ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಹಾಜರು ಪಡಿಸಿದ್ದಾರೆ. ಆರೋಪಿಯನ್ನು ಎಸ್ಐಟಿ ವಶಕ್ಕೆ ನೀಡಬೇಕು ಎಂದು ಎಸ್ಐಟಿ ಪರ ವಕೀಲರು ಕೋರಿದ್ದಾರೆ. ಎಸ್ಐಟಿ ಪ್ರಜ್ವಲ್ ಅವರನ್ನು 15 ದಿನಗಳ ಕಾಲ ಕಸ್ಟಡಿಗೆ ಮನವಿ ಮಾಡಿತ್ತು. ಆದರೆ ಕೋರ್ಟ್ ಆರು ದಿನಗಳ ಕಾಲ ಕಸ್ಟಡಿಗೆ ನೀಡಿದೆ
ಪೆನ್ ಡ್ರೈವ್ ಪ್ರಕರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೂನ್ 6ರ ತನಕ 6 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರು 35 ದಿನಗಳ ಬಳಿಕ ದೇಶಕ್ಕೆ ಮರಳಿದ್ದರು. ಗುರುವಾರ ತಡರಾತ್ರಿ ಬೆಂಗಳೂರಿಗೆ ಮರಳುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿಯೇ ಎಸ್ ಐಟಿ ತಂಡವು ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿತ್ತು.