ಪದಗಳ ದೊಡ್ಡ ಅಭಿಮಾನಿ ಬರಹಗಾರರು ಸುಜ್ಞಾನಿ

Advertisement

ಅಕ್ಷರ ಕಲಿತ ಲಕ್ಷಾಂತರ ಜನರ ನಡುವೆ ಬರಹಗಾರರು-ಪತ್ರಕರ್ತರಾಗಿ ರೂಪಗೊಳ್ಳುವುದು ಸುಯೋಗ ಎಂದು ಹೆಸರಾಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.
`ಸಂಯುಕ್ತ ಕರ್ನಾಟಕ’ದ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಸೋಮವಾರದ ಗೋಧೂಳಿ ಹೊತ್ತಲ್ಲಿ ಯುಗಾದಿಯ ಸಂಭ್ರಮ..! ಮಹಾಚೈತ್ರದ ಆಗಮನದ ಸಡಗರ. ಬೇವು-ಬೆಲ್ಲದ ಹಬ್ಬದ ಬರುವ ಮುನ್ನವೇ ಸವಿಸವಿ ಮಾತುಗಳ ಹೋಳಿಗೆಯ ರಸದೂಟ..!
ಹೌದು, ಇದು ಉತ್ಪ್ರೆಕ್ಷೆಯ ಮಾತಲ್ಲ, ಹೊಸತು ಹೊಸತು ತರುವ ಯುಗಾದಿಯ ಸವಿಯನ್ನು ಸವಿಮಾತಿನ ಕಲಾವಿದ ರಮೇಶ್ ಅರವಿಂದ್ ಅವರು ಉಣಬಡಿಸಿದ ಪರಿಯದು.
ಸಂಯುಕ್ತ ಕರ್ನಾಟಕದ ಯುಗಾದಿ ವಿಶೇಷಾಂಕವನ್ನು ಲೋಕಾರ್ಪಣೆಗೊಳಿಸಿ ನಲ್ನುಡಿಗಳನ್ನಾಡಿದ ರಮೇಶ್ ಅರವಿಂದ್, ಹುಟ್ಟುವ ಪ್ರತಿ ಮಕ್ಕಳಿಗೆ ಅಕ್ಷರ ಕಲಿಸುತ್ತಾರೆ. ಎಲ್ಲರೂ ಅಕ್ಷರವಂತರಾಗುತ್ತಾರೆ. ಆದರೆ, ಕೆಲವರು ಮಾತ್ರ ಬರಹಗಾರರಾಗಿ, ಪತ್ರಕರ್ತರಾಗಿ ರೂಪಗೊಳ್ಳುವುದು ನಿಜಕ್ಕೂ ಬಹುದೊಡ್ಡ ಊಡುಗೊರೆ. ಎಲ್ಲರಿಗೂ ಅದು ಸಾಧ್ಯವಿಲ್ಲ ಎಂದು ಬಣ್ಣಿಸಿದರು.
ನಾನು ಪದಗಳ ಅಭಿಮಾನಿ. ನನಗೆ ಬರಹಗಾರರು ಯಾವ ರೂಪದಲ್ಲಿದ್ದರೂ, ಸಿನಿಮಾ, ಪತ್ರಿಕೋದ್ಯಮ ಮುಂತಾದ ಯಾವ ಕ್ಷೇತ್ರದವರಾದರೂ ನನಗೆ ಅವರ ಬಗೆಗೆ ಅಪಾರ ಗೌರವ. ಪದಗಳನ್ನು ಜೋಡಿಸುವವರು, ಪದದಲ್ಲೇ ಚಮತ್ಕಾರ ಮಾಡುವುದರೆಂದರೆ ನನಗೆ ಅಚ್ಚುಮೆಚ್ಚು ಎಂದು ರಮೇಶ್ ಅರವಿಂದ್ ಅಚ್ಚರಿ ಮಿಶ್ರಿತ ಸಂತಸ ವ್ಯಕ್ತಪಡಿಸಿದರು.
