ಬೆಂಗಳೂರು: ನೂರಾರು ಆಶ್ಲೀಲ ಮತ್ತು ಅಸಹ್ಯ ಲೈಂಗಿಕ ಚಟುವಟಿಕೆ ಮತ್ತು ವಿಡಿಯೊ ಚಿತ್ರೀಕರಣದ ಆರೋಪ ಎದುರಿಸುತ್ತಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆಯೇ ವಿದೇಶಕ್ಕೆ ಓಡಿ ಹೋಗಲು ಪೊಲೀಸರೇ ನೆರವಾದರೆ? ಎಂಬ ಸಂಶಯ ಈಗ ಪ್ರಕರಣದ ತನಿಖೆಗಾಗಿ ನೇಮಿಸಿದ ವಿಶೇಷ ತನಿಖಾ ದಳವನ್ನು ಕಾಡುತ್ತಿದೆ. ಅಲ್ಲದೇ ೪ ದಿನಗಳ ಹಿಂದೆ ಬೆಂಗಳೂರಿನಿಂದ ಜರ್ಮನಿಯ ಫ್ರಾಂಕ್‌ಫರ್ಟ್ಗೆ ತೆರಳಿದ್ದ ಪ್ರಜ್ವಲ್ ಅಲ್ಲಿಂದ ಅಮೆರಿಕಕ್ಕೆ ಹೋಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಹಾಸನ ಸೇರಿದಂತೆ ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ಕಳೆದ ಶುಕ್ರವಾರ ನಡೆದ ಮತದಾನ ನಡೆದಿತ್ತು. ಈ ವೇಳೆ ಬೆಳಗ್ಗೆ ಹಾಸನ ಜಿಲ್ಲೆಯ ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು. ನಂತರ ಪಡುವಲಹಿಪ್ಪಿ ಗ್ರಾಮಕ್ಕೆ ಬಂದು ಮತ ಚಲಾಯಿಸಿದ್ದರು. ಪ್ರತಿಸಲ ತಂದೆ ರೇವಣ್ಣ, ತಾಯಿ ಭವಾನಿ, ಸಹೋದರ ಸೂರಜ್ ಜತೆಗೆ ಬಂದು ಪ್ರಜ್ವಲ್ ಈ ಬಾರಿ ಏಕಾಂಗಿಯಾಗಿ ಮತ ಹಾಕಿದ್ದರು. ಅಲ್ಲಿಂದ ಮಧ್ಯಾಹ್ನದವರೆಗೆ ಕ್ಷೇತ್ರದ ಕೆಲವೆಡೆ ಸಂಚರಿಸಿ, ಮತದಾನ ಪ್ರಕ್ರಿಯೆ ವೀಕ್ಷಿಸಿದ್ದರು. ನಂತರ ಏಕಾಏಕಿ ಎಲ್ಲರ ಸಂಪರ್ಕ ಕಳೆದುಕೊಂಡಿದ್ದರು.
ಅದೇ ದಿನ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್‌ಫರ್ಟ್ಗೆ ತೆರಳಿದ್ದಾರೆ ಎಂದು ಗುಪ್ತಚರ ಇಲಾಖೆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿತ್ತು. ಆದರೆ ಕಳೆದ ಬುಧವಾರದಿಂದಲೇ ಪ್ರಜ್ವಲ್ ವಿರುದ್ಧ ಎಫ್‌ಐಆರ್ ದಾಖಲಾಗಲಿದೆ ಹಾಗೂ ತನಿಖೆ ನಡೆಯಲಿದೆ ಎಂಬ ಚರ್ಚೆ ಸರಕಾರದ ಮಟ್ಟದಲ್ಲಿ ಗಹನವಾಗಿಯೇ ನಡೆದಿತ್ತು. ಮೂಲಗಳ ಪ್ರಕಾರ, ಕೆಲವು ಪೊಲೀಸ್ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣ ಅವರಿಗೆ ಎಫ್‌ಐಆರ್ ದಾಖಲಾಗುತ್ತದೆ ಎಂಬ ಮುನ್ಸೂಚನೆ ನೀಡಿದ್ದರು ಎಂಬ ಶಂಕೆಯನ್ನು ಈಗ ಎಸ್‌ಐಟಿ ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಹಾಲಿ ಸಂಸದ ಆಗಿರುವುದರಿಂದ ಕೇಂದ್ರ ಗೃಹ ಇಲಾಖೆಗೆ ವಿದೇಶ ಪ್ರವಾಸದ ಕುರಿತಂತೆ ಪೂರ್ವಭಾವಿ ಮಾಹಿತಿ ಇತ್ತು ಎನ್ನಲಾಗುತ್ತಿದೆ. ಆಶ್ಲೀಲ ವಿಡಿಯೊ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಪ್ರಜ್ವಲ್‌ಗೆ ಮೊದಲೇ ಇದ್ದುದರಿಂದ ಏಪ್ರಿಲ್ ಮೊದಲನೇ ವಾರದಲ್ಲಿ ಕೇಂದ್ರ ಗೃಹ ಇಲಾಖೆಯಿಂದ ಪೂರ್ವಾನುಮತಿ ಪಡೆದಿದ್ದರು ಎನ್ನಲಾಗುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಆಶ್ಲೀಲ ವಿಡಿಯೊ ಬಹಿರಂಗ ಆಗದೇ ಇದ್ದುದರಿಂದ ಕೇಂದ್ರ ಸರಕಾರ ಪ್ರಜ್ವಲ್ ಅವರ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿತ್ತು ಎಂದೂ ಹೇಳಲಾಗುತ್ತಿದೆ.
ಅಂತರ ಕಾಯ್ದುಕೊಳ್ಳಲು ಸೂಚನೆ!
ಪ್ರಜ್ವಲ್ ರೇವಣ್ಣ ಆಶ್ಲೀಲ ವಿಡಿಯೋ ಹಗರಣ ದೇಶ-ವಿದೇಶಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ವರಿಷ್ಠರು ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೆ ಸೂಕ್ತ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಬಿಜೆಪಿ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಲ್ಲಿ ಮೇ ೭ರಂದು ಮತದಾನ ನಡೆಯಲಿದೆ. ಹೀಗಾಗಿ ಪಕ್ಷಕ್ಕೆ ಹೆಚ್ಚು ಮುಜುಗರ ಆಗದಂತೆ ನೋಡಿಕೊಳ್ಳಲು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು ಪ್ರಚಾರ ನಡೆಸಲು ಸೂಚಿಸಿದ್ದಾರೆ ಎನ್ನಲಾಗಿದೆ.