ಬಳ್ಳಾರಿ: ಬಿಜೆಪಿ ಚುನಾವಣೆ ಪ್ರಕ್ರಿಯೆ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ ಹಾಗೂ ಪುಲ್ವಾಮಾ ದಾಳಿಗೆ ನೇರ ಪ್ರಧಾನಿ ಕಾರಣ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 5 ಕೋಟಿ 24 ಲಕ್ಷ ಮತದಾರರು ಇದ್ದಾರೆ. ಇದರಲ್ಲಿ 5 ಲಕ್ಷ ಅಂಗವಿಕಲರು, 80 ವಯಸ್ಸು ಮೀರಿದ ಹಿರಿಯ ಮತದಾರರು 12 ಲಕ್ಷಕ್ಕೂ ಅಧಿಕ ಇದ್ದಾರೆ. ಎರಡೂ ವಿಭಾಗ ಸೇರಿ 17 ಲಕ್ಷ ಮತದಾರರು ಈ ವಿಭಾಗದಲ್ಲಿ ಇದ್ದಾರೆ. ಇನ್ನು ಮಿಲಿಟರಿ, ಮತ ಕೇಂದ್ರದಲ್ಲಿ ಕೆಲಸ ಮಾಡೋರು, ಜೈಲಿನಲ್ಲಿ ಇರುವವರು ಸೇರಿ 21 ಲಕ್ಷ ಮತದಾರರು ಇದ್ದಾರೆ. ಈ ಮತ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ ಒಂದು ಕ್ಷೇತ್ರದಲ್ಲಿ ಸುಮಾರು 8 ಸಾವಿರ ಪೋಸ್ಟಲ್ ಮತದಾರರು ಬರುತ್ತಾರೆ ಎಂದರು.
ಇವರಿಗೆಲ್ಲ ಇದೆ ತಿಂಗಳ 17ರ ಒಳಗೆ 12 ಡಿ ಫಾರಂ ವಿತರಣೆ ಮಾಡಬೇಕಿತ್ತು. ಇದುವರೆಗೆ ರಾಜ್ಯದ ಈ ಮತದಾರರಿಗೆ ಈವರೆಗೆ 12ಡಿ ಫಾರಂ ವಿತರಣೆ ಆಗಿಲ್ಲ. ಉತ್ತರ ಪ್ರದೇಶ, ಗುಜರಾತ್ ನಲ್ಲಿ ಪೋಸ್ಟಲ್ ಬ್ಯಾಲೆಟ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಇದೆ ಎಂದು ಅವರು ಹೇಳಿದರು.
ನಾನು ಈ ಕುರಿತು ರಾಜ್ಯ ಚುನಾವಣಾ ಆಯೋಗ ಮತ್ತು ಬಳ್ಳಾರಿ ಜಿಲ್ಲಾಧಿಕಾರಿ ಬಳಿ ಮಾಹಿತಿ ಕೇಳಿದರೆ ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ಬಿಜೆಪಿ ಈ ಮತಗಳ ದುರ್ಬಳಕೆ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಮತದಾರರು ಈ ಕುರಿತು ಜಾಗರೂಕರಾಗಿ ಇರಬೇಕು. ಈ ರೀತಿಯ ಬೆಳವಣಿಗೆ ತಡೆಯಲು ಸೂಕ್ತ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ಜಮ್ಮು ಕಾಶ್ಮೀರ ರಾಜ್ಯಪಾಲರಾಗಿದ್ದ ಸತ್ಯಪಾಲ್ ಹೇಳುವ ಹಾಗೆ ಪುಲ್ವಾಮ ದಾಳಿ ಆದಾಗ ಸೈನಿಕರ ಸ್ಥಳಾಂತರ ಮಾಡುವಾಗ ಲೋಪ ಎಸಗಲಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ನಿಜ ಆಗಿದ್ದಾರೆ ದೇಶ ಕಾಯುವ 40 ಜನ ಸೈನಿಕರ ಸಾವಿಗೆ ನಮ್ಮ ಪ್ರಧಾನಿ ಮೋದಿ ನೇರ ಕಾರಣ. ಇದು ಸೈನಿಕರ ಕೊಲೆ ಮಾಡಿದ ಹಾಗೆ ಎಂದು ಅವರು ಕಿಡಿಕಾರಿದರು. ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ, ರಘು, ರವಿ, ಲೋಕೇಶ್, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಇದ್ದರು.