ಬೆಂಗಳೂರು: ವೃತ್ತಿಪರ ಕೋರ್ಸುಗಳು ಹಾಗೂ ವಿವಿಧ ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ ಮಾದರಿಯಲ್ಲೇ, ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ ಅಧ್ಯಯನಕ್ಕೂ ಸಿಇಟಿ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲು ಇಲಾಖೆ ಚಿಂತನೆ ನಡೆಸಿದೆ.
ಪಿಎಚ್.ಡಿ ಅಧ್ಯಯನಕ್ಕೆ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಸಿಇಟಿ ನಡೆಸಿ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಎಲ್ಲ ವಿವಿಗಳಿಗೂ ಸೀಟು ಹಂಚಿಕೆ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಪಿಎಚ್.ಡಿ ಪ್ರವೇಶಕ್ಕೆ ಪ್ರತಿ ವಿವಿಯಲ್ಲೂ ಆಯಾ ವಿಭಾಗಗಳಲ್ಲಿ ಲಭ್ಯ ಇರುವ ಸೀಟುಗಳ ಆಧಾರದ ಮೇಲೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ದಾರಿಯಾಗಿದೆ ಎಂಬ ಆರೋಪಗಳು ಎದುರಾಗುತ್ತಿರುವುದರಿಂದ ಇಲಾಖೆ ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.