ಬಾಗಲಕೋಟೆ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸೆಗಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಶೀಘ್ರಗತಿ ನ್ಯಾಯಾಲಯ ಏಕಕಾಲಕ್ಕೆ ೨೦ ವರ್ಷಗಳ ಎರಡು ಕಠಿಣ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.
ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸೈಯದ್ ಬಳೇಗೂರ ರೆಹಮಾನ ಅವರು, ಪೊಕ್ಸೋ ಕಾಯ್ದೆಯಡಿನ ಅಪರಾಧಕ್ಕೆ ೨೦ ವರ್ಷಗಳ ಎರಡು ಕಠಿಣ ಶಿಕ್ಷೆ ತಲಾ ೧೦ ಸಾವಿರ ರೂ.ಗಳ ದಂಡ, ತಪ್ಪಿದಲ್ಲಿ ಹೆಚ್ಚುವರಿ ತಲಾ ಒಂದು ವರ್ಷದ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ನೊಂದ ಅಪ್ರಾಪ್ತೆಗೆ 7 ಲಕ್ಷ ರೂ.ಗಳ ಪರಿಹಾರಧನವನ್ನು ಜಿಲ್ಲಾ ಕಾನೂನು ಪ್ರಾಧಿಕಾರಿಗಳ ಮೂಲಕ ಪಾವತಿಸುವಂತೆ ಸೂಚಿಸಿದ್ದಾರೆ.
ಆರೋಪಿಯು ಅಪ್ರಾಪ್ತೆಗೆ ಪ್ರೀತಿಸದಿದ್ದರೆ ಸಾಯುವುದಾಗಿ ಬೆದರಿಕೆ ಹಾಕಿ ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರವೆಸೆ ಗರ್ಭಿಣಿಯನ್ನಾಗಿಸಿದ್ದ. ೨೦೨೦ರಲ್ಲಿ ನಡೆದಿದ್ದ ಘಟನೆಯನ್ನು ಅಂದಿನ ಸಿಪಿಐ ಐ.ಆರ್. ಪಟ್ಟಣಶೆಟ್ಟಿ ಅವರು ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಶೇಷ ಜಿಲ್ಲಾ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಹಂಡಿ ಅಭಿಯೋಗದ ಪರವಾಗಿ ಸಾಕ್ಷಿಗಳ ವಿಚಾರಣೆ ಮತ್ತು ವಾದ ಮಂಡನೆ ಮಾಡಿ ಆರೋಪಿತನ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ಸಫಲರಾಗಿದ್ದಾರೆ.