ಲಾಲ್‌ಬಾಗ್ ಅಂದಾಕ್ಷಣ ಮುಖ ಅರಳುತ್ತದೆ, ಸುಮಧುರ ಚಿತ್ರಣ ನೆನಪಾಗುತ್ತದೆ. ಅದೇ ಜಲಿಯನ್ ವಾಲಾಬಾಗ್ ಅಂದಾಗ ರಕ್ತಪಾತ, ಹಿಂಸೆ, ನೋವಿನ ಚಿತ್ರ ಮನದಲ್ಲಿ ಮೂಡುತ್ತದೆ. ಇದು ಪದಗಳ ಶಕ್ತಿ. ಈ ಶಕ್ತಿಯನ್ನು ತೋರ್ಪಡಿಸುವ ಲೇಖನಿಯೇ ಆಯುಧ. ಈ ಪದ ಚಮತ್ಕಾರ ನನಗಂತೂ ನಂಬಲಾರದ ಸಂಗತಿಯಷ್ಟು ಅಚ್ಚರಿ. ಬಾಲ್ಯದಿಂದಲೂ ಅಷ್ಟೆ ನಾನು ಪದಗಳ ಅಭಿಮಾನಿ. ಕವಿಯಿರಲಿ, ಲೇಖಕನಿರಲಿ, ಪತ್ರಕರ್ತರಿರಲಿ ಎಲ್ಲರನ್ನೂ ನಾನು ಬಹಳ ಮೆಚ್ಚುತ್ತೇನೆ. ಬರಹಗಾರರಿಗೆ ಕೊಡಬೇಕಾದ ಗೌರವ-ಆದಾಯ ನೀಡಿದರೆ ಅದ್ಭುತವಾದ ಚಿತ್ರಗಳು ಬಂದೇ ಬರುತ್ತವೆ ಎಂಬುದು ನನ್ನ ದೃಢವಾದ ನಂಬಿಕೆ. ಅಂತಹ
ವ್ಯಕ್ತಿಗಳು ಪತ್ರಕರ್ತರು, ಸಂಪಾದಕರು. ಒಂದು ಕಥೆ-ಘಟನೆಯನ್ನು ಮುಂದ? ಮುಂದ’ ಅಂತ ಕುತೂಹಲಭರಿತವಾಗಿ ಕಟ್ಟಿಕೊಡುವುದೇ ಕಲೆ. ಹಾಗಾಗಿ ಅವರೆಲ್ಲರ ಕುರಿತು ಅದ್ಭುತವಾದ ಗೌರವ ನನಗೆ ಎಂದು ಬಣ್ಣಿಸಿದರು.
ನಾವು ಬರಹಗಾರರನ್ನು ಮೆಚ್ಚಿಕೊಳ್ಳುವುದು, ಕಲೆ-ಕಲಾವಿದನನ್ನು ಜನ ಮೆಚ್ಚಿಕೊಳ್ಳುವುದು. ಇದು ಪರಸ್ಪರ ಆರಾಧಿಸಿಕೊಳ್ಳುವ ಸಮಾಜ ನಮ್ಮದು ಎಂದರು.
ಕರ್ಮವೀರ ವಾರಪತ್ರಿಕೆಯ ಸಂಪಾದಕ ಜಿ. ಅನಿಲ್‌ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಸ್ತೂರಿ ಮಾಸಪತ್ರಿಕೆಯ ಸಂಪಾದಕಿ ಶಾಂತಲಾ ಧರ್ಮರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂಯುಕ್ತ ಕರ್ನಾಟಕದ ಸಂಪಾದಕರಾದ ವಸಂತ ನಾಡಿಗೇರ ಅವರು ರಮೇಶ್ ಅರವಿಂದ್ ಅವರ ವೈಶಿಷ್ಟö್ಯವನ್ನು ವಿವರಿಸಿ ಎಲ್ಲರಿಗೂ ವಂದಿಸಿದರು. ಲೋಕ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಹರಿ ಚನ್ನಕೇಶವ, ಸಾರ್ವಜನಿಕ ಸಂಪರ್ಕಾಧಿಕಾರಿ ಎನ್.ಎಂ.ಹೆಗಡೆ, ಜಾಹೀರಾತು ವಿಭಾಗದ ಪ್ರಧಾನ ವ್ಯವಸ್ಥಾಪಕಿ ವಿಜಯಲಕ್ಷಿö್ಮ, ಪ್ರಸಾರಂಗದ ಪ್ರಧಾನ ವ್ಯವಸ್ಥಾಪಕ ನರಸಿಂಹಮೂರ್ತಿ, ಸಂಯುಕ್ತ ಕರ್ನಾಟಕದ ಮುಖ್ಯ ವರದಿಗಾರ ನರಸಿಂಹರಾವ್, ಕರ್ಮವೀರ, ಕಸ್ತೂರಿ ಮತ್ತು ಸಂಯುಕ್ತ ಕರ್ನಾಟಕದ ಸಂಪಾದಕೀಯ ವಿಭಾಗದ ಸಿಬ್ಬಂದಿ ಮತ್ತಿತರರು ಕಾರ್ಯಕ್ರಮಕ್ಕ ಸಾಕ್ಷೀಭೂತರಾದರು.

ಪತ್ರಿಕೋದ್ಯಮದ ಗಾಂಧಾರಿ
ʼಸಂಯುಕ್ತ ಕರ್ನಾಟಕʼ ಪತ್ರಿಕೋದ್ಯಮದ ಗಾಂಧಾರಿಯಿದ್ದಂತೆ. ಮಹಾಭಾರತದ ಗಾಂಧಾರಿಗೆ ನೂರು ಮಕ್ಕಳು, ಅಂತೆಯೇ ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ನೋಡಿ-ಓದಿದ ಮೇಲೆ ನೂರು ಪತ್ರಿಕೆಗಳು-ನಿಯತಕಾಲಿಕೆಗಳು ಹುಟ್ಟುಕೊಂಡಿವೆ. ಹಾಗಾಗಿ ಇದು ಪತ್ರಿಕೋದ್ಯಮದ ಗಾಂಧಾರಿ ಎಂದು ರಮೇಶ್ ಅರವಿಂದ್ ವಿಭಿನ್ನವಾಗಿ ವ್ಯಾಖ್ಯಾಸಿದರು. ಸಂಯುಕ್ತ ಕರ್ನಾಟಕ’ ಇತಿಹಾಸವನ್ನು ದಾಖಲಿಸಿರುವುದು ಮಾತ್ರವಲ್ಲ, ಇತಿಹಾಸದ ಸೃಷ್ಟಿ ಕಾರಣೀಕರ್ತವಾಗಿದೆ. ಕನ್ನಡಿಗರ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪ್ರತಿಫಲಿಸಿ ಕನ್ನಡಿಯಂತೆ ಕೆಲಸ ಮಾಡಿದೆ. ಭವಿಷ್ಯದಲ್ಲಿ ನಾವು ಹೇಗಿರಬೇಕೆಂದು ಮಾರ್ಗ ತೋರುವ ಸೇತುವೆಯಾಗಿದೆ. ಹಾಗಾಗಿ ಸಂಯುಕ್ತ ಕರ್ನಾಟಕ, ಕರ್ಮವೀರ ಮತ್ತು ಕಸ್ತೂರಿ ಪತ್ರಿಕೆಗಳು ಕರ್ನಾಟಕದ ಆಧಾರಸ್ತಂಭ, ಸೇತುವೆ ಮತ್ತು ಕನ್ನಡಿ ಎಲ್ಲವೂ ಆಗಿದೆ. ಇದು ಸಕ್ಕರೆಯಂತೆ ಎಲ್ಲರಿಗೂ ಸವಿ ಉಣಿಸುತ್ತದೆ ಎಂದರು.