ಇಸ್ಲಾಮಾಬಾದ್: ಪಂಜಾಬ್ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿ ಪ್ರವಾಹ ಬಂದಿದ್ದರಿಂದ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ೩೪೩ ಮಕ್ಕಳೂ ಸೇರಿದಂತೆ ಒಟ್ಟು ೯೩೭ ಜನ ಸಾವನ್ನಪ್ಪಿದ್ದಾರೆ. ೩ ಕೋಟಿ ಜನ ನಿರಾಶ್ರಿತರಾಗಿದ್ದಾರೆ. ಸಿಂಧ್ ಪ್ರದೇಶದಲ್ಲಿ ೩೦೬ ಜನ ಮರಣಹೊಂದಿದ್ದಾರೆ. ಹೀಗಾಗಿ ಆಗಸ್ಟ್ ೩೦ ವರೆಗೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಬಲೂಚಿಸ್ಥಾನ, ಖೈಬರ್ ಫಖ್ತುಂಕಾ ಮತ್ತು ಪಂಜಾಬ್‌ನಲ್ಲಿ ಸಾವುನೋವು ಅಧಿಕಗೊಂಡಿದೆ. ಗಿಲ್ಗಿಟ್ ಪ್ರದೇಶದಲ್ಲೂ ಹೆಚ್ಚು ಮಳೆಯಾಗಿದೆ. ಪಾಕ್‌ನಲ್ಲಿ ವಾಡಿಕೆ ಮಳೆ ೪೮ ಮಿಮಿ. ಆದರೆ ೧೬೮ ಮಿಮಿ ಮಳೆಯಾಗಿದೆ. ಅತಿ ಹೆಚ್ಚು ಮಳೆ ಬಿದ್ದಿರುವುದು ಪ್ರವಾಹಕ್ಕೆ ಕಾರಣ. ಸಿಂಧ್ ಪ್ರಾಂತ್ಯಕ್ಕೆ ಸೇರಿದ ೨೩ ಜಿಲ್ಲೆಗಳಲ್ಲಿ ಪ್ರವಾಹಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಪ್ರವಾಹ ಎದುರಿಸಲು ನಿಯಂತ್ರಣ ಕೇಂದ್ರ ಸ್ಥಾಪಿಸಲಾಗಿದೆ ಎಂದು ಪರಿಸರ ಬದಲಾವಣೆ ನೋಡಿಕೊಳ್ಳುವ ಸಚಿವ ಶರ‍್ರಿ ರೆಹಮಾನ್ ಹೇಳಿದ್ದಾರೆ.
೨೦೧೦ರಲ್ಲಿ ಇದೇ ರೀತಿ ಭಾರಿ ಮಳೆಯಾಗಿತ್ತು. ಈಗ ಮಳೆಯಿಂದ ಅಲ್ಲಲ್ಲಿ ಭೂಕುಸಿತ, ಹೆದ್ದಾರಿಗಳಲ್ಲಿ ಕುಸಿತ, ಸೇತುವೆಗಳು ಕೊಚ್ಚಿ ಹೋಗಿವೆ. ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿದೆ. ಪ್ರಧಾನಿ ಶಹಬಾಜ್ ಷರೀಫ್ ೧೫ ಶತಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪ್ರತಿ ಮನೆಗೂ ೨೪ ಸಾವಿರ ರೂ. ಪರಿಹಾರ ನೀಡುವ ಘೋಷಣೆ ಮಾಡಿದ್ದಾರೆ. ಪರಿಹಾರ ಕಾರ್ಯಗಳಿಗೆ ಒಟ್ಟು ೨೮ ಶತಕೋಟಿ ರೂ. ನಿಗದಿಪಡಿಸಲಾಗಿದೆ.