸವರಾಜ ಕ್ಯಾವತರ್ (ಬಿಜೆಪಿ), ರಾಜಶೇಖರ ಹಿಟ್ನಾಳ್ (ಕಾಂಗ್ರೆಸ್).
- ಬಳ್ಳಾರಿ: ಬಿ.ಶ್ರೀರಾಮುಲು (ಬಿಜೆಪಿ), ಇ.ತುಕಾರಾಂ (ಕಾಂಗ್ರೆಸ್).
- ರಾಯಚೂರು: ರಾಜಾ ಅಮರೇಶ್ವರ ನಾಯಕ (ಬಿಜೆಪಿ), ಕುಮಾರ ನಾಯಕ್ (ಕಾಂಗ್ರೆಸ್).
- ಕಲಬುರಗಿ: ಡಾ.ಉಮೇಶ್ ಜಾಧವ್ (ಬಿಜೆಪಿ), ರಾಮಕೃಷ್ಣ ದೊಡ್ಡಮನಿ (ಕಾಂಗ್ರೆಸ್).
- ಬೀದರ್: ಭಗವಂತ ಖೂಬಾ (ಬಿಜೆಪಿ), ಸಾಗರ್ ಖಂಡ್ರೆ (ಕಾಂಗ್ರೆಸ್).