ತಾಳಿಕೋಟೆ: ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದ ಜಮೀನುಗಳಿಗೆ ಡೋಣಿ ನದಿಯ ಪ್ರವಾಹದಿಂದಾಗಿ ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದ್ದು ಕೂಡಲೇ ಸರಕಾರ ಕಣ್ಣು ತೆರೆದು ರೈತರ ಬದುಕಿಗೆ ಆಸರೆಯಾಗಬೇಕೆಂದು ದೇವರ ಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ನಾಯಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಒತ್ತಾಯಿಸಿದ್ದಾರೆ.
ಸೋಮವಾರರಂದು ದೇವರ ಹಿಪ್ಪರಗಿ ಮತಕ್ಷೇತ್ರದ ಡೋಣಿ ನದಿಯ ಪ್ರವಾಹಕ್ಕೆ ತುತ್ತಾದ ಬೋಳವಾಡ, ಗುತ್ತಿಹಾಳ, ಬೊಮ್ಮನಹಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ಬೆಟ್ಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಮಳೆಯಿಂದ ಪ್ರವಾಹ ಪೀಡಿತಕ್ಕೆ ಒಳಗಾದ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯಪೂರ ಜಿಲ್ಲೆಯನ್ನು ಕೈಬಿಡಲಾಗಿದೆ. ಡಬಲ್ ಇಂಜಿನ್ ಸರ್ಕಾರವೆಂದು ಗುರುತಿಸಿಕೊಂಡಿರುವ ಬಿಜೆಪಿ ಸರ್ಕಾರ ರೈತಪರವಾದ ಯಾವೊಂದು ಕೆಲಸಗಳನ್ನು ಮಾಡಿಲ್ಲ. ಡೋಣಿ ನದಿ ಪ್ರವಾಹದಿಂದ ಜಿಲ್ಲೆಯ ಅನೇಕ ಹಳ್ಳಿಗಳ ರೈತರ ಜಮೀನುಗಳು ಭಾಗಶಃ ನಾಶವಾಗಿ ಹೋಗಿವೆ ಅದರಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರವೂ ಹೊರತಾಗಿಲ್ಲ. ಬೋಳವಾಡ, ಗುತ್ತಿಹಾಳ, ಬೊಮ್ಮನಹಳ್ಳಿ, ಪತ್ತೇಪೂರ, ಅಲ್ಲದೇ ಸಾತಿಹಾಳ, ಬೈರವಾಡಗಿ, ಮಾರ್ಕಪ್ಪನಹಳ್ಳಿ, ಸಿಂಧಗೇರಿ, ಕಡಕೋಳ ಒಳಗೊಂಡು ಅನೇಕ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಆದರೂ ಸರ್ಕಾರ, ಬಿಜೆಪಿ ಶಾಸಕರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.