ಪೋಕ್ಸೋ ಪ್ರಕರಣ: ಮುರುಘಾಶರಣರ ಪ್ರಕರಣಕ್ಕೆ ಹೊಸ ತಿರುವು

Advertisement

ಚಿತ್ರದುರ್ಗ: ಮುರುಘಾಶರಣರ ಮೇಲೆ ದಾಖಲಿಸಲಾಗಿರುವ ಪೋಕ್ಸೋ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಸಂತ್ರಸ್ತೆಯೊಬ್ಬರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವ ಚಿಕ್ಕಪ್ಪನ ವಿರುದ್ದವೇ ದೂರು ನೀಡಿ ರಕ್ಷಣೆ ಕೋರಲಾಗಿದ್ದು ಇದರಿಂದ ಮುರುಘಾಶರಣರ ಮೇಲಿನ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಬೆಳವಣಿಗೆಯಿಂದ ಮುರುಘಾ ಶರಣರು ಸಂಕಷ್ಟದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳಿವೆ.
ಮುರುಘಾಶರಣರ ಮೇಲೆ ಪೋಕ್ಸೋ ದೂರು ದಾಖಲಿಸಿದ್ದ ಬಾಲಕಿಯೊಬ್ಬಳು ೨೦೨೪ ರ ಮೇ ೨೨ ರಂದು ಚಿತ್ರದುರ್ಗ ತಾಲ್ಲೂಕಿನಿಂದ ಕಾಣೆಯಾಗಿದ್ದರು. ಈ ಬಗ್ಗೆ ಮಹಿಳಾ ಠಾಣೆಗೆ ಬಾಲಕಿಯ ಚಿಕ್ಕಪ್ಪ ದೂರು ನೀಡಿದ್ದರು. ಬಾಲಕಿ ನಾಪತ್ತೆ ಪ್ರಕರಣ ಕೂಡ ದಾಖಲಾಯಿತು. ಬಾಲಕಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದಾಗ ಬಾಲಕಿ ಮತ್ತು ಈಕೆಯ ಸಹೋದರ ಇಬ್ಬರು ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಪತ್ತೆಯಾದರು. ಬಾಲಕಿ ಚಿಕ್ಕಪ್ಪನ ಮನೆಗೆ ಹೋಗಲು ಒಪ್ಪಲಿಲ್ಲ.
ಮೈಸೂರಿನ ಒಡನಾಡಿ ಸಂಸ್ಥೆಗೆ ಈ ಬಾಲಕಿ ಮುರುಘಾಶರಣರ ಮೇಲಿನ ಪೋಕ್ಸೋ ಪ್ರಕರಣವನ್ನು ವಾಪಾಸ್ ತೆಗೆದುಕೊಳ್ಳುವಂತೆ ತನ್ನ ಚಿಕ್ಕಪ್ಪ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಅವರ ಜೊತೆ ಇರಲು ಸಾಧ್ಯವಿಲ್ಲ. ಇದರ ಜೊತೆಗೆ ನನ್ನ ಸಹೋದರನಿಗೂ ಹಿಂಸೆ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನು ಆಧರಿಸಿ ಒಡನಾಡಿ ಸಂಸ್ಥೆ ಸ್ಟಾಲಿನ್, ಮೈಸೂರು ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿ ಮಕ್ಕಳಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಮೈಸೂರು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಾಲಕಿ ಮತ್ತು ಸಹೋದರನನ್ನು ಹಾಜರುಪಡಿಸಿದರು. ಮಕ್ಕಳ ಕಲ್ಯಾಣ ಸಮಿತಿ ಇರ್ವರಿಗೂ ರಕ್ಷಣೆ ನೀಡಬೇಕು ಎಂದು ಆದೇಶಿಸಿತು. ಅದರಂತೆ ಚಿತ್ರದುರ್ಗ ಮಕ್ಕಳ ರಕ್ಷಣಾ ಘಟಕಕ್ಕೆ ಮಕ್ಕಳನ್ನು ಕಳುಹಿಸಿಕೊಟ್ಟಿದ್ದಾರೆ.
ಬಾಲಕಿಯನ್ನು ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಮುರುಘಾ ಶರಣರ ಮೇಲೆ ತಾನು ದಾಖಲಿಸಿರುವ ಪೋಕ್ಸೋ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಒತ್ತಡ ಹಾಕಿದರು. ಇದಕ್ಕೆ ಒಪ್ಪದಿದ್ದಾಗ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದರು ಎಂದು ಬಾಲಕಿ ದೂರಿದರು.
ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿಯರ ಬಾಲಮಂದಿರದಲ್ಲಿ ಬಾಲಕಿಯನ್ನು ಮತ್ತು ಬಾಲಕನನ್ನು ಬಾಲಕರ ಬಾಲಮಂದಿರದಲ್ಲಿ ಇರಿಸುವಂತೆ ಹಾಗೂ ಅಲ್ಲಿಯೇ ಶಿಕ್ಷಣ ಕೊಡಿಸುವಂತೆ ಆದೇಶಿಸಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸವಿತಾ ಅವರು ತಿಳಿಸಿದ್ದಾರೆ.
ಹಿನ್ನೆಲೆ: ಕಳೆದ ಒಂದೂವರೆ ವರ್ಷದ ಹಿಂದೆ ಬಾಲಕಿ ಮುರುಘಾಶರಣರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಒಡನಾಡಿ ಸಂಸ್ಥೆ ಮೂಲಕ ಮೈಸೂರಿನ ನಜರ್‌ಬಾದ್ ಠಾಣೆಗೆ ದೂರು ನೀಡಿದ್ದರು. ಇದನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ತದನಂತರ ಮುರುಘಾ ಶರಣರನ್ನು ಬಂಧಿಸಲಾಯಿತು.
ಸಂತ್ರಸ್ತೆಯರಿಂದ ನ್ಯಾಯಾಧೀಶರು ೧೬೪ ಹೇಳಿಕೆ ಪಡೆದಿದ್ದರು. ಇದಾದ ಮೇಲೆ ಪೋಷಕರಿಗೆ ಬಾಲಕಿಯರನ್ನು ಒಪ್ಪಿಸಲಾಗಿತ್ತು. ಇಷ್ಟು ತಿಂಗಳಾದ ಮೇಲೆ ಬಾಲಕಿ ಇದೀಗ ಚಿಕ್ಕಪ್ಪ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದಾಗಿ ದೂರು ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸುಪ್ರೀಂಕೋರ್ಟ್ ನಾಲ್ಕು ತಿಂಗಳಿನಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡುವಂತೆ ಸೂಚನೆ ನೀಡಿದೆ. ಇದೀಗ ಪ್ರಕರಣದ ವಿಚಾರಣೆ ಶುರುವಾಗಿದ್ದು ಮುರುಘಾ ಶರಣರ ಮೇಲಿನ ದೋಷಾರೋಪಣ ಹೊರಿಸಲು ದಾಖಲೆಗಳು ಹೈಕೋರ್ಟ್ನಿಂದ ತರಿಸುವ ಕಾರ್ಯ ನಡೆಯುತ್ತಿರುವಾಗಲೇ ಬಾಲಕಿ ನೀಡಿರುವ ದೂರು ಪ್ರಕರಣದ ಮುಂದೆ ಏನಾಗುತ್ತದೆ ಎಂಬ ಕುತೂಹಲ ಕೆರಳಿಸಿದೆ.