ಯಾದಗಿರಿ: ಸಂಸದ ಪ್ರಜ್ವಲ್ ರೇವಣ್ಣ ಇರುವ ಅಶ್ಲೀಲ ವೀಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರಿಗೆ ಪತ್ರ ಬರೆದಿರುವ ಅವರು, ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ಅವರಿರುವ ಅಶ್ಲೀಲ ವೀಡಿಯೋ ತುಣುಕುಗಳು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ, ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. ಈ ಪ್ರಕರಣವನ್ನು ಈಗಾಗಲೇ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಒಪ್ಪಿಸಿದ್ದು, ತಕ್ಷಣ ಪ್ರಜ್ವಲ್ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಬೇಕು ಎಂದಿದ್ದಾರೆ.
ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿರುವುದು ಪಕ್ಷಕ್ಕೆ ಇರುಸು ಮುರುಸು ಉಂಟಾಗಿದೆ. ಹಾಸನ ಹೆಣ್ಣು ಮಕ್ಕಳ ಜೊತೆ ಅಶ್ಲೀಲ ವಿಡಿಯೋ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರ ಹೆಸರು ತಳುಕು ಹಾಕುತ್ತಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಹೊಂದಿದ ಜೆಡಿಎಸ್ ಪಕ್ಷಕ್ಕೆ ಇದು ಆಘಾತ ಉಂಟು ಮಾಡಿದೆ. ಅಲ್ಲದೇ ನನಗೂ ವೈಯಕ್ತಿಕವಾಗಿ ಬೇಸರ ತಂದಿದೆ ಎಂದಿದ್ದಾರೆ.
ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಹಲವು ದಶಕಗಳಿಂದ ತಾವು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜಕೀಯ ರಂಗದಲ್ಲಿ ದುಡಿದಿದ್ದೀರಿ. ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡಿರುವ ತಾವು ಕೂಡಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದಿಂದ ಆಂತರಿಕ ತನಿಖೆ ತಂಡವನ್ನು ರಚಿಸಿ ಪಕ್ಷಕ್ಕೆ ಆಗಬಹುದಾಗ ಮುಜುಗರವನ್ನು ತಪ್ಪಿಸಲು ಹಾಗೂ ಎರಡನೇ ಹಂತದ ಚುನಾವಣೆ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಅನುಕೂಲವಾಗಲಿದೆ ಜೊತೆಗೆ ಸತ್ಯಾಸತ್ಯತೆಯನ್ನು ನಾಡಿನ ಜನತೆಗೆ ತಿಳಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.