ಪೆನ್​​ಡ್ರೈವ್​​​ ಪ್ರಕರಣ ನನಗೂ, ಡಿಕೆಶಿಗೂ ಯಾವುದೇ ಸಂಬಂಧ ಇಲ್ಲ

Advertisement

ಬೆಂಗಳೂರು: ಹಾಸನ ಪೆನ್​​ಡ್ರೈವ್​​​ ಪ್ರಕರಣ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಗಾಗಲಿ ಮತ್ತು ನನಗಾಗಲಿ ಯಾವುದೆ ಸಂಬಂಧವಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆನ್‌ಡ್ರೈವ್ ಕೇಸಲ್ಲಿ ಡಿಸಿಎಂ ಡಿಕೆ ಶಿವಕುಮಾರ್ 100 ಕೋಟಿ ಆಫರ್ ನೀಡಿದ್ದರು. ಆಫರ್ ತಂದವರು ಮಾಜಿ ಸಂಸದ ಎಲ್.ಆರ್.‌ ಶಿವರಾಮೇಗೌಡ ಎಂಬ ವಕೀಲ ದೇವರಾಜೇಗೌಡ ಆರೋಪಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.
ದೇವರಾಜೇಗೌಡ ನನಗೆ ಫೋನ್ ಮಾಡಿ, ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿಸುವಂತೆ ಹೇಳಿದ್ದ. ನಾನು ಆಗಲಿ ಎಂದು ಫೋನ್​ನಲ್ಲಿ ಹೇಳಿದ್ದೆ. ಈ ಮಾತನ್ನೇ ಇಟ್ಟುಕೊಂಡು ದೇವರಾಜೇಗೌಡ ಸುಳ್ಳು ಮಾಹಿತಿ ನೀಡಿದ್ದಾನೆ. ದೇವರಾಜೇಗೌಡ ಏ. 29ರಂದು ಬೆಂಗಳೂರಿನ ಎಂ.ಜಿ.ರಸ್ತೆಯ ಬೌರಿಂಗ್​ ಕ್ಲಬ್​ನಲ್ಲಿ ನಮ್ಮನ್ನು ಭೇಟಿ ಮಾಡಿದ್ದ. ಆದರೆ, ನಾನು ಅವನನ್ನ ಡಿಕೆ ಶಿವಕುಮಾರ್‌ ಅವರೊಂದಿಗೆ ಮಾತನಾಡಿಸಿ ತಪ್ಪು ಮಾಡಿದೆ ಎಂಬ ನೋವು ಕಾಡುತ್ತಿದೆ ಎಂದರು.
ಪೆನ್‌ಡ್ರೈವ್‌ ಪ್ರಕರಣ ಪ್ರಾಮಾಣಿಕವಾಗಿ ತನಿಖೆ ನಡೆಯಲಿ. ಈ ಪೆನ್‌ಡ್ರೈವ್‌ಗಳನ್ನ ವ್ಯಾಪಾರಕ್ಕೆ ಇಟ್ಟುಕೊಂಡಿದ್ದೇ ದೇವರಾಜೇಗೌಡ ಮತ್ತು ಕಾರ್ತಿಕ್. ಪೊಲೀಸ್ ಭಾಷೆಯಲ್ಲಿ ಕೇಳಿದರೆ ಎಲ್ಲಾ ಹೊರಗೆ ಬರುತ್ತೆ. ನನಗೂ, ಡಿ.ಕೆ ಶಿವಕುಮಾರ್‌ಗೂ ಈ ಪ್ರಕರಣಕ್ಕೆ ಯಾವುದೇ ಸಂಬಂಧ ಇಲ್ಲ ಎಂದರು.