ಬಳ್ಳಾರಿ: ಮುಂಬರುವ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷಗಳು ಪ್ರಭಾವ ಬೀರಲ್ಲ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಪರೋಕ್ಷವಾಗಿ ಆಪ್ತಮಿತ್ರ ಜನಾರ್ಧನ ರೆಡ್ಡಿಯವರ ಪಕ್ಷದ ಬಗ್ಗೆ ಕುಟುಕಿದರು.
ನಗರದ ದೇವಿನಗರದಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರು ರಾಮುಲು ಮುಖ ನೋಡಿ ಅಥವಾ ಮತ್ತೊಬ್ಬರ ಮುಖ ನೋಡಿ ಮತ ಹಾಕಬಾರದು. ಮೈಸೂರು ಭಾಗದಲ್ಲಿ ಅಷ್ಟೇ ಅಲ್ಲ, ಕಲ್ಯಾಣ ಕರ್ನಾಟಕ ಭಾಗದಲ್ಲೂ ಬಿಜೆಪಿ ಗೆಲ್ಲಲಿದೆ. ಸ್ವಂತ ಬಲದಿಂದ ನಾವು ೧೫೦ ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಪ್ರಭಾವ ಬೀರಲ್ಲ ಎಂದು ಪುನರುಚ್ಛರಿಸಿದ ಸಚಿವ ರಾಮುಲು ಅವರು, ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಗಳ ಮೂರು ಸಾಮಾನ್ಯ ಕ್ಷೇತ್ರಗಳಾದ ಬಳ್ಳಾರಿ ನಗರ, ವಿಜಯನಗರ (ಹೊಸಪೇಟೆ), ಹರಪನಹಳ್ಳಿಯಲ್ಲಿ ಬಿಜೆಪಿಯ ಜಿ.ಸೋಮಶೇಖರ್ ರೆಡ್ಡಿ, ಆನಂದ್ ಸಿಂಗ್, ಕರುಣಾಕರ ರೆಡ್ಡಿ ಗೆಲ್ಲುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಪಕ್ಷ ಕಟ್ಟಬಹುದು. ಚುನಾವಣೆಯಲ್ಲಿ ಸ್ಪರ್ಧಿಸಬಹು. ಆದರೆ, ಜನರ ಒಲವು, ಬಿಜೆಪಿ ಮೇಲೆ ಇದೆ. ದೇಶದ ಚುನಾವಣೆ ಮೋದಿ ಹಾಗೂ ರಾಜ್ಯದ ಚುನಾವಣೆ ಬಸವಾರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.