ಕರ್ನಾಟಕದಲ್ಲಿ ಇಂದು ನಡೆದ ಮತದಾನ ಹಲವು ಹೊಸ ಆಲೋಚನೆಗಳನ್ನು ಮೂಡಿಸಿದೆ. ಮತದಾನವನ್ನು ನೋಡಿದರೆ ಪ್ರಜಾಪ್ರಭುತ್ವದ ಬೇರುಗಳು ಇನ್ನೂ ಆಳವಾಗಿ ಬೇರೂರುವ ಲಕ್ಷಣಗಳು ಕಂಡು ಬಂದಿವೆ. ಅದರಲ್ಲೂ ಯುವ ಜನಾಂಗ ರಾಜಕೀಯದ ಬಗ್ಗೆ ಅಸಮಾಧಾನ ಹೊಂದಿದ್ದರೂ ಮತದಾನದಲ್ಲಿ ಆಸಕ್ತಿ ಕಳೆದುಕೊಂಡಿಲ್ಲ ಎಂಬುದು ಸಂತಸದ ಸಂಗತಿ. ಇದೇ ಪರಿಪೂರ್ಣ ಎಂದರ್ಥವಲ್ಲ. ಈಗ ನಾವು ಪ್ರಬುದ್ಧ ಪ್ರಜಾಪ್ರಭುತ್ವದತ್ತ ಹೆಜ್ಜೆ ಇಡುತ್ತಿದ್ದೇವೆ ಎಂಬುದು ಆಶಾದಾಯಕ ಬೆಳವಣಿಗೆ.
ಮುಂಬರುವ ದಿನಗಳಲ್ಲಿ ಮತದಾನದ ಮೂಲಕ ಮತದಾರರು ತಮ್ಮ ಆದೇಶವನ್ನು ಇನ್ನು ಹೆಚ್ಚು ಸ್ಪಷ್ಟವಾಗಿ ನೀಡುವ ಕಾಲ ಬರಲಿದೆ. ಮತದಾನದ ಪ್ರಮಾಣ ಏರುಮುಖವಾಗುವುದಷ್ಟೇ ಮುಖ್ಯವಲ್ಲ. ಪ್ರಜಾಪ್ರಭುತ್ವ ಇನ್ನೂ ಸದೃಢಗೊಳ್ಳಬೇಕು ಎಂದರೆ ಚುನಾವಣೆ ಕಾಲದಲ್ಲಿ ಆಮಿಷಗಳನ್ನೊಡ್ಡುವ, ಉಡುಗೊರೆಗಳನ್ನು ನೀಡುವ, ಉಚಿತ ಸೇವೆಗಳನ್ನು ನೀಡುವ ಪ್ರಯತ್ನಗಳು ಕಡಿಮೆಯಾಗಬೇಕು. ಇವೆಲ್ಲವನ್ನೂ ಮತದಾರ ಕಡೆಗಣಿಸುವ ಕಾಲ ಬರಬೇಕು. ಇವುಗಳನ್ನು ಮೀರಿ ಮತದಾರ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಿರ್ವಿಕಾರ ಮನೋಭಾವದಿಂದ ಮತ ಚಲಾಯಿಸಲು ಮುಂದಾದಾಗ ಸಂವಿಧಾನ ರಚನೆಕಾರರ ಮೂಲ ಆಶಯಕ್ಕೆ ತಕ್ಕಂತೆ ಪ್ರಜಾಪ್ರಭುತ್ವ ಅರಳಲು ಸಾಧ್ಯವಾಗಲಿದೆ. ಕಟ್ಟಕಡೆಯ ಮನುಷ್ಯನಿಗೆ ಮೊತ್ತ ಮೊದಲ ಅವಕಾಶ ಎಂಬ ಪ್ರಜಾಪ್ರಭುತ್ವದ ಆಶಯ ಆಗ ನಿಜವಾದ ಅರ್ಥದಲ್ಲಿ ಸಾಕಾರಗೊಳ್ಳುತ್ತದೆ.
ಚುನಾವಣೆ ಆಯೋಗ ಮತದಾನದ ಪ್ರಮಾಣ ಹೆಚ್ಚಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಜಾಗೃತಿ ಮೂಡಿಸಿದೆ. ಅಲ್ಲದೆ ಜನ ನಿರ್ಭಯವಾಗಿ ಮತದಾನ ಮಾಡಲು ಬೇಕಾದ ಮುಕ್ತ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಡಿಜಿಟಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ಸಿಸಿ ಕ್ಯಾಮರಾ ಅಳವಡಿಕೆಯಿಂದ ಅಕ್ರಮಗಳ ಸಂಖ್ಯೆ ಇಳಿಮುಖಗೊಂಡಿದೆ. ಮತದಾನ ಆರಂಭವಾದ ಘಳಿಗೆಯಿಂದ ಕೊನೆಯವರೆಗೂ ಜನ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಜನರ ಗಮನವನ್ನು ತಮ್ಮತ್ತ ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳು ಪ್ರಯತ್ನ ಮಾಡಿವೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದನ್ನು ನೋಡಿದರೆ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ದೃಢಗೊಂಡಿರುವುದು ಸ್ಪಷ್ಟ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಚುನಾವಣೆ ಅವಧಿಯಲ್ಲಿ ಭಿತ್ತಪತ್ರಗಳು, ಬ್ಯಾನರ್‌ಗಳ ಹಾವಳಿ ನಿಂತಿರುವುದು ನೆಮ್ಮದಿಯ ಸಂಗತಿ.
ಬೆಂಗಳೂರು ನಗರ ಹಿಂದೆ ಪ್ಲಾಸ್ಟಿಕ್ ಕಸದಿಂದ ತುಂಬಿ ಹೋಗಿರುತ್ತಿತ್ತು. ಮನೆಯ ಗೋಡೆಗಳು ವಿಕಾರಗೊಳ್ಳುವುದು ತಪ್ಪಿದೆ. ಸ್ವಚ್ಛ ಚುನಾವಣೆ ನಡೆಸಲು ಸಾಧ್ಯ ಎಂಬುದನ್ನು ಇಂದಿನ ಮತದಾನ ತೋರಿಸಿಕೊಟ್ಟಿದೆ. ಇದೇ ಹಾದಿಯಲ್ಲಿ ಮುಂದೆಯೂ ಚುನಾವಣೆಗಳು ನಡೆಯುವುದು ಅಗತ್ಯ. ಕೆಲವು ಪ್ರಮುಖ ರಸ್ತೆಗಳನ್ನು ಹೊರತುಪಡಿಸಿದರೆ ಬೇರೆ ಕಡೆ ಧ್ವನಿವರ್ಧಕಗಳ ಆರ್ಭಟ ಇರಲಿಲ್ಲ. ಅಲ್ಲದೆ ಎಲ್ಲರೂ ಡಿಜಿಟಲ್ ಮಾಧ್ಯಮ ಬಳಸುವುದರಿಂದ ಬೀದಿ ಪ್ರಚಾರಕ್ಕೆ ಮಹತ್ವ ಕಡಿಮೆಯಾಗಿದೆ ಎಂಬುದು ಗಮನಾರ್ಹ. ಹಿಂದೆ ಚುನಾವಣೆ ಬಹಿರಂಗ ಭಾಷಣಗಳ ಮೂಲಕವೇ ಪಕ್ಷದ ನೀತಿ- ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕಿತ್ತು. ಈಗ ಸಾಮಾಜಿಕ ಜಾಲತಾಣಗಳು ಎಲ್ಲ ಕೆಲಸವನ್ನೂ ಮಾಡುತ್ತಿವೆ. ಮೊಬೈಲ್ ಹೊಂದಿರುವ ಪ್ರತಿಯೊಬ್ಬ ಮತದಾರನನ್ನು ತಲುಪುವುದು ಸುಲಭ ಎಂಬುದನ್ನು ಎಲ್ಲ ರಾಜಕೀಯ ಮುಖಂಡರು ಕಂಡುಕೊಂಡಿದ್ದಾರೆ. ಫೇಸ್ ಬುಕ್, ವಾಟ್ಸಾಪ್‌ಗಳೇ ಈಗ ಪ್ರಮುಖ ಪ್ರಚಾರದ ಮಾಧ್ಯಮಗಳಾಗಿವೆ. ಅದರ ಮೂಲಕವೇ ವಾದ-ಪ್ರತಿವಾದಗಳು ನಡೆದಿವೆ. ಇದು ಒಂದು ರೀತಿಯಲ್ಲಿ ಒಳ್ಳೆಯದು. ಜನಜೀವನ ಅಸ್ತವ್ಯಸ್ತಗೊಳ್ಳುವುದು ತಪ್ಪಿದೆ. ರೋಡ್‌ಶೋಗಳು ಮಾತ್ರ ಜನರ ಸಂಚಾರಕ್ಕೆ ಅಡ್ಡಿಯಾಗಿದ್ದು ನಿಜ. ಮುಂಬರುವ ದಿನಗಳಲ್ಲಿ ಇದು ಹೊಸ ರೂಪ ಪಡೆಯುವ ಸಾಧ್ಯತೆಗಳಿವೆ.
ಈ ಬಾರಿ ಒಂದೇ ದಿನ ಇಡೀ ರಾಜ್ಯದಲ್ಲಿ ಮತದಾನ ನಡೆದಿದೆ. ಇದೂ ಕೂಡ ಜನರಲ್ಲಿ ಒಮ್ಮತದ ಅಭಿಪ್ರಾಯ ಮೂಡಲು ಸಾಧ್ಯವಾಗಿದೆ. ಅಲ್ಲದೆ ಇಡೀ ರಾಜ್ಯದಲ್ಲಿ ಕಾನೂನು ಪರಿಪಾಲನೆಗೆ ಬೇಕಾದ ಪೊಲೀಸ್ ಬಲ ಸಾಕಷ್ಟು ಇದೆ ಎಂಬುದು ಸಂತಸದ ಸಂಗತಿ. ಸಾಮಾನ್ಯವಾಗಿ ಮತದಾನ ಶಾಂತಿಯುತವಾಗಿ ನಡೆಯುತ್ತದೆ. ಕೆಲವು ಕಡೆ ಸಣ್ಣಪುಟ್ಟ ಗಲಭೆಗಳು ನಡೆದಿರುವುದು ನಿಜವಾದರೂ ಜನರಿಗೆ ಮತದಾನದಲ್ಲಿರುವ ನಂಬಿಕೆ ಕಡಿಮೆಯಾಗಿಲ್ಲ. ಕೆಲವು ಕಡೆ ವ್ಯಕ್ತಿಗತ ಮಟ್ಟದಲ್ಲಿ ಘರ್ಷಣೆ ನಡೆದಿವೆ. ಇದು ತಾತ್ಕಾಲಿಕ.
ಮತದಾನ ಕಡ್ಡಾಯ ಮಾಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆದರೆ ಪ್ರಜಾಪ್ರಭುತ್ವ ಶಾಸನಗಳ ಮೂಲಕ ಉಳಿಯುವುದಲ್ಲ. ಜನರಿಗೆ ಪ್ರಜಾಪ್ರಭುತ್ವದ ಬಗ್ಗೆ ಆಳವಾದ ನಂಬಿಕೆ ಇರಬೇಕು. ಆಗ ಮಾತ್ರ ಮತದಾನಕ್ಕೆ ಮಹತ್ವ ಬರುತ್ತದೆ. ಮತದಾನ ಕಡ್ಡಾಯ ಮಾಡುವುದರಿಂದ ತೊಂದರೆಯೂ ಇದೆ. ಸ್ವಯಂಪ್ರೇರಣೆಯಿಂದ ನಾವು ಮತದಾನ ಮಾಡಬೇಕೆ ಹೊರತು ಬೇರೆಯವರ ಒತ್ತಡಕ್ಕೆ ಮಾಡುವುದಲ್ಲ. ಪ್ರಜಾಪ್ರಭುತ್ವ ನಾವು ಒಪ್ಪಿಕೊಂಡ ವ್ಯವಸ್ಥೆ. ಇದನ್ನು ಯಾರೂ ನಮ್ಮ ಮೇಲೆ ಹೇರಿಲ್ಲ. ಹೀಗಾಗಿ ಅದು ಸಮರ್ಪಕವಾಗಿ ನಡೆಯಬೇಕು ಎಂದರೆ ನಾವೇ ಆಸಕ್ತಿವಹಿಸಬೇಕು.