ಪ್ರೀತಿಸಿ ವಿವಾಹವಾಗಿದ್ದ ಮುಸ್ಲಿಂ ಮಹಿಳೆಗೆ ಕಿರುಕುಳ

Advertisement

ಗದಗ: ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿ, ಕೊರೊನಾ ಸಂಕಷ್ಟದಲ್ಲಿ ಪತಿಯನ್ನೂ ಕಳೆದುಕೊಂಡಿರುವ ಮುಸ್ಲಿಂ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಕೆಲವು ಮುಸ್ಲಿಂ ಪುಂಡರು ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ಪ್ರಕರಣ ದಾಖಲಿಸಿದ್ದಾಳೆ.
ವಿಪರ್ಯಾಸವೆಂದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಮುಸ್ಲಿಂ ಪುಂಡರ ವಶೀಲಿಯಿಂದ ಮಹಿಳೆಯನ್ನೇ ಒದ್ದು ಒಳಗೆ ಹಾಕುವದಾಗಿ ಬೆದರಿಸಿ ಕಳಿಸಿದ್ದಾರೆಂದು ಸಂತ್ರಸ್ತ ಮಹಿಳೆ ಪತ್ರಕರ್ತರ ಮುಂದೆ ದೂರಿದ್ದಾಳೆ.
ಆಗಿದ್ದಾದರೂ ಏನು?: ಗದಗ ಬೆಟಗೇರಿಯ ನರಸಾಪೂರ ಆಶ್ರಯ ಕಾಲೋನಿ ನಿವಾಸಿ ಶೆಹನಾಜ್ ಬೇಗಂ ಎಂಬ ಮಹಿಳೆ ಹಿಂದು ಸಮಾಜಕ್ಕೆ ಸೇರಿದ ಕೃಷ್ಣಾ ಕ್ವಾಣಿ ಎಂಬುವವನನ್ನು ಪ್ರೀತಿಸಿ ವಿವಾಹವಾಗಿದ್ದಳು. ಮೂರು ವರ್ಷಗಳ ಹಿಂದೆ ಮಹಿಳೆಯ ಪತಿ ಕೃಷ್ಣಾ ಕ್ವಾಣಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾನೆ. ಆಗಿನಿಂದಲೂ ಈ ಪುಂಡರ ಗುಂಪು ಮಹಿಳೆ ಹಾಗೂ ಆಕೆಯ ಪುತ್ರಿಯರ ಮೇಲೆ ಹಲ್ಲೆ, ದೌರ್ಜನ್ಯ, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಅಲ್ಲದೇ ಕಿರುಕುಳವನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ಲಿಯಾಕತ್ ಮತ್ತು ಸ್ನೇಹಿತರು ತನ್ನ ಮತ್ತು ಪುತ್ರ ಸದ್ದಾಂ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆಂದು ಮಹಿಳೆ ದೂರಿದ್ದಾಳೆ.