ಪೊಲೀಸ್ ಸಿಬ್ಬಂದಿಯ ಮೇಲೆಯೇ ನೈತಿಕ ಪೊಲೀಸ್ ಗಿರಿ ಆರೋಪ ಇಬ್ಬರ ಬಂಧನ

Advertisement

ಮಂಗಳೂರು: ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬಂಟ್ವಾಳ ಬಿ.ಸಿ.ರೋಡ್ ಬಳಿ ಕಳೆದ ರಾತ್ರಿ ನಡೆದಿದೆ.
’ಮುಸ್ಲಿಂ-ಹಿಂದೂ ಹುಡುಗಿಯರನ್ನು ಎಲ್ಲಿ ಕರೆದು ಕೊಂಡು ಹೋಗಿದ್ದೀಯಾ? ಎಂದು ಹಲ್ಲೆ ಮಾಡಿದ ಆರೋಪ ವ್ಯಕ್ತವಾಗಿದೆ. ಈ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನಿಸಿ ಕರ್ತವ್ಯಕ್ಕೂ ಅಡ್ಡಿಪಡಿಸಿದ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧಿಸಿ ಇಬ್ಬರು ಆರೋಪಿಗಳಾದ ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಎಂಬವರನ್ನು ಬಂಧಿಸಲಾಗಿದೆ.
ಬಂಟ್ವಾಳ ಡಿ.ವೈ.ಎಸ್.ಪಿ. ಕಚೇರಿಯ ಸಿಬ್ಬಂದಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಎನ್.ಐ.ಎ.ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ್ ಕುಟುಂಬದ ಮೇಲೆ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ದೂರು ನೀಡಲಾಗಿದೆ.
ಕರ್ತವ್ಯದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿರುವ ಪೋಲೀಸ್ ವಸತಿ ಗೃಹದಲ್ಲಿ ತಂಗಿರುವ ಕುಮಾರ್ ಜುಲೈ ೨೭ ರಂದು ಪತ್ನಿ ಹಾಗೂ ಪತ್ನಿಯ ಅಕ್ಕನ ಜೊತೆ ವಸತಿ ಗೃಹದಲ್ಲಿದ್ದರು. ರಾತ್ರಿ ವೇಳೆ ಊಟಕ್ಕೆ ಬಿ.ಸಿ.ರೋಡಿನ ಹೋಟೆಲೊಂದಕ್ಕೆ ಹೋಗಿ ಮರಳಿದ್ದರು. ಈ ವೇಳೆ ಇಬ್ಬರು ಯುವಕರು ಇವರ ಕುಟುಂಬವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಅಲ್ಲದೇ ಇಬ್ಬರು ಆರೋಪಿಗಳು ಅವ್ಯಾಚ್ಯವಾಗಿ ಬೈದಿದ್ದಾರೆ.
ನೀನು ಮುಸ್ಲಿಂ ಹಿಂದೂ ಹುಡುಗಿಯರನ್ನು ಎಲ್ಲಿ ಕರೆದು ಕೊಂಡು ಹೋಗಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಪೋಲೀಸ್ ಎಂದು ಗೋಗೆರದರೂ ಲೆಕ್ಕಿಸಿದೆ ಹಲ್ಲೆಗೂ ಮುಂದಾಗಿದ್ದಾರೆ. ಪೊಲೀಸ್ ಸಿಬ್ಬಂದಿ ಪತ್ನಿಯ ಚಿತ್ರೀಕರಣ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾಗಿ ಆರೋಪಿಸಲಾಗಿದೆ. ಸದ್ಯ ಆರೋಪಿಗಳು ಪೋಲೀಸರ ವಶದಲ್ಲಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳ ವಿರುದ್ದ ೩೫೪(ಆ), ೩೪೧, ೩೫೩, ೩೫೪(ಂ), ೫೦೪ ಜೊತೆ ೩೪ ಐಪಿಸಿಯಡಿ ಎಫ್‌ಐಆರ್ ದಾಖಲಾಗಿದೆ.