ಪೌರತ್ವ ಶಾಸನದ ಪೂರ್ವಾಪರ

Advertisement

ಪೌರತ್ವ ಎಂಬುದು ದೇಶದ ನಾಗರಿಕರಿಗೆ ಹೆಗ್ಗುರುತು. ಇಂತಹ ಹೆಗ್ಗುರುತಿಲ್ಲದೆ ಯಾರೊಬ್ಬರೂ ದೇಶದ ಪ್ರಜೆ ಎನಿಸಿಕೊಳ್ಳುವುದಿಲ್ಲ. ಇದರ ಪರಿಣಾಮವಾಗಿ ಯಾವುದೇ ರೀತಿಯ ಹಕ್ಕು ಬಾಧ್ಯತೆಗಳು ಇಂತಹ ಶ್ರೇಣಿಯವರಿಗೆ ಲಭಿಸುವುದಿಲ್ಲ. ಉಪ ಖಂಡ ಎಂದೇ ಗುರುತಿಸಲಾಗುವ ಭಾರತ ದೇಶದ ದೊಡ್ಡ ಸಮಸ್ಯೆ ಎಂದರೆ ನೆರೆ ಹೊರೆ ರಾಜ್ಯಗಳಿಂದ ನುಸುಳಿ ಬಂದಿರುವವರು ದೇಶದಲ್ಲಿ ವಿವಿಧ ರೀತಿಯ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿರುವುದು. ಬಾಂಗ್ಲಾ, ಮಯನ್ಮಾರ್, ಪಾಕಿಸ್ತಾನ, ಆಫ್ಘಾನಿಸ್ತಾನ ಮೊದಲಾದ ದೇಶಗಳ ಗಡಿಯನ್ನು ದಾಟಿ ಭಾರತದ ಒಳಗೆ ಪ್ರವೇಶಿಸಿ ಅಸಲಿ ಪ್ರಜೆಗಳಿಗೆ ಕಂಟಕವಾಗುವಂತೆ ನಡೆದುಕೊಳ್ಳುತ್ತಿರುವುದು. ಅಸ್ಸಾಂ, ಮಣಿಪುರ, ಮೇಘಾಲಯ ಮೊದಲಾದ ಈಶಾನ್ಯ ರಾಜ್ಯಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿಯೂ ಕೂಡಾ ಅಕ್ರಮ ಪ್ರಜೆಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದು ಸ್ಥಳೀಯರಿಗೆ ಅನ್ಯಾಯವಾಗುವಂತೆ ಮಾಡುತ್ತಿದ್ದ ಪ್ರಕರಣ ರಾಜಕೀಯವಾಗಿ ದೊಡ್ಡ ವಿವಾದವೇ ಜರುಗಿ ಹಲವಾರು ಶಾಸನಸಭೆಗಳಲ್ಲಿ ಚರ್ಚೆಯಾಗಿರುವ ಸಂಗತಿಯನ್ನು ಮರೆಯುವಂತಿಲ್ಲ.
ಇಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಭಾರತ ಸರ್ಕಾರ ಹೊಸ ಪೌರತ್ವ ಕಾಯ್ದೆಯನ್ನು ಸುಮಾರು ೪ ವರ್ಷಗಳ ಹಿಂದೆ ರೂಪಿಸಿ ಸಂಸತ್ತಿನ ಒಪ್ಪಿಗೆಯನ್ನು ಪಡೆದು ಅದರ ಸಾಧಕ ಬಾಧಕಗಳ ಪರಿಶೀಲನೆಗೆ ಮುಂದಾಗಿತ್ತು. ಲೋಕಸಭಾ ಚುನಾವಣೆ ನೆರಳು ಕವಿಯುತ್ತಿರುವ ಸಂದರ್ಭದಲ್ಲಿ ಈ ಶಾಸನವನ್ನು ಜಾರಿಗೊಳಿಸುವ ಅಧಿಸೂಚನೆಯನ್ನು ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದ್ದರೂ ಸಂಸತ್ತಿನ ಅನುಮೋದನೆ ಪಡೆದಿರುವ ಶಾಸನಕ್ಕೆ ಅಡ್ಡಗಾಲು ಹಾಕುವುದು ಸರಿಯಲ್ಲ ಎಂಬ ಭಾವನೆಯನ್ನು ನಿರಾಕರಿಸುವುದು ಕಷ್ಟವೇ.
ಈ ಶಾಸನದ ಪ್ರಕಾರ ಪಾಕಿಸ್ತಾನ, ಬಾಂಗ್ಲಾ ಹಾಗೂ ಆಫ್ಘಾನಿಸ್ತಾನದಿಂದ ಭಾರತಕ್ಕೆ ೨೦೧೪ ಡಿಸೆಂಬರ್ ೩೧ರೊಳಗೆ ಬಂದವರಿಗೆ ಅಕ್ರಮ ವಲಸೆಗಾರರು ಎಂದು ಪರಿಗಣಿಸಲಾಗುವುದಿಲ್ಲ. ಅವರನ್ನು ಭಾರತೀಯ ನಾಗರಿಕರು ಎಂದು ಪರಿಗಣಿಸುವ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಕನಿಷ್ಠ ೫ ವರ್ಷಗಳ ಕಾಲ ಭಾರತದಲ್ಲಿ ಇದ್ದರು ಎಂಬುದಕ್ಕೆ ದಾಖಲೆಗಳನ್ನು ಒದಗಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಮೊದಲಿನ ಶಾಸನದಲ್ಲಿ ಈ ಷರತ್ತು ೧೧ ವರ್ಷಗಳು ಎಂದಿತ್ತು. ಅಷ್ಟರ ಮಟ್ಟಿಗೆ ಅಕ್ರಮವಾಗಿ ನೆಲೆಸಿದ್ದ ವಲಸೆಗಾರರಿಗೆ ಅನುಕೂಲವಾಗಿದೆ. ಸರ್ವೇಸಾಮಾನ್ಯವಾಗಿ ಈ ಶಾಸನದಿಂದ ಅನುಕೂಲವಾಗುವುದು ಹಿಂದೂಗಳು, ಪಾರ್ಸಿ, ಸಿಖ್, ಕ್ರೈಸ್ತ ಧರ್ಮೀಯರಿಗೆ ಸೀಮಿತ.
ಇಸ್ಲಾಂ ಧರ್ಮದವರಿಗೆ ಈ ಸೌಲಭ್ಯ ಇಲ್ಲ. ಈ ಶಾಸನಕ್ಕೆ ಪಶ್ಚಿಮ ಬಂಗಾಳ, ಅಸ್ಸಾಂ, ಕಾಶ್ಮೀರ ಹಾಗೂ ಇನ್ನಿತರ ಗಡಿ ಭಾಗದ ರಾಜ್ಯಗಳಲ್ಲಿ ವಿರೋಧ ಕಂಡುಬರಲು ಮುಖ್ಯ ಕಾರಣ ಆ ಪ್ರದೇಶಗಳಲ್ಲಿ ಇಸ್ಲಾಂ ಧರ್ಮದವರ ಜನಸಂಖ್ಯೆ ಹಾಗೂ ರಾಜಕೀಯ ಬೆಂಬಲ. ಭಾರತ ಸರ್ಕಾರ ಈ ಶಾಸನವನ್ನು ರೂಪಿಸಿದಾಗಲೇ ಸಾಕಷ್ಟು ಪ್ರಮಾಣದಲ್ಲಿ ಹೋರಾಟವೂ ನಡೆದಿತ್ತು. ಆದರೆ, ಶಾಸನದ ಸದಾಶಯವನ್ನು ಸರ್ಕಾರ ನಾನಾ ವೇದಿಕೆಗಳ ಮೂಲಕ ಬಿಡಿಸಿ ಹೇಳಿದ ಮೇಲೆ ವಿವಾದದ ಕಾವು ಇಳಿದರೂ ಅತೃಪ್ತಿ ಹಾಗೆಯೇ ಉಳಿದಿತ್ತು. ಚುನಾವಣೆಯ ನೆರಳು ಕವಿದಿರುವ ಸಂದರ್ಭದಲ್ಲಿ ಈ ಶಾಸನವನ್ನು ಜಾರಿಗೊಳಿಸಿರುವುದು ಈಗ ಇನ್ನೊಂದು ರೀತಿಯ ವಿವಾದಕ್ಕೆ ಕಾರಣವಾಗಿದೆ. ಆದರೆ, ಭಾರತೀಯ ಜನತಾ ಪಕ್ಷ ೨೦೧೯ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಈ ಭರವಸೆಯನ್ನು ದೇಶಕ್ಕೆ ನೀಡಿತ್ತು. ಕೊಟ್ಟ ಮಾತನ್ನು ಅವಧಿಯ ಒಳಗೆ ಈಡೇರಿಸಿರುವುದನ್ನು ಯಾರೊಬ್ಬರೂ ಕೂಡಾ ಆಕ್ಷೇಪಿಸುವುದು ಸಾಧ್ಯವಿಲ್ಲ. ರಾಜಕೀಯ ವಿರೋಧಗಳು ಬೇರೆ ವಾಸ್ತವ ಸ್ಥಿತಿಯೇ ಬೇರೆ.
ಅಕ್ರಮ ವಲಸೆಗಾರರಿಂದ ಈಶಾನ್ಯ ಪ್ರದೇಶದಲ್ಲಿ ತಲೆದೋರುತ್ತಿರುವ ಗಲಭೆಗಳು ದೇಶಕ್ಕೆ ದೊಡ್ಡ ಗಂಡಾಂತರವನ್ನೇ ಸೃಷ್ಟಿಸಿದೆ. ಭಾರತದಲ್ಲಿ ಗಂಡಾಂತರವನ್ನು ಸೃಷ್ಟಿಸುವುದನ್ನೇ ದೊಡ್ಡ ಸಾಧನೆ ಎಂದು ನಂಬಿರುವ ಕೆಲ ನೆರೆ ರಾಷ್ಟ್ರಗಳು ಇಂತಹ ಅಕ್ರಮ ವಲಸೆಗಾರರಿಗೆ ಕುಮ್ಮಕ್ಕು ಕೊಡುವ ಮೂಲಕ ಭಾರತದಲ್ಲಿ ಅಶಾಂತಿ ನೆಲೆಸುವಂತೆ ಮಾಡುತ್ತಿರುವ ಕಿತಾಪತಿಯ ಹಿಂದಿರುವುದು ಜಾಗತಿಕ ರಾಜಕಾರಣದ ಪಿತೂರಿ. ಇಂತಹ ಸನ್ನಾಹವನ್ನು ಬೇರಿನಿಂದಲೇ ಕಿತ್ತೆಸೆಯಲು ಶಾಸನದ ಮಾರ್ಗವನ್ನು ಅನುಸರಿಸಿರುವ ಭಾರತ ಸರ್ಕಾರದ ಕ್ರಮ ನಿಜಕ್ಕೂ ಸಮರ್ಥನಿಯವೇನೋ ಹೌದು. ಆದರೆ, ಈ ಶಾಸನದ ಜಾರಿಗೆ ಸಂಬಂಧಿಸಿದಂತೆ ಕೆಲ ರಾಜ್ಯಗಳಲ್ಲಿ ವ್ಯಕ್ತವಾಗಿರುವ ಟೀಕೆ ಟಿಪ್ಪಣಿಗಳ ಹಿಂದಿರುವ ಸದಾಶಯವನ್ನು ಗುರುತಿಸಿ ಅವುಗಳನ್ನು ಅಳವಡಿಸಿಕೊಳ್ಳುವುದು ಆಗಲೇಬೇಕಾದ ಜನಪರ ಕ್ರಮವೂ ಹೌದು.