ವಿಜಯಪುರ: ಇಡೀ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಮಾಜಿ ಸಿಎಂ ಪುತ್ರ ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನನ್ನು 10 ಬಾರಿ ಕೇಳಿದ್ದಾರೆ. ಆದರೆ, ನಾನು ಸಿಬಿಐ ತನಿಖೆಗೆ ವಹಿಸಿದರೆ ಎಲ್ಲ ಸತ್ಯ ಹೊರ ಬರಲಿದೆ ಎಂದು ತಿಳಿಸಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡಾ ಇಡೀ ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದೇ ಹೇಳಿದ್ದಾರೆ. ಎಡಿಜಿಪಿ ಒಬ್ಬರನ್ನೇ ಅರೆಸ್ಟ್ ಮಾಡಿ ಎಫ್‌ಐಆರ್ ಮಾಡಿದ್ದೀರಾ, ಇದರ ಹಿಂದೆ ದೊಡ್ಡ ಕಳ್ಳರಿದ್ದಾರೆ. ಅಷ್ಟೇ ಏಕೆ ಈ ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್‌ನವರು, ನಮ್ಮವರು(ಬಿಜೆಪಿ) ಹಾಗೂ ಜೆಡಿಎಸ್‌ನವರೂ ಇದ್ದಾರೆ ಎಂದರು.