ಹುಬ್ಬಳ್ಳಿ: ನಾವು ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕೆ ಅನವಶ್ಯಕ ತೊಂದರೆ ನೀಡುತ್ತಿದ್ದಾರೆ. ಮನಸೋ ಇಚ್ಛೆ ಥಳಿಸಿದ್ದಾರೆ. ನಮಗೆ ರಕ್ಷಣೆ ಕೊಡಿ…
ಹೀಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಯಲ್ಲಿ ಅಳಲು ತೋಡಿಕೊಂಡಿದ್ದು, ಧಾರವಾಡದ ಗೊಲ್ಲರ ಓಣಿ ನಿವಾಸಿ ರವಿ ಗೊಲ್ಲರ. ಆತನ ಕುಟುಂಬದವರು ಕಣ್ಣೀರು ಹಾಕಿದರು.
ದೂರು ಆಲಿಸಿದ ಸಚಿವ ಜೋಶಿ ಧಾರವಾಡ ಶಹರ ಠಾಣೆಯ ಇನ್‌ಸ್ಪೆಪೆಕ್ಟರ್ ಕಾಡದೇವರಮಠರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು.
ರವಿ ಗೊಲ್ಲರ ಎಂಬುವವರು ಬಿಜೆಪಿ ಕಾರ್ಯಕರ್ತನಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂತ ತಕ್ಷಣ ಅಲ್ಲಿನ ಕೆಲವರ ಮಾತು ಕೇಳಿಕೊಂಡು ರವಿ ಮೇಲೆ ಸುಖಾ ಸುಮ್ಮನೆ ಠಾಣೆಗೆ ಕರೆಸಿ, ಇಲ್ಲ ಸಲ್ಲದ ಆರೋಪ ಹೊರಿಸಿ ಮನಬಂದಂತೆ ಥಳಿಸಿದ್ದೀರಿ ಎಂದು ರೇಗಿದರು.
ಯಾವ ಹಿನ್ನೆಲೆಯಲ್ಲಿ ಥಳಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು. ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಎಚ್ಚರಿಸಿದರು.
ನಮ್ಮ ಬಳಿ ಅಧಿಕಾರ ಇದ್ದಾಗ ಒಂದು ರೀತಿ ಇರ್ತೀರಿ. ಈಗ ಮತ್ತೊಂದು ರೀತಿ ಇರ್ತೀರಾ? ಎಂದ ಸಚಿವರು, ಪೊಲೀಸ್ ಠಾಣೆಯೊಳಗೆ ಹೊಡೆಯೋದಕ್ಕೆ ನಿಮಗೇನು ಹಕ್ಕಿದೆ? ಕಾನೂನು ಪ್ರಕಾರ ಠಾಣೆಯಲ್ಲಿ ಹೊಡೆಯೋದಕ್ಕೆ ಅಧಿಕಾರ ಇದೆಯೇ? ಎಂದು ಪೊಲೀಸ್ ಅಧಿಕಾರಿಯನ್ನು ಜೋಶಿ ತರಾಟೆಗೆ ತೆಗೆದುಕೊಂಡರು.
ತಪ್ಪು ಮಾಡಿದ್ದರೆ ಕಾನೂನು ಕ್ರಮ ಜರುಗಿಸಿ. ಆದರೆ, ಅನಾವಶ್ಯಕವಾಗಿ ತೊಂದರೆ ನೀಡಬೇಡಿ. ಇಂತಹ ಕೃತ್ಯ ಸಹಿಸಲ್ಲ. ನಾನು ಕೇಂದ್ರ ಸಚಿವನಾದರೂ ಸರಿ ಠಾಣೆ ಎದುರು ಧರಣಿ ನಡೆಸುತ್ತೇನೆ. ಎಂದು ಖಡಕ್ ಎಚ್ಚರಿಕೆ ನೀಡಿದರು.
ಎಂಎಲ್‌ಸಿ ಮಾಡ್ಸಿ, ಪ್ರಕರಣ ದಾಖಲಿಸಿ: ನಿಮಗೆ ಎಲ್ಲೆಲ್ಲಿ ಹೊಡೆದಿದ್ದಾರೊ ವೈದ್ಯರಿಗೆ ತೋರಿಸಿ ಎಂಎಲ್‌ಸಿ ( ಮೆಡಿಕೊ ಲೀಗಲ್ ಕೇಸ್) ಮಾಡಿಸಿ. ನಾನು ವಕೀಲರಿಗೆ ಹೇಳುತ್ತೇನೆ ಪ್ರಕರಣ ದಾಖಲು ಮಾಡಿ ಹೋರಾಟ ಮಾಡೋಣ. ಏನಾಗುತ್ತೋ ನೋಡೋಣ ಎಂದು ಅಳಲು ತೋಡಿಕೊಂಡ ರವಿಗೆ ಸಚಿವ ಜೋಶಿ ಸೂಚಿಸಿದರು.