ಪಿಎಸ್‌ಐ ನಿರ್ಲಕ್ಷ್ಯತನ: ಪಿಸ್ತೂಲ್ ಕಳವು

Advertisement

ಚಿತ್ರದುರ್ಗ: ಕರ್ತವ್ಯದ ಮೇಲೆ ಬಂದಿದ್ದ ಬೆಂಗಳೂರು ಕೆ.ಆರ್.ಪುರಂ ಠಾಣೆಯ ಸಬ್‌ಇನ್ಸ್ಪೆಕ್ಟೆರ್ ಕಲ್ಲಪ್ಪ ಅವರ ನಿರ್ಲಕ್ಷö್ಯತನದಿಂದಾಗಿ ಪಿಸ್ತೂಲ್ ಕಳುವಾಗಿರುವ ಘಟನೆ ಶುಕ್ರವಾರ ಚಿತ್ರದುರ್ಗ ತಾಲ್ಲೂಕಿನ ಜಾನುಕೊಂಡ ಡಾಬಾದಲ್ಲಿ ನಡೆದಿದೆ.
ಕಲ್ಲಪ್ಪ ಹಾಗೂ ಸಿಬ್ಬಂದಿ ಕಾಣೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ದಾವಣಗೆರೆಗೆ ಬಂದಿದ್ದರು. ನಾಪತ್ತೆಯಾಗಿದ್ದ ವ್ಯಕ್ತಿ ಸಿಕ್ಕ ಮೇಲೆ ಶಿವಮೊಗ್ಗದಿಂದ ಚನ್ನಗಿರಿ ಮೂಲಕ ಬೆಂಗಳೂರಿಗೆ ಇನೋವಾ ಕಾರಿನಲ್ಲಿ ಹೋಗುವಾಗ ಜಾನುಕೊಂಡದಲ್ಲಿ ನಿಲ್ಲಿಸಿದರು. ಅಲ್ಲಿಯೇ ಇದ್ದ ಡಾಬಾ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಉಟಕ್ಕೆ ತೆರಳಿದರು.
ಊಟ ಮಾಡುವ ವೇಳೆಯಲ್ಲಿ ಪಿಸ್ತೂಲನ್ನು ತೆಗದು ಇಟ್ಟಿದ್ದರು.ಊಟದ ಬಳಿಕ ಕೈ ತೊಳೆದುಕೊಂಡು ಬಂದು ನೋಡುವಷ್ಟರಲ್ಲಿ ಪಿಸ್ತೂಲ್ ಇರಲಿಲ್ಲ. ಎಲ್ಲಾ ಕಡೆ ವಿಚಾರಿಸಲಾಗಿ ಅದರ ಸುಳಿವು ಸಿಗಲಿಲ್ಲ. ಪಿಎಸ್‌ಐ ಕಲ್ಲಪ್ಪ, ಇಬ್ಬರು ಸಿಬ್ಬಂದಿ ಹಾಗೂ ನಾಪತ್ತೆಯಾಗಿ ಸಿಕ್ಕ ವ್ಯಕ್ತಿ ಇಷ್ಟು ಜನರು ಇದ್ದರೂ ಪಿಸ್ತೂಲ್ ನಾಪತ್ತೆಯಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ.
ಪಿಸ್ತೂಲನ್ನು ಪೊಲೀಸ್ ಅಧಿಕಾರಿಗಳು ಸೊಂಟದ ಬೆಲ್ಟ್ನಲ್ಲಿ ಹಾಕಿಕೊಂಡಿರಬೇಕು ಎಂಬ ನಿಯಮ ಇದೆ. ಇದನ್ನು ಬಿಚ್ಚಿ ಇಡುವಂತಿಲ್ಲ. ಅದು ಸಾರ್ವಜನಿಕ ಹೋಟೆಲ್‌ನಲ್ಲಿ ಬಿಚ್ಚಿ ಇಟ್ಟಿದ್ದು ನಿರ್ಲಕ್ಷತನವನ್ನು ಎತ್ತಿ ತೋರಿಸುತ್ತದೆ. ಅದರಲ್ಲಿ ಫುಲ್ ಲೋಡ್ ಬುಲೇಟ್ ಇದ್ದು ಏನಾದರೂ ಅನಾಹುತವಾಗುವ ಮುನ್ನ ಪತ್ತೆ ಹಚ್ಚಬೇಕಾಗಿದೆ. ಈಗಾಗಲೇ ಎಲ್ಲಾ ಕಡೆಗಳಲ್ಲಿಯೂ ಪೊಲೀಸರು ಶೋಧ ನಡೆಸಿದರೂ ಪ್ರಯೋಜನವಾಗಿಲ್ಲ. ಪಿಎಸ್‌ಐ ಕಲ್ಲಪ್ಪ, ತಾವು ಹಾಗೂ ಸಿಬ್ಬಂದಿ ಊಟ ಮಾಡುವ ವೇಳೆಯಲ್ಲಿ ತೆಗೆದಿಟ್ಟಿದ್ದ ಪಿಸ್ತೂಲ್ ಕಳವು ಆಗಿದೆ. ಹುಡುಕಿಕೊಡುವಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.