ಪಿಎಸ್‌ಐ ಕುರ್ಚಿಯಲ್ಲಿ ಕುಳಿತ ಸ್ವಾಮೀಜಿ

Advertisement

ಬೆಳಗಾವಿ: ಮಠಾಧೀಶರು, ಶ್ರೀಗಳು, ಜಗದ್ಗುರುಗಳಿಗೆ ವಿಶೇಷ ಗೌರವ ನೀಡಲಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಬೆಳಗಾವಿ ಜಿಲ್ಲೆಯ ಕುಡಚಿ ಪೊಲೀಸ್ ಠಾಣೆಯ ಫೋಟೋ ನೋಡಿದವರಿಗೆ ಒಂದರೆಕ್ಷಣ ಅವಾಕ್ಕಾಗುವುದು ಮಾತ್ರ ಸತ್ಯ.
ಸ್ವಾಮೀಜಿಯೊಬ್ಬರನ್ನು ಠಾಣಾಧಿಕಾರಿಯ ಕುರ್ಚಿಯ ಮೇಲೆ ಕೂರಿಸಿ ಅಧಿಕಾರಿ ಅವರ ಮುಂದೆ ಕೈ ಕಟ್ಟಿ ಕುಳಿತಿರುವ ಈ ದೃಶ್ಯ ಅಂಧಾಭಿಮಾನಕ್ಕೆ ಹಿಡಿದ ಕೈಗನ್ನಡಿ. ಅಷ್ಟಕ್ಕೂ ಯೂನಿಫಾರಂನಲ್ಲಿ ಹೀಗೆ ಕೈ ಕಟ್ಟಿ ಕುಳಿತಿರುವ ಅಧಿಕಾರಿ ಕುಡಚಿ ಪೊಲೀಸ್ ಠಾಣೆಯ ಪಿಎಸ್‌ಐ ಮಾಳಪ್ಪ ಪೂಜಾರಿ. ಠಾಣೆಗೆ ಬಂದ ಶ್ರೀಗಳನ್ನು ತಮ್ಮ ಆಸನದ ಮೇಲೆ ಕೂರಿಸಿ ತಾವು ಅವರ ಮುಂದೆ ಕೈ ಕಟ್ಟಿ ಕುಳಿತಿರುವುದನ್ನು ಕಂಡರೆ ಜಾತಿ-ಧಾರ್ಮಿಕತೆ, ವೈಯಕ್ತಿಕ ಅಭಿಮಾನ ಅನುರಾಗದ ಆಧಾರದ ಮೇಲೆ ಸರಕಾರಿ ಕಚೇರಿಯಲ್ಲಿ ಅಧಿಕಾರಿಗಳು ತಮಗೆ ಮನಬಂದಂತೆ ನಡೆದುಕೊಳ್ಳಲು ಅವಕಾಶವುಂಟೇ ಎಂಬ ಪ್ರಶ್ನೆ ಕಾಡದೆ ಇರದು. ಹಾಗೊಂದು ವೇಳೆ ಈ ಅಧಿಕಾರಿ ಶ್ರೀಗಳನ್ನು ತಮ್ಮ ಮನೆಯಲ್ಲಿ ಸಿಂಹಾಸನದ ಮೇಲೆ ಕೂರಿಸಿದ್ದರೆ ಯಾವುದೇ ಆಕ್ಷೇಪ ಇರಲಿಲ್ಲ. ಆದರೆ ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆಯೇ?