ಪ್ರಜ್ವಲ್ ಮತ್ತೆ ಕಣ್ಣಾಮುಚ್ಚಾಲೆ

Advertisement

ಬೆಂಗಳೂರು: ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳುವ ವಿಚಾರದಲ್ಲಿ ಮತ್ತೆ ಕಣ್ಣಾಮುಚ್ಚಾಲೆ ಆಟ ಮುಂದುವರಿಸಿದ್ದು ಮತ್ತೊಮ್ಮೆ ಟಿಕೆಟ್ ಬುಕ್ ಮಾಡಿದ್ದಾರೆ.
ಈಗಾಗಲೇ ಐದು ಬಾರಿ ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡಿ ಪ್ರಯಾಣ ರದ್ದುಗೊಳಿಸುವ ಮೂಲಕ ಕಣ್ಣಾಮುಚ್ಚಾಲೆ ಆಡುತ್ತಿರುವ ಪ್ರಜ್ವಲ್ ಶುಕ್ರವಾರ ರಾತ್ರಿಗೆ ಮತ್ತೊಮ್ಮೆ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದಾರೆಂಬ ಸುದ್ದಿ ಹೊರಬಿದ್ದಿದೆ.
ಎಸ್‌ಐಟಿ ಅಧಿಕಾರಿಗಳನ್ನು ಗಮನ ಬೇರೆಡೆಗೆ ಸೆಳೆಯಲೆಂದೇ ಪ್ರಜ್ವಲ್ ಈ ತರಹ ಪದೇ ಪದೇ ವಿಮಾನ ಟಿಕೆಟ್ ಬುಕ್ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದ್ದು ಟಿಕೆಟ್ ಅನ್ನು ಪ್ರಜ್ವಲ್ ಅವರೇ ಬುಕ್ ಮಾಡುತ್ತಿದ್ದಾರಾ? ಇಲ್ಲವೇ ಅವರ ಹೆಸರಿನಲ್ಲಿ ಬೇರೆ ಯಾರಾದರೂ ಗೊಂದಲ ಸೃಷ್ಟಿಸಲು ಪ್ರಜ್ವಲ್ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡುತ್ತಿದ್ದಾರಾ? ಎಂಬುದು ಪತ್ತೆಯಾಗದೇ ನಿಗೂಢವಾಗಿದೆ.
ಬಲ್ಲ ಮೂಲಗಳ ಪ್ರಕಾರ ಪ್ರಜ್ವಲ್ ಬೇಕಂತಲೇ ವಿಮಾನದ ಟಿಕೆಟ್ ಬುಕ್ ಮಾಡಿ ಆನಂತರ ಪ್ರಯಾಣ ರದ್ದು ಮಾಡುತ್ತಿದ್ದು ಸದ್ಯಕ್ಕೆ ಅವರು ಭಾರತಕ್ಕೆ ಮರಳುವುದು ಅನುಮಾನ ಎನ್ನಲಾಗಿದೆ.
ಜಾಮೀನು ರದ್ದತಿಗೆ ಮೇಲ್ಮನವಿ
ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಅವರಿಗೆ ಮಂಜೂರಾಗಿರುವ ಜಾಮೀನು ರದ್ದತಿ ಕೋರಿ ಮೇಲ್ಮನವಿ ಸಲ್ಲಿಸಲು ಎಸ್‌ಐಟಿ ಚಿಂತನೆ ನಡೆಸಿದೆ.
ಕಳೆದ ಸೋಮವಾರ ಶಾಸಕ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿದ್ದು ಈ ಆದೇಶವನ್ನು ಪ್ರಶ್ನಿಸಿ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಎಸ್‌ಐಟಿ ಪೊಲೀಸರು ಗಂಭೀರ ಚಿಂತನೆ ನಡೆಸಿದ್ದು ಈ ಕುರಿತು ಕಾನೂನು ತಜ್ಞರೊಡನೆ ಸಮಾಲೋಚನೆ ನಡೆಸುತ್ತಿದೆ.
ಬ್ಲೂ ಟಿಕ್ ಮಾರ್ಕ್ ಮಾಯ
ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿನ ಬ್ಲೂ ಟಿಕ್ ಮಾರ್ಕ್ ಮಾಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಕ್ಸ್ ಖಾತೆ ಹೊಂದಿರುವರ ಪೈಕಿ ವೆರಿಫೈಡ್ ಅಕೌಂಟ್ ಎಂಬ ಬಳಕೆದಾರರಿಗೆ ಕಂಪೆನಿಯು ಬ್ಲೂ ಟಿಕ್ ನೀಡುವುದು ವಾಡಿಕೆ. ಎಕ್ಸ್ಗಿಂತ ಮುಂಚೆ ಟ್ವಿಟರ್ ಖಾತೆ ಬಳಸುವಾಗ ಅಧಿಕೃತ ಹಾಗೂ ಗಣ್ಯ ವ್ಯಕ್ತಿಗಳಿಗೆ ಬ್ಲೂ ಟಿಕ್ ಮಾರ್ಕ್ ನೀಡಲಾಗುತ್ತಿತ್ತು. ಇದೇ ಮಾದರಿಯಲ್ಲಿ ಪ್ರಜ್ವಲ್ ರೇವಣ್ಣಗೂ ನೀಡಿತ್ತು. ಇದೀಗ ಕಾರಣ ನೀಡದೆ ಆ ಬ್ಲೂ ಮಾರ್ಕ್ ಅನ್ನು ರದ್ದು ಮಾಡಲಾಗಿದೆ.
ದೇಗುಲ ದರ್ಶನ
ಜೈಲಿನಿಂದ ಬಿಡುಗಡೆಯಾದ ಮೇಲೆ ಮಾಜಿ ಸಚಿವ ರೇವಣ್ಣ ಅವರ ದೇಗುಲ ಯಾತ್ರೆ ಮುಂದುವರಿದಿದ್ದು ಗುರುವಾರವೂ ಹಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.
ಗುರುವಾರ ಬೆಳಗ್ಗೆ ಜಯನಗರದ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರೇವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹನುಮಂತನಗರದಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ತೆರಳಿ ಶಿವಧ್ಯಾನ ಮಾಡಿದ್ದರಲ್ಲದೆ, ಆಂಜನೇಯಸ್ವಾಮಿ ದರ್ಶನವನ್ನೂ ಪಡೆದರು.
ಇನ್ನೊಂದೆಡೆ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಗೊಂಡರೂ ಭವಾನಿ ರೇವಣ್ಣ ಬೆಂಗಳೂರಿನತ್ತ ಸುಳಿದಿಲ್ಲ. ಹೊಳೆನರಸೀಪುರದ ನಿವಾಸದಲ್ಲೇ ಇರುವ ಭವಾನಿ ಅವರು ಪ್ರಕರಣದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆಂಬ ಮಾಹಿತಿ ಇದೆ.