ಪ್ರಜ್ವಲ್ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಬೊಮ್ಮಾಯಿ ಆಗ್ರಹ

Advertisement

ಹುಬ್ಬಳ್ಳಿ: ಕಾನೂನಾತ್ಮಕವಾಗಿ ಸಂಸದ ಪ್ರಜ್ವಲ ರೇವಣ್ಣ ಶರಣಾಗಿದ್ದಾನೆ. ಎಸ್‌ಐಟಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ ರೇವಣ್ಣ ಪ್ರಕರಣವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಪ್ರಕರಣ ಬೆಳಕಿಗೆ ಬಂದ ರೀತಿ, ಪೆನ್ ಡ್ರೈವ್ ಹಂಚಿಕೆ ಮಾಡಿದವರು ಯಾರು ಎಂಬುದು ತನಿಖೆಯಿಂದ ಹೊರ ಬೀಳಬೇಕಿದೆ. ಇಂತಹ ವಿಚಾರಗಳನ್ನು ಪ್ರಚಾರ ಮಾಡುವುದೂ ಅಪರಾಧ. ಆ ನಿಟ್ಟಿನಲ್ಲೂ ಎಸ್‌ಐಟಿ ತನಿಖೆ ಮಾಡಬೇಕು ಎಂದರು.
ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಯೋಗ್ಯವಾದದ್ದು. ಅಕ್ರಮ ಹಣ ವರ್ಗಾವಣೆಯಲ್ಲಿ ಬ್ಯಾಂಕ್‌ನ ಪಾತ್ರವೂ ಇದೆ. ಯಾವುದೇ ಬ್ಯಾಂಕ್‌ನಲ್ಲಿ ೧೦ ಕೋಟಿ ರೂ. ಗಿಂತ ದೊಡ್ಡ ಮೊತ್ತದ ಹಗರಣವಾದರೆ ಸಿಬಿಐಗೆ ಕೊಡುವುದು ವಾಡಿಕೆ. ಅಂತೆಯೇ ಚಂದ್ರಶೇಖರ ಪ್ರಕರಣದಲ್ಲೂ ಹತ್ತಾರು ಕೋಟಿ ರೂ. ಅಕ್ರಮವಾಗಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವುದು ಸೂಕ್ತ ಎಂದರು.
ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ಸರ್ಕಾರದ ನೈತಿಕತೆಯನ್ನು ಪ್ರಶ್ನಿಸುತ್ತಿದೆ. ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ನೈತಿಕತೆ ಬಗ್ಗೆ ಮಾತನಾಡಿದ ನಾಯಕರೇ ಈಗ ಸಿಎಂ, ಡಿಸಿಎಂ ಆಗಿದ್ದಾರೆ. ಇವತ್ತು ಅವರ ನೈತಿಕತೆ ಮತ್ತು ಸರ್ಕಾರದ ಪ್ರಾಮಾಣಿಕತೆಯ ಪ್ರಶ್ನೆಗೆ ಅವರೇನು ಉತ್ತರಿಸುತ್ತಾರೆ. ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುತ್ತಾರೋ ಅಥವಾ ಮಂತ್ರಿಯನ್ನು ಉಳಿಸಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಣ ಎಂದು ವ್ಯಂಗ್ಯವಾಡಿದರು